AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಕ್ಕೆ ಬಂದ ಮೊದಲ ದಿನವೇ 5 ಮಹತ್ವದ ಆದೇಶ ಹೊರಡಿಸಿದ ಎಂ.ಕೆ.ಸ್ಟಾಲಿನ್: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹಾಲು ಅಗ್ಗ

ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಬಸ್​ ಚಾರ್ಜ್​ನಿಂದ ಸಂಪೂರ್ಣ ವಿನಾಯ್ತಿ ಸಿಕ್ಕಿದೆ. ತಮಿಳುನಾಡು ಹಾಲು ಒಕ್ಕೂಟದಿಂದ (ಆವಿನ್) ಹಾಲಿನ ಮೇಲೆ 3 ರೂಪಾಯಿ ಕಡಿಮೆ ಮಾಡಿದ್ದಾರೆ.

ಅಧಿಕಾರಕ್ಕೆ ಬಂದ ಮೊದಲ ದಿನವೇ 5 ಮಹತ್ವದ ಆದೇಶ ಹೊರಡಿಸಿದ ಎಂ.ಕೆ.ಸ್ಟಾಲಿನ್: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹಾಲು ಅಗ್ಗ
ಎಂ.ಕೆ. ಸ್ಟಾಲಿನ್​
Ghanashyam D M | ಡಿ.ಎಂ.ಘನಶ್ಯಾಮ
|

Updated on: May 07, 2021 | 3:28 PM

Share

ಚೆನ್ನೈ: ಕೋವಿಡ್-19 ಪಿಡುಗಿನ ವಿರುದ್ಧದ ಯಶಸ್ವಿ ಹೋರಾಟಕ್ಕೆ ಹಾಗೂ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಐದು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಬಡತನ ರೇಖೆಗಿಂತಲೂ ಕೆಳಗಿರುವ ಬಿಪಿಎಲ್ ಕಾರ್ಡ್​​ದಾರರ ಪ್ರತಿ ಕುಟುಂಬಕ್ಕೆ ತಲಾ ₹ 4000 ಮೊತ್ತವನ್ನು ಕೋವಿಡ್ ಪರಿಹಾರ ನಿಧಿಯಾಗಿ ಕೊಡಲು ನಿರ್ಧರಿಸಿದ್ದಾರೆ. ಈ ಸಹಾಯಧನದ ಮೊದಲ ಕಂತಾಗಿ ₹ 2000 ಇದೇ ತಿಂಗಳು ಎಲ್ಲ ಕುಟುಂಬಗಳಿಗೂ ಸಿಗಲಿದೆ.

ಮುಖ್ಯಮತ್ರಿ ಆರೋಗ್ಯ ವಿಮೆ ಯೋಜನೆಯನ್ನು ಕೋವಿಡ್ ಸಂಬಂಧಿತ ಖರ್ಚುಗಳಿಗೂ ವಿಸ್ತರಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೂ ಸರ್ಕಾರ ಆ ಮೊತ್ತವನ್ನು ಭರಿಸಲಿದೆ. ಕೋವಿಡ್ ಸಂಬಂಧಿತ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳ ಪಾಲು ಬಹುದೊಡ್ಡದಿರುವ ಹಿನ್ನೆಲೆಯಲ್ಲಿ ಈ ಕ್ರಮವು ಮಹತ್ವದ್ದೆನಿಸಿದೆ.

ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಬಸ್​ ಚಾರ್ಜ್​ನಿಂದ ಸಂಪೂರ್ಣ ವಿನಾಯ್ತಿ ಸಿಕ್ಕಿದೆ. ತಮಿಳುನಾಡು ಹಾಲು ಒಕ್ಕೂಟದಿಂದ (ಆವಿನ್) ಹಾಲಿನ ಮೇಲೆ 3 ರೂಪಾಯಿ ಕಡಿಮೆ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆಯನ್ನು ರಚಿಸಲು ಸ್ಟಾಲಿನ್ ಆದೇಶಿಸಿದ್ದಾರೆ.

ಕಳೆದ ಜನವರಿ 2021ರಂದು ಸ್ಟಾಲಿನ್ ಚುನಾವಣಾ ಪ್ರಚಾರವನ್ನು ಆರಂಭಿಸುವಾಗ ‘ಉಂಗಳ್ ತೋಗಿತಿಯಿಲ್ ಸ್ಟಾಲಿಲ್’ (ನಿಮ್ಮ ಕ್ಷೇತ್ರದಲ್ಲಿ ಸ್ಟಾಲಿನ್) ರಣಘೋಷ ಮೊಳಗಿಸಿದ್ದರು. ಡಿಎಂಕೆಗೆ ಅಧಿಕಾರ ನೀಡಿದರೆ ಮೊದಲು 100 ದಿನಗಳಲ್ಲಿ 1 ಕೋಟಿ ಕುಟುಂಬದ ಕಷ್ಟ ಆಲಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಮೊದಲ ದಿನವೇ ಐದು ಮಹತ್ವದ ಆದೇಶಗಳಿಗೆ ಸಹಿಹಾಕುವ ಮೂಲಕ ಕೆಲಸಕ್ಕೆ ಮೊದಲ ಮಣೆ ಎಂಬ ಸಂದೇಶವನ್ನು ಸ್ಟಾಲಿನ್ ರವಾನಿಸಿದ್ದಾರೆ. ತಮಿಳುನಾಡಿನಲ್ಲಿ ಸ್ಟಾಲಿನ್​​​ ಅವರನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ತನ್ನ ಮೈತ್ರಿಪಕ್ಷ ಎಐಎಡಿಎಂಕೆ ಜೊತೆಗೂಡಿ ಮುಂದಿನ ದಿನಗಳಲ್ಲಿ ಯಾವ ನಡೆಗೆ ಮುಂದಾಗಲಿದೆ ಎಂಬುದರ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಕೊರೊನಾ 2ನೇ ಅಲೆಯನ್ನು ನಿರ್ವಹಿಸುವುದು ಸ್ಟಾಲಿನ್ ಎದುರು ಇರುವ ಮಹತ್ವದ ಸವಾಲಾಗಿದೆ.

(Tamil Nadu Chief Minister MK Stalin important announcement on first day free bus journey to women milk price reduced)

ಇದನ್ನೂ ಓದಿ: ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಗಾಂಧಿ ಮತ್ತು ನೆಹರು ಹೆಸರು ಸೂಚಿಸಿದ ಎಂ.ಕೆ ಸ್ಟಾಲಿನ್

ಇದನ್ನೂ ಓದಿ: MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಪ್ರಮಾಣ ವಚನ ಸ್ವೀಕಾರ