ಭಾರತದಲ್ಲಿ ಈಗ ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಕೊರತೆ ಎದುರಾಗಿದೆ. ಲಸಿಕೆಯ ಕೊರೆತೆಯಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಕುಸಿಯುತ್ತಿದೆ. ಜನವರಿ ತಿಂಗಳಲ್ಲಿ ದೇಶದ ಲಸಿಕೆಯ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದರು. ಆದರೇ, ಏಪ್ರಿಲ್ ತಿಂಗಳ ನಂತರ ಕೊರೊನಾದ ಎರಡನೇ ಅಲೆ ದೇಶವನ್ನ ಅಪ್ಪಳಿಸಿದಾಗ, ಕೊರೊನಾ ಲಸಿಕೆ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಆದರೇ, ಲಸಿಕಾ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಲಸಿಕೆ ಪೂರೈಕೆಯಾಗಿಲ್ಲ. ಬಹಳಷ್ಟು ರಾಜ್ಯ ಸರ್ಕಾರಗಳು 18 ವರ್ಷ ಮೇಲ್ಪಟ್ಟವರಿಗೆ ಪೂರ್ಣ ಪ್ರಮಾಣದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ಆದರೆ, ಈಗ ಕೊರೊನಾ ಲಸಿಕೆಯ ಕೊರತೆಯ ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಸರ್ಕಾರದ ಮುಂದೆ ಕೆಲವೊಂದು ಆಯ್ಕೆ ಹಾಗೂ ಮಾರ್ಗಗಳು ಇವೆ.
ಇವುಗಳನ್ನು ಅನುಸರಿಸಿದರೆ, ದೇಶದಲ್ಲಿ ಕೊರೊನಾ ಲಸಿಕೆಯ ಉತ್ಪಾದನೆಯನ್ನು ಶೀಘ್ರಗತಿಯಲ್ಲಿ ಹೆಚ್ಚಿಸಬಹುದು. ಈ ವರ್ಷದ ಅಂತ್ಯದೊಳಗೆ ದೇಶದ ಎಲ್ಲ ನಾಗರಿಕರಿಗೂ ಕೊರೊನಾ ಲಸಿಕೆಯನ್ನು ನೀಡಲು ಸಾಧ್ಯ. ಕೇಂದ್ರ ಸರ್ಕಾರ ಕೊರೊನಾ ಲಸಿಕೆಯ ಕೊರತೆಯ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲವೊಂದು ಅಸಾಮಾನ್ಯ ತೀರ್ಮಾನಗಳನ್ನೇ ತೆಗೆದುಕೊಳ್ಳಬೇಕಾಗುತ್ತೆ.
ವಿದೇಶಕ್ಕೆ ಲಸಿಕೆ ರಫ್ತು, ಭಾರತದಲ್ಲಿ ಕೊರತೆ
ಕೊರೊನಾ ಲಸಿಕೆಯನ್ನು ಈಗ ಭಾರತದಲ್ಲಿ ಎರಡೇ ಕಂಪನಿಗಳು ಉತ್ಪಾದಿಸುತ್ತಿವೆ. ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜನಿಕಾ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿದೆ. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಭಾರತ ಸರ್ಕಾರದ ಐಸಿಎಂಆರ್ ಜೊತೆಗೂಡಿ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ದಿಪಡಿಸಿದೆ. ಭಾರತದಲ್ಲಿ ಮೊದಲು ಈ ಎರಡು ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿತ್ತು. ಬಳಿಕ ರಷ್ಯಾದ ಸ್ಪುಟ್ನಿಕ್-V ಲಸಿಕೆಯ ತುರ್ತು ಬಳಕೆಗೂ ಏಪ್ರಿಲ್ ತಿಂಗಳಲ್ಲಿ ಡಿಸಿಜಿಐ ಒಪ್ಪಿಗೆ ನೀಡಿದೆ. ಆದರೆ, ಇದುವರೆಗೂ ಭಾರತವು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯ ಮೇಲೆಯೇ ಹೆಚ್ಚಾಗಿ ಅವಲಂಬನೆಯಾಗಿದೆ.
ಈ ಎರಡೂ ಕಂಪನಿಗಳಿಗೂ ತಿಂಗಳಿಗೆ 8 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇದೆ. ಎರಡೂ ಕಂಪನಿಗಳು ಜೂನ್, ಜುಲೈ ತಿಂಗಳಿನಿಂದ ತಮ್ಮ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕೂಡ ಕ್ರಮ ಕೈಗೊಂಡಿವೆ. ಆದರೂ ಈ ಕಂಪನಿಗಳಿಗೆ ವಿದೇಶಗಳಿಗೂ ಲಸಿಕೆ ಪೂರೈಸಬೇಕಾದ ಒತ್ತಡ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿ ಬಡ ರಾಷ್ಟ್ರಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಪೂರೈಸಬೇಕು. ಜೊತೆಗೆ ತಮಗೆ ಲಸಿಕೆ ಉತ್ಪಾದನೆಗೆ ಲೈಸೆನ್ಸ್ ನೀಡಿರುವ ಆಕ್ಸ್ಫರ್ಡ್ ವಿವಿ-ಅಸ್ಟ್ರಾಜನಿಕಾ ಕಂಪನಿಗಳಿಗೆ ಭಾರತದಲ್ಲಿ ಲಸಿಕೆ ಉತ್ಪಾದಿಸಿ ಪೂರೈಸಬೇಕಾದ ಹೊಣೆಗಾರಿಕೆಯು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮೇಲಿದೆ. ಕೋವ್ಯಾಕ್ಸ್ಗೆ ಸೆರಮ್ ಇನ್ಸ್ಟಿಟಿಟ್ಯೂಟ್ ಈ ವರ್ಷದೊಳಗೆ ನೂರು ಕೋಟಿ ಡೋಸ್ ಲಸಿಕೆಯನ್ನು ಪೂರೈಸಬೇಕು. ಹೀಗಾಗಿ ಈ ಎರಡು ಕಂಪನಿಗಳಿಂದ ಮುಂದಿನ ತಿಂಗಳುಗಳಲ್ಲಿ ಲಸಿಕೆಯ ಉತ್ಪಾದನೆಯೂ ಹೆಚ್ಚಾದರೂ, ಭಾರತಕ್ಕೆ ಸಿಗುವ ಲಸಿಕೆಯ ಪ್ರಮಾಣ ಎಷ್ಟು ಎನ್ನುವ ಪ್ರಶ್ನೆಯು ಕೂಡ ಅಷ್ಟೇ ಮುಖ್ಯ.
ಇದನ್ನೂ ಓದಿ: Explainer: ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯದಿದ್ದರೆ ಏನಾಗುತ್ತದೆ?
ಕೊರೊನಾ ಲಸಿಕೆ
ಕಂಪಲ್ಸರಿ ಲೈಸೆನ್ಸ್ ನೀಡಿಕೆ ಮೂಲಕ ಉತ್ಪಾದನೆ
ಇಂಥ ಸ್ಥಿತಿಯಲ್ಲಿ ಭಾರತ ಸರ್ಕಾರವು ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಬೇರೆ ಕಂಪನಿಗಳಿಗೂ ಕಂಪಲ್ಸರಿ ಲೈಸೆನ್ಸ್ ನೀಡಲು ಇಂಡಿಯನ್ ಪೇಟೇಂಟ್ ಕಾಯಿದೆಯಡಿ ಅವಕಾಶ ಇದೆ. ಕಂಪಲ್ಸರಿ ಲೈಸೆನ್ಸ್ ಅಂದರೇ, ಕೇಂದ್ರ ಸರ್ಕಾರವು ಮೂರನೇ ಕಂಪನಿಗೆ ಪೇಟೇಂಟ್ ಹೊಂದಿರುವ ಕಂಪನಿಯ ಒಪ್ಪಿಗೆ ಇಲ್ಲದೇ ಲಸಿಕೆಯನ್ನು ಉತ್ಪಾದಿಸಲು ಲೈಸೆನ್ಸ್ ಮಂಜೂರು ಮಾಡಬಹುದು. ಕಂಪಲ್ಸರಿ ಲೈಸೆನ್ಸ್ ಪಡೆದ ಮೂರನೇ ಕಂಪನಿಯು ಕೇಂದ್ರ ಸರ್ಕಾರ ನಿಗದಿಪಡಿಸಿದ ರಾಜಧನವನ್ನು (ರಾಯಲ್ಟಿಯನ್ನು) ಪೇಟೇಂಟ್ ಪಡೆದ ಕಂಪನಿಗೆ ನೀಡಬೇಕಾಗುತ್ತೆ. ಕೊರೊನಾದಂಥ ಸಾಂಕ್ರಾಮಿಕದ ಸಂದರ್ಭದಲ್ಲಿ ಇಂಡಿಯನ್ ಪೇಟೇಂಟ್ ಕಾನೂನಿನಲ್ಲಿರುವ ಅಂಶಗಳನ್ನ ಬಳಸಿಕೊಂಡು ಹೀಗೆ ಕಂಪಲ್ಸರಿ ಲೈಸೆನ್ಸ್ ನೀಡುವ ಮೂಲಕ ಬೇರೆ ಕಂಪನಿಗಳು ಕೂಡ ಕೊರೊನಾ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವಂತೆ ಮಾಡಬಹುದು.
ಹೇಗಿದ್ದರೂ, ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಕೇಂದ್ರ ಸರ್ಕಾರದ ಐಸಿಎಂಆರ್ ಜೊತೆಗೂಡಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ದಿಪಡಿಸಿದೆ. ಇದು ಸ್ವದೇಶಿ ಲಸಿಕೆ. ಈ ಲಸಿಕೆಯ ಕಂಪಲ್ಸರಿ ಲೈಸೆನ್ಸ್ ಅನ್ನು ಭಾರತದಲ್ಲಿರುವ ಇತರೆ ಲಸಿಕಾ ಕಂಪನಿಗಳಿಗೂ ನೀಡಿ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಅವಕಾಶ ಇದೆ. ಕಂಪಲ್ಸರಿ ಲೈಸೆನ್ಸ್ ಪಡೆದ ಮೂರನೇ ಕಂಪನಿಯು ಭಾರತ್ ಬಯೋಟೆಕ್ ಕಂಪನಿಗೆ ಇಂತಿಷ್ಟು ಎಂದು ರಾಜಧನ ಅಂದರೇ, ರಾಯಲ್ಟಿಯನ್ನು ನೀಡಲಿದೆ. ಕೆನಡಾ ಮತ್ತು ಚಿಲಿ ದೇಶಗಳು ಕೊರೊನಾ ಲಸಿಕೆಯ ಉತ್ಪಾದನೆಯನ್ನ ಹೆಚ್ಚಿಸಲು ಈ ಕಂಪಲ್ಸರಿ ಲೈಸೆನ್ಸ್ ನೀಡುವ ಕ್ರಮವನ್ನು ಅನುಸರಿಸುತ್ತಿವೆ. ಭಾರತದ ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಲಸಿಕೆ ಉತ್ಪಾದನೆಯನ್ನ ಹೆಚ್ಚಿಸಲು ಏಕೆ ಕಂಪಲ್ಸರಿ ಲೈಸೆನ್ಸ್ ನೀಡುವುದನ್ನ ಪರಿಗಣಿಸಬಾರದು ಎಂದು ಕೇಳಿದೆ. ಇದರ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತನ್ನ ನಿಲುವನ್ನು ತಿಳಿಸಬೇಕಾಗಿದೆ.
ಇದನ್ನೂ ಓದಿ: Explainer: ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ: ನಮ್ಮ ಸರ್ಕಾರ ಎಡವಿದ್ದು ಎಲ್ಲಿ? ಏನು ಪರಿಹಾರ?
ಪ್ರಾತಿನಿಧಿಕ ಚಿತ್ರ
ವಾಲಂಟರಿ ಲೈಸೆನ್ಸ್ ನೀಡಿಕೆ
ವಾಲಂಟರಿ ಲೈಸೆನ್ಸ್ ನೀಡಿಕೆ ಅಂದರೆ, ಕೊರೊನಾ ಲಸಿಕೆಯ ಪೇಟೆಂಟ್ ಪಡೆದಿರುವ ಕಂಪನಿಯು ಮೂರನೇ ಕಂಪನಿಯೊಂದಿಗೆ ಲಸಿಕೆ ಉತ್ಪಾದಿಸಿ, ಮಾರಾಟ ಮಾಡಲು ಪರಸ್ಪರ ಒಪ್ಪಂದ ಮಾಡಿಕೊಂಡು ಲೈಸೆನ್ಸ್ ನೀಡಬಹುದು. ಇದರಿಂದ ಎರಡು ಕಂಪನಿಗಳಿಗೂ ಲಾಭವಾಗಲಿದೆ. ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯನ್ನ ವಾಲಂಟರಿ ಲೈಸೆನ್ಸ್ ಮೂಲಕ ಬೇರೆ ಕಂಪನಿಗಳು ಕೂಡ ಉತ್ಪಾದನೆ ಮಾಡಲು ಅವಕಾಶ ಕೊಡಬಹುದು.
ಭಾರತ್ ಬಯೋಟೆಕ್ ಕಂಪನಿಯು ಏಪ್ರಿಲ್ 16ರಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಸರ್ಕಾರ ಸ್ವಾಮ್ಯದ ಹಾಫ್ ಕೈನೆ ಬಯೋ ಫಾರ್ಮಾಸೂಟಿಕಲ್ಸ್ ಕಾರ್ಪೋರೇಷನ್ ಜೊತೆಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲು ವಾಲಂಟರಿ ಲೈಸೆನ್ಸ್ ನೀಡಿ ಒಪ್ಪಂದ ಮಾಡಿಕೊಂಡಿದೆ. ಮುಂಬೈನಲ್ಲಿರುವ ಹಾಫ್‌ಕೈನೆ ಬಯೋ ಫಾರ್ಮಾಸೂಟಿಕಲ್ಸ್ ಕಾರ್ಪೋರೇಷನ್ ಕಂಪನಿಯು ಈಗ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಹಾಫ್ ಕೈನೆ ಇನ್ಸ್ ಟಿಟ್ಯೂಟ್ ಕಂಪನಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಕೊರೊನಾ ಲಸಿಕೆಯ ಉತ್ಪಾದನೆಯ ಖರ್ಚು ವೆಚ್ಚಗಳಿಗಾಗಿ, ತುರ್ತು ನಿಧಿಯಾಗಿ ₹ 94 ಕೋಟಿ ಹಣವನ್ನು ನೀಡಿದೆ. ಕೇಂದ್ರ ಸರ್ಕಾರ ₹ 65 ಕೋಟಿ ಹಣ ನೀಡಲಿದೆ.
ಕೇಂದ್ರ ಸರ್ಕಾರವು ಕೂಡ ಬೇರೆ ಲಸಿಕಾ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಲಸಿಕೆ ಉತ್ಪಾದಿಸಲು ಲೈಸೆನ್ಸ್ ನೀಡಬಹುದು. ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯ ಸಂಶೋಧನೆ, ಅಭಿವೃದ್ದಿಯಲ್ಲಿ ಕೇಂದ್ರ ಸರ್ಕಾರದ ಪಾಲು ಕೂಡ ಇದೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲೂ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ವಿದೇಶಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಇದೆ. ಕೋವ್ಯಾಕ್ಸಿನ್ ಲಸಿಕೆಯ ತಂತ್ರಜ್ಞಾನವನ್ನು ವಿದೇಶಿ ಕಂಪನಿಗಳಿಗೆ ವರ್ಗಾಯಿಸಿ, ವಿದೇಶಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿ ಭಾರತಕ್ಕೆ ತಂದು ಭಾರತದ ನಾಗರಿಕರಿಗೆ ನೀಡಬಹುದು. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇಂಡಿಯಾ ಕಂಪನಿಯು ಕೋವಿಶೀಲ್ಡ್ ಲಸಿಕೆಯ ಸಂಶೋಧನೆ, ಅಭಿವೃದ್ದಿ ಮಾಡಿಲ್ಲ. ಆದರೇ, ಆಕ್ಸ್ಫರ್ಡ್ ವಿವಿ-ಅಸ್ಟ್ರಾಜನಿಕಾ ಕಂಪನಿಯಿಂದ ತಂತ್ರಜ್ಞಾನದ ವರ್ಗಾವಣೆ ಮಾಡಿಕೊಂಡು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿದೆ ಅಷ್ಟೇ. ಇದೇ ರೀತಿ ಭಾರತವು ಕೂಡ ತನ್ನ ಸ್ವದೇಶಿ ಲಸಿಕೆಯನ್ನ ವಿದೇಶಗಳಲ್ಲಿ ಉತ್ಪಾದನೆಯಾಗುವಂತೆ ಮಾಡಿದರೇ, ಭಾರತಕ್ಕೆ ಲಸಿಕೆಯ ಪೂರೈಕೆ ಹೆಚ್ಚಾಗುತ್ತೆ.
ಇದನ್ನೂ ಓದಿ: Explainer | ಕೊರೊನಾ ಲಸಿಕೆ ಸಾಗಣೆ ಬಾಕ್ಸ್ ಮೇಲೆ ಸರ್ವೇ ಸಂತು ನಿರಾಮಯಾಃ.. ಏನಿದರ ಅರ್ಥ?
ಲಸಿಕೆಯ ಪ್ರಾತಿನಿಧಿಕ ಚಿತ್ರ
ಟ್ರಿಪ್ಸ್ ಒಪ್ಪಂದದಿಂದ ತಾತ್ಕಾಲಿಕ ವಿನಾಯಿತಿಗೆ ಮನವಿ
ವಿಶ್ವ ವ್ಯಾಪಾರ ಸಂಘಟನೆಯು ಜೂನ್ ತಿಂಗಳಲ್ಲಿ ತನ್ನ ಸಭೆಯನ್ನು ನಡೆಸುತ್ತಿದೆ. ಜೂನ್ ತಿಂಗಳಲ್ಲಿ ಜಿ-7 ರಾಷ್ಟ್ರಗಳ ಸಭೆ ಕೂಡ ಇದೆ. ಈ ಸಭೆಯಲ್ಲಿ ಟ್ರಿಪ್ಸ್ ಒಪ್ಪಂದದಿಂದ ತಾತ್ಕಾಲಿಕವಾಗಿ ಕೊರೊನಾ ಲಸಿಕೆಗೆ ವಿನಾಯಿತಿ ನೀಡಬೇಕೆಂದು ಭಾರತ ಒತ್ತಾಯಿಸುತ್ತಿದೆ. ಟ್ರಿಪ್ಸ್ ಅಂದರೆ, Trade Related aspects of Intellectual Property Rights (TRIPS). ಲಸಿಕೆಯ ಬೌದ್ಧಿಕ ಹಕ್ಕಿನ ವ್ಯಾಪಾರ ಒಪ್ಪಂದದಿಂದ ಕೊರೊನಾ ಲಸಿಕೆಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡಿದರೇ, ಲಸಿಕೆಯನ್ನು ಸಂಶೋಧನೆ ಮಾಡದೇ ಇರುವ ದೇಶಗಳು ಕೂಡ ಕೊರೊನಾ ಲಸಿಕೆಗಳನ್ನು ಉತ್ಪಾದನೆ ಮಾಡಲು ಅವಕಾಶ ಸಿಗುತ್ತೆ. ಇದರಿಂದ ಕೊರೊನಾ ಲಸಿಕೆಯನ್ನು ಶೀಘ್ರಗತಿಯಲ್ಲಿ ಉತ್ಪಾದಿಸಲು ಯಾವುದೇ ಅಡ್ಡಿ ಆತಂಕಗಳೂ ಇರುವುದಿಲ್ಲ.
ಭಾರತವು ಕಳೆದ ವರ್ಷವೇ ಅಸ್ಟ್ರಾಜನಿಕ, ಮಾಡೆರ್ನಾ ಮತ್ತು ಫೈಜರ್ನಂಥ ಕಂಪನಿಗಳ ಮನವೊಲಿಸಿ ಅವುಗಳ ಲಸಿಕೆ ತಂತ್ರಜ್ಞಾನವನ್ನು ಭಾರತದ ಲಸಿಕಾ ಕಂಪನಿಗಳಿಗೆ ವರ್ಗಾಯಿಸಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಆಗುವಂತೆ ಮಾಡಬಹುದಿತ್ತು. ಆದರೆ, ಅದಕ್ಕೆ ಈಗ ಕಾಲಮಿಂಚಿ ಹೋಗಿದೆ. ಈಗ ಏನಿದ್ದರೂ, ಹೆಚ್ಚಿನ ಕಂಪನಿಗಳಿಗೆ ಕೊರೊನಾ ಲಸಿಕೆ ಉತ್ಪಾದಿಸುವಂತೆ ಲೈಸೆನ್ಸ್ ನೀಡಬೇಕು. ಈಗಾಗಲೇ ಲಸಿಕೆ ಉತ್ಪಾದಿಸುತ್ತಿರುವ ಕಂಪನಿಗಳು ಹೆಚ್ಚೆಚ್ಚು ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲು ಹಣಕಾಸಿನ ನೆರವು ನೀಡಬೇಕು. ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇರುವ ಕಂಪನಿಗಳಲ್ಲಿ ಕಂಪಲ್ಸರಿ ಲೈಸೆನ್ಸ್ ನೀಡುವ ಮೂಲಕ ಲಸಿಕೆ ಉತ್ಪಾದನೆಯಾಗುವಂತೆ ಮಾಡಬೇಕು.
ಭಾರತದಲ್ಲಿ ಇನ್ನೂ ಗುಜರಾತ್ನ ಅಹಮದಾಬಾದ್ನಲ್ಲಿರುವ ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಜೇನೋವಾ ಕಂಪನಿಗಳು ಕೊರೊನಾ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ದಿಯಲ್ಲಿ ತೊಡಗಿವೆ. ಈ ಕಂಪನಿಗಳಿಗೂ ಹೆಚ್ಚಿನ ಹಣಕಾಸಿನ ನೆರವು ನೀಡಿ ಲಸಿಕೆ ಸಂಶೋಧನೆಯನ್ನು ತ್ವರಿತಗತಿಯಲ್ಲಿ ನಡೆಸಲು ಪೋತ್ಸಾಹ ನೀಡಬೇಕು. ಹೀಗೆ ಬೇರೆಬೇರೆ ಕ್ರಮಗಳ ಮೂಲಕ ಭಾರತದ ಜನರಿಗೆ ಹೆಚ್ಚಿನ ಕೊರೊನಾ ವೈರಸ್ ವಿರುದ್ಧದ ಲಸಿಕೆ ಸಿಗುವಂತೆ ಮಾಡಬಹುದು. ಈ ವರ್ಷದ ಅಂತ್ಯದೊಳಗೆ ಭಾರತದ ಎಲ್ಲ ನಾಗರಿಕರಿಗೂ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿದರೇ, ಜನರ ಪ್ರಾಣವನ್ನು ಕಾಪಾಡಲು ಸಾಧ್ಯ. ಇಸ್ರೇಲ್, ಆಮೆರಿಕಾದಂತೆ ಭಾರತವು ಕೂಡ ಮಾಸ್ಕ್ ಮುಕ್ತವಾಗಲು ಎಲ್ಲರಿಗೂ ಆದಷ್ಟು ಬೇಗ ಲಸಿಕೆಯನ್ನು ನೀಡಲೇಬೇಕು. ಅದಕ್ಕಾಗಿ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಇರುವ ಎಲ್ಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
(Coronavirus Vaccine What are the options Available to Indian Government to Increase Covid 19 Vaccine Production)
ಇದನ್ನೂ ಓದಿ: Explainer: ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಏಕೆ ಗೋಚರಿಸುತ್ತಿವೆ?