ಅಪ್​ಗ್ರೇಡ್​ ಆಗಿದೆ CoWIN: ದಿನಕ್ಕೆ 1 ಕೋಟಿ ನೋಂದಣಿ ಸಾಮರ್ಥ್ಯ, ಲಸಿಕೆ ಅಭಿಯಾನದ ಅಂಕಿಅಂಶ ಇಲ್ಲಿದೆ

ಅಪ್​ಗ್ರೇಡ್​ ಆಗಿದೆ CoWIN: ದಿನಕ್ಕೆ 1 ಕೋಟಿ ನೋಂದಣಿ ಸಾಮರ್ಥ್ಯ, ಲಸಿಕೆ ಅಭಿಯಾನದ ಅಂಕಿಅಂಶ ಇಲ್ಲಿದೆ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)

ದೇಶದಲ್ಲಿ ಒಟ್ಟು ಲಸಿಕೆ ಪಡೆದಿರುವವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚು. 2,73,99,069 (2.73 ಕೋಟಿ) ಪುರುಷರು ಲಸಿಕೆ ಪಡೆದುಕೊಂಡಿದ್ದರೆ, 2,43,12,907 (2.43 ಕೋಟಿ) ಮಹಿಳೆಯರು ಲಸಿಕೆ ಸ್ವೀಕರಿಸಿದ್ದಾರೆ.

Ghanashyam D M | ಡಿ.ಎಂ.ಘನಶ್ಯಾಮ

|

Mar 29, 2021 | 5:17 PM


ದೆಹಲಿ: ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ನೋಂದಣಿಗೆಂದು ರೂಪಿಸಿರುವ ವೆಬ್​ಪೋರ್ಟಲ್ CoWIN ಸಾಮರ್ಥ್ಯ ಹೆಚ್ಚಳವಾಗಿದೆ. ಪ್ರತಿದಿನ ಒಂದು ಕೋಟಿ ನೋಂದಣಿ ಮತ್ತು 50 ಲಸಿಕೆ ವಿತರಣೆ ದಾಖಲಿಸುವ ಸಾಮರ್ಥ್ಯ ಇದೀಗ ಕೋವಿನ್ ವೆಬ್​ಪೋರ್ಟಲ್​ಗೆ ಬಂದಿದೆ. ಏಪ್ರಿಲ್ 1ರ ನಂತರ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಕ್ಷಿಸಿರುವ ಹಿನ್ನೆಲೆಯಲ್ಲಿ ನೋಂದಣಿಗೆ ಮುಂದಾಗುವವರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಿ, ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಭಾರತದಲ್ಲಿ ನಿನ್ನೆಯವರೆಗೆ (ಮಾರ್ಚ್ 28) 6 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಪೋರ್ಟಲ್​ ಇದೀಗ ಮಾಹಿತಿ ನೀಡುತ್ತಿದೆ.

ಭಾರತವು ಶನಿವಾರ ಕೊವಿಡ್-19 ಲಸಿಕೆ ವಿತರಣೆ ಅಭಿಯಾನದಲ್ಲಿ ಮಹತ್ವದ ಮೈಲಿಗಲ್ಲು ಮುಟ್ಟಿದೆ. ಲಸಿಕೆ ಪಡೆದವರ ಸಂಖ್ಯೆಯು 6 ಕೋಟಿ ದಾಟಿದೆ. ಶನಿವಾರ ಒಂದೇ ದಿನ 21,54,170 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ ದೇಶದಲ್ಲಿ ಲಸಿಕೆ ತೆಗೆದುಕೊಂಡವರ ಒಟ್ಟು ಸಂಖ್ಯೆ 6,01,22,911ಕ್ಕೆ ಮುಟ್ಟಿದೆ.

ದೇಶದಾದ್ಯಂತ 5,17,17,688 ಮಂದಿ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. 84,05,223 ಮಂದಿ 2ನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಪರಿಸ್ಥಿತಿ ಬಿಗಡಾಯಿಸಿರುವ ಮಹಾರಾಷ್ಟ್ರದಲ್ಲಿಯೇ ಹೆಚ್ಚಿನ ಪ್ರಮಾಣದ ಕೊವಿಡ್-19 ಲಸಿಕೆಗಳನ್ನು ವಿತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 57,26,036 ಮಂದಿಗೆ ಲಸಿಕೆ ನೀಡಲಾಗಿದೆ.

ಕೋವಿನ್ ಪೋರ್ಟಲ್​ಗೆ ಈವರೆಗೆ ಒಟ್ಟು 6,15,31,438 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ದೇಶದ 24,510 ಸ್ಥಳಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ 20,400 ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಮತ್ತು 4,110 ಖಾಸಗಿ ವೈದ್ಯಕೀಯ ಸಂಸ್ಥೆಗಳು ಸೇರಿವೆ. ಕರ್ನಾಟಕದಲ್ಲಿ ಈವರೆಗೆ 32,52,196 ಮಂದಿ ಲಸಿಕೆ ಪಡೆದಿದ್ದಾರೆ. ಸೋಮವಾರ ಒಂದೇ ದಿನ 1,21,803 ಮಂದಿಗೆ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಒಟ್ಟು ಲಸಿಕೆ ಪಡೆದಿರುವವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚು. 2,73,99,069 (2.73 ಕೋಟಿ) ಪುರುಷರು ಲಸಿಕೆ ಪಡೆದುಕೊಂಡಿದ್ದರೆ, 2,43,12,907 (2.43 ಕೋಟಿ) ಮಹಿಳೆಯರು ಲಸಿಕೆ ಸ್ವೀಕರಿಸಿದ್ದಾರೆ.

ಸ್ಲಂಗಳಿಗೆ ಆದ್ಯತೆ ನೀಡಲು ಹೈಕೋರ್ಟ್ ಸೂಚನೆ
ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂಗಳಿಗೆ ಆದ್ಯತೆ ನೀಡಬೇಕು. ಸ್ಲಂಗಳಲ್ಲಿ ವಾಸಿಸುವ ನಾಗರಿಕರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಅವರಿಗೆ ಕೊರೊನಾ ಲಸಿಕೆಯ ಅಗತ್ಯ ಮಿಕ್ಕೆಲ್ಲರಿಗಿಂತ ಹೆಚ್ಚು ಅಗತ್ಯವಿದೆ. ಹೀಗಾಗಿ, ಸರ್ಕಾರಗಳು ಸ್ಲಂ ನಿವಾಸಿಗಳಿಗೆ ಕೊರೊನಾ ಲಸಿಕೆಯನ್ನು ಶೀಘ್ರ ತಲುಪಿಸಲೇಬೇಕು ಎಂದು ಕರ್ನಾಟಕ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಗುರುವಾರ ಹೇಳಿದೆ. ಒಂದುವೇಳೆ ಕೊರೊನಾ ಲಸಿಕೆಯ ಕೊರತೆ ಉಂಟಾದಲ್ಲಿ ಆದ್ಯತೆ ಮೇರೆಗೆ ಯಾರಿಗೆ ನೀಡಲಾಗುವುದು ಎಂಬುದು ನಿರ್ಧಾರ ಆಗಿರಬೇಕು. ಕೊರೊನಾ ಲಸಿಕೆಯನ್ನು ಕೇವಲ ನೋಂದಣಿ ಮಾಡಿಸಿಕೊಂಡವರಿಗಷ್ಟೇ ನೀಡುವುದು ಸರಿಯಾದ ಕ್ರಮವಲ್ಲ, ಹಾಗೆ ಮಾಡಲೂಬಾರದು ಎಂದು ಹೈಕೋರ್ಟ್​ನ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ, ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಹಲವಾರು ಸ್ಲಂ ಅಥವಾ ಕೊಳಚೆ ಪ್ರದೇಶಗಳಿವೆ. ಅಲ್ಲಿ ಇತರ ಜನವಸತಿ ಪ್ರದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸಿಸುತ್ತಾರೆ. ಸ್ಲಂಗಳಲ್ಲಿನ ಜನದಟ್ಟಣೆ ಕೊರೊನಾ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಕೊರೊನಾ ಲಸಿಕೆಯನ್ನು ಇಂತಹ ಕೊಳಚೆ ಅಥವಾ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಆದ್ಯತೆಯ ಮೇರೆಗೆ ಒದಗಿಸಬೇಕು ಎಂದು ಕೋರ್ಟ್ ತಿಳಿಸಿದೆ.

ಕೊರೊನಾ ಲಸಿಕೆ ಸ್ಲಂಗಳಿಗೆ ತಲುಪುವ ಕುರಿತು ಖಾತ್ರಿಪಡಿಸಿ. ಅಲ್ಲಿ ವಾಸಿಸುವ ಜನರಿಗೆ ಕೊರೊನಾ ಲಸಿಕೆಯ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ, ಲಸಿಕೆಯನ್ನು ಕೊಟ್ಟೇ ಕೊಡುತ್ತೇವೆ ಎಂದು ಖಾತ್ರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿನ ಕೊವಿಡ್ 19 ರ ಸ್ಥಿತಿಗತಿಗಳ ಕುರಿತು ಎರಡು ಅರ್ಜಿಗಳು ಸಲ್ಲಿಕೆಯಾದ ನಂತರ ಹೈಕೋರ್ಟ್​ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

45 ವರ್ಷ ಮೇಲ್ಪಟ್ಟವರಿಗೂ ದೊರಕಲಿದೆ ಲಸಿಕೆ
ಕೇಂದ್ರ ಸರ್ಕಾರ ಇತ್ತೀಚಿಗೆ ಕೈಗೊಂಡ ನಿರ್ಣಯದ ಪ್ರಕಾರ, ಏಪ್ರಿಲ್ 1ರಿಂದ 45 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲಾಗುತ್ತದೆ. ಈ ಕುರಿತು ಇನ್ನೂ ಹೆಚ್ಚಿನ ವಿವರ ತಿಳಿದುಬರಬೇಕಿದ್ದು, ಕೇಂದ್ರ ಸರ್ಕಾರ ಮಾರ್ಚ್ 23ರಂದು ಈ ಘೋಷಣೆ ಮಾಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ತಿಳಿಸಿದ್ದರು. ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ದೇಶದ ಎಲ್ಲ ಅರ್ಹರು ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಲು ಎಂದು ಸಚಿವ ಪ್ರಕಾಶ್ ಜಾವಡೇಕರ್ ಮನವಿ ಮಾಡಿದ್ದರು.

ಇದನ್ನೂ ಓದಿ: 12 ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪರೀಕ್ಷೆಗೆ ಮುಂದಾದ ಫೈಜರ್​ -ಬಯೋಎನ್​​ಟೆಕ್​ ಸಂಸ್ಥೆ

ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ


Follow us on

Related Stories

Most Read Stories

Click on your DTH Provider to Add TV9 Kannada