Air India Express: ಏರ್ ಇಂಡಿಯಾ ವಿಮಾನದ ಬಾಗಿಲು ತೆರೆಯಲು ಯತ್ನ, ಕ್ಯಾಬಿನ್ ಸಿಬ್ಬಂದಿ ಮೇಲೆ ಹಲ್ಲೆ; ಕೇರಳದ ವ್ಯಕ್ತಿಯ ಬಂಧನ
ಪ್ರಯಾಣಿಕರೊಬ್ಬರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಅಲ್ಲದೆ, ಆ ವ್ಯಕ್ತಿ ವಿಮಾನದ ಕ್ಯಾಬಿನ್ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆಸಿದ್ದರು. ಈ ಆರೋಪದ ಮೇಲೆ ಕೇರಳದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
ಮುಂಬೈ: ಬಹ್ರೇನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಆರೋಪದ ಮೇಲೆ 25 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಮುಂಬೈನ (Mumbai Airport) ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಸಿಎಸ್ಎಂಐಎ) ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಆರೋಪಿ ಅಬ್ದುಲ್ ಮುಸಾವಿರ್ ನಡುಕಂಡಿಯನ್ನು ಬಂಧಿಸಲಾಗಿದೆ ಎಂದು ಸಹರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಝಿಕ್ಕೋಡ್‌ನಿಂದ ವಿಮಾನ ಹೊರಡುತ್ತಿದ್ದಂತೆ ಕೇರಳ ಮೂಲದ ಅಬ್ದುಲ್ ತಕ್ಷಣವೇ ವಿಮಾನದ ಹಿಂಭಾಗಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್-ಮುಂಬೈ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ
ಆರೋಪಿ ಅಬ್ದುಲ್ ವಿಮಾನದಲ್ಲಿದ್ದ ಇತರ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ಸದಸ್ಯರು ಅವರನ್ನು ವಿಮಾನದ ಸೀಟಿನಲ್ಲಿ ಕೂರಿಸಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲಿಯೂ ಸುಮ್ಮನಾಗದ ಅಬ್ದುಲ್ ಅಲ್ಲಿದ್ದ ಇತರ ಪ್ರಯಾಣಿಕರಿಗೆ ಬೈದು, ಗಲಾಟೆ ಮಾಡಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ತುರ್ತು ಬಾಗಿಲು ತೆರೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಭದ್ರತೆಯ ಬಗ್ಗೆ ಕಳವಳ ಉಂಟಾದ ಕಾರಣ ಪೈಲಟ್ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ತಕ್ಷಣವೇ ಈ ಘಟನೆಯ ಬಗ್ಗೆ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ-ಮುಂಬೈ ‘ಆಕಾಶ’ ವಿಮಾನಕ್ಕೆ ಬಾಂಬ್ ಬೆದರಿಕೆ, ಅಹಮದಾಬಾದ್ನಲ್ಲಿ ತುರ್ತು ಭೂಸ್ಪರ್ಶ
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಜೀವಕ್ಕೆ ಅಪಾಯವನ್ನುಂಟುಮಾಡುವ ಕಾಯ್ದೆ), 504 (ಶಾಂತಿ ಭಂಗಕ್ಕೆ ಪ್ರಚೋದನೆ), 506 (ಅಪರಾಧ ಬೆದರಿಕೆ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು ವಿಮಾನದ ಸಂಬಂಧಿತ ನಿಬಂಧನೆಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ