ದೆಹಲಿ: ಬಿಎಂಡಬ್ಲ್ಯು(BMW) ಕಾರು ಡಿಕ್ಕಿ ಹೊಡೆದು ಸೈಕ್ಲಿಸ್ಟ್ (cyclist) ಸಾವನ್ನಪ್ಪಿರುವ ಘಟನೆ ದಿಲ್ಲಿಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಭೇಂದು ಚಟರ್ಜಿ (50) (Subhendu Chatterjee) ಅವರು ಮಹಿಪಾಲ್‌ಪುರ ಮೇಲ್ಸೇತುವೆ ಬಳಿ ಸೈಕ್ಲಿಂಗ್ ಮಾಡುವಾಗ ಬಿಳಿ ಐಷಾರಾಮಿ ಸೆಡಾನ್ ಡಿಕ್ಕಿ ಹೊಡೆದಿದೆ. ಪೊಲೀಸರ ಪ್ರಕಾರ, ಕಾರಿನ ಚಾಲಕ ಟೈರ್ ಸ್ಫೋಟಗೊಂಡ ನಂತರ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಿದರು. ಸಂತ್ರಸ್ತರನ್ನು ಕಾರಿನ ಚಾಲಕ ಆಸ್ಪತ್ರೆಗೆ ಕರೆದೊಯ್ದಿದ್ದು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಚಟರ್ಜಿ ಗುರುಗ್ರಾಮ್ ನಿವಾಸಿಯಾಗಿದ್ದು, ದೆಹಲಿಯ ಧೌಲಾ ಕುವಾನ್ ಕಡೆಗೆ ಸವಾರಿ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕನನ್ನು ಪೊಲೀಸರು ಗುರುತಿಸಿಲ್ಲ, ಆದರೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಡಬ್ಲ್ಯು ವಿಐಪಿ ನೋಂದಣಿ ಫಲಕವನ್ನು ಹೊಂದಿತ್ತು. ಅದರ ಮೇಲೆ “ಅಧ್ಯಕ್ಷ ಹಣಕಾಸು ಸಮಿತಿ, ದೆಹಲಿ ಕಂಟೋನ್ಮೆಂಟ್ ಬೋರ್ಡ್” ಎಂದು ಸ್ಟಿಕ್ಕರ್ ಇತ್ತು. ಪೊಲೀಸರು ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ದಾಖಲಿಸಿದ್ದಾರೆ. ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ ಬೆಳಿಗ್ಗೆ ವಸಂತ್ ಕುಂಜ್ನಿಂದ ಪಿಸಿಆರ್ ಕರೆ ಬಂದಿತು. ಸಿಬ್ಬಂದಿ ಫ್ಲೈಓವರ್‌ಗೆ ಹೋಗಿ ನೋಡಿದಾಗ ಬಿಎಂಡಬ್ಲ್ಯು ಕಾರು ಮತ್ತು ಸೈಕಲ್ ಎರಡೂ ರಸ್ತೆಯ ಮೂಲೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ.ವಿಚಾರಣೆಯಲ್ಲಿ ಕಾರಿನ ಟೈರ್ ಒಡೆದಿರುವುದು ಕಂಡುಬಂದಿದೆ. ಕಾರು ಚಾಲಕನಿಗೆ ನಿಯಂತ್ರಿಸಲು ಸಾಧ್ಯವಾಗದೆ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕಾರು ಚಾಲಕ ಆಸ್ಪತ್ರೆಗೆ ಸಾಗಿಸಿದ್ದಾನೆ. ಆದರೆ, ಬರುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಡಿಸಿಪಿ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
ಬಿಎಂಡಬ್ಲ್ಯು ಚಾಲಕನ ವಿರುದ್ಧ ಅಜಾಗರೂಕತೆಯಿಂದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಚಟರ್ಜಿ ಅವರು ಬೆಳಗ್ಗೆ ಸೈಕಲ್ ತುಳಿಯುತ್ತಿದ್ದಾಗ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈತ ಹೆಲ್ಮೆಟ್ ಹಾಕಿಕೊಂಡಿದ್ದು, ಪ್ರತಿದಿನ ಅವರು ಸೈಕಲ್ ನಲ್ಲಿ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಉತ್ಸಾಹದ ಸೈಕ್ಲಿಸ್ಟ್ ಆಗಿದ್ದು ಪ್ರತಿದಿನ ಸೈಕಲ್ ತುಳಿಯುತ್ತಿದ್ದರು. ಅವರು ದೆಹಲಿ ಮತ್ತು ಎನ್ಸಿಆರ್ನಲ್ಲಿ ಸೈಕ್ಲಿಂಗ್ ಸಮುದಾಯದ ಭಾಗವಾಗಿದ್ದರು. ವಾರಾಂತ್ಯದಲ್ಲಿ, ನಾವು ಗುರ್ಗಾಂವ್‌ನಿಂದ ದೆಹಲಿಗೆ ಗುಂಪಿನಲ್ಲಿ ಸೈಕ್ಲಿಂಗ್‌ಗೆ ಹೋಗುತ್ತಿದ್ದೆವು. ಇಂದು ಅವರು ಒಬ್ಬರೇ ಸವಾರಿ ಮಾಡುತ್ತಿದ್ದರು, ಅದು ಅಸಾಮಾನ್ಯವೇನಲ್ಲ. ರೈಡ್ಗೆ ಹೋಗುತ್ತೇನೆ ಎಂದು ವಾಟ್ಸಾಪ್ನಲ್ಲಿ ನಮ್ಮ ಸೈಕ್ಲಿಸ್ಟ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ಭಾನುವಾರ, ಅವರು ಗುರ್ಗಾಂವ್‌ನ ಜೆನ್‌ಪ್ಯಾಕ್ ಚೌಕ್‌ನಲ್ಲಿ ರಸ್ತೆ ಸಂಚಾರ ಸಂತ್ರಸ್ತರಿಗಾಗಿ ವಿಶ್ವ ದಿನಾಚರಣೆಯ ಸಂದರ್ಭದಲ್ಲಿ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಗುರ್ಗಾಂವ್‌ನ ಬೈಸಿಕಲ್ ಮೇಯರ್, ಚಟರ್ಜಿ ಅವರ ಸ್ನೇಹಿತೆ ಸಾರಿಕಾ ಪಾಂಡ ಭಟ್ ಹೇಳಿದ್ದಾರೆ.