Cyclone Names: ಇಂದು ರಾತ್ರಿ ತಮಿಳುನಾಡಿಗೆ ಅಪ್ಪಳಿಸಲಿದೆ ಮಾಂಡೌಸ್ ಚಂಡಮಾರುತ; ಈ ಸೈಕ್ಲೋನ್​ ಅರ್ಥ ಹೀಗಿದೆ

| Updated By: ಸುಷ್ಮಾ ಚಕ್ರೆ

Updated on: Dec 09, 2022 | 1:41 PM

Cyclone Mandous: ಅರೇಬಿಕ್ ಭಾಷೆಯಲ್ಲಿ ಮಾಂಡೌಸ್ ಈ ಪದಕ್ಕೆ 'ನಿಧಿ ಪೆಟ್ಟಿಗೆ' ಎಂಬ ಅರ್ಥವಿದೆ. ಇದನ್ನು 'ಮ್ಯಾನ್-ಡೌಸ್' ಎಂದು ಉಚ್ಚರಿಸಲಾಗುತ್ತದೆ.

Cyclone Names: ಇಂದು ರಾತ್ರಿ ತಮಿಳುನಾಡಿಗೆ ಅಪ್ಪಳಿಸಲಿದೆ ಮಾಂಡೌಸ್ ಚಂಡಮಾರುತ; ಈ ಸೈಕ್ಲೋನ್​ ಅರ್ಥ ಹೀಗಿದೆ
ಚಂಡಮಾರುತ
Follow us on

ಚೆನ್ನೈ: ಇಂದು ರಾತ್ರಿ ತಮಿಳುನಾಡಿಗೆ ಮಾಂಡೌಸ್ ಚಂಡಮಾರುತ (Cyclone Mandous) ಅಪ್ಪಳಿಸಲಿದೆ. ನಿನ್ನೆಯಿಂದಲೇ ಬಂಗಾಳಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ತಮಿಳುನಾಡಿನ ಉತ್ತರ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳು, ಪುದುಚೇರಿ, ಕಾರೈಕಾಲ್‌ನಲ್ಲಿ ಇಂದು ಮತ್ತು ಡಿ. 10ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.

ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ತಿರುವಳ್ಳೂರು, ವೆಲ್ಲೂರು, ಕಡಲೂರು, ರಾಣಿಪೇಟ್, ಕಾಂಚೀಪುರಂ, ಕಲ್ಲಕುರಿಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ, ಅರಿಯಲೂರ್, ಪೆರಂಬಲೂರು, ಪುದುಮೂರು, ಧರ್ಮಪುರ, ಪುದು ಸೇರಿ 19 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಚಂಡಮಾರುತಕ್ಕೆ ಮಾಂಡೌಸ್ ಎಂಬ ಹೆಸರು ಬಂದಿದ್ದು ಹೇಗೆ? ಇದರ ಅರ್ಥವೇನೆಂಬ ಮಾಹಿತಿ ಇಲ್ಲಿದೆ.

ಮಾಂಡೌಸ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ತೀವ್ರಗೊಂಡಿದೆ. ಇಂದು ಮಧ್ಯರಾತ್ರಿ ಈ ಚಂಡಮಾರುತ ಮಾಮಲ್ಲಪುರಂ ದಾಟುವ ನಿರೀಕ್ಷೆಯಿದೆ. ಚಂಡಮಾರುತದ ತೀವ್ರತೆಯಿಂದಾಗಿ ಗಾಳಿಯ ವೇಗ ಗಂಟೆಗೆ 85 ಕಿ.ಮೀ. ಇರಲಿದೆ. ಈ ಚಂಡಮಾರುತಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಂಡೌಸ್ ಎಂದು ಹೆಸರಿಟ್ಟಿದೆ.

ಇದನ್ನೂ ಓದಿ: Cyclone Mandous: ಮಾಂಡಸ್ ಚಂಡಮಾರುತದ ಅಬ್ಬರ; ತಮಿಳುನಾಡು, ಆಂಧ್ರದಲ್ಲಿ ಭಾರೀ ಮಳೆಯ ಅಲರ್ಟ್

ಅರೇಬಿಕ್ ಭಾಷೆಯಲ್ಲಿ ಮಾಂಡೌಸ್ ಈ ಪದಕ್ಕೆ ‘ನಿಧಿ ಪೆಟ್ಟಿಗೆ’ ಎಂಬ ಅರ್ಥವಿದೆ. ಇದನ್ನು ‘ಮ್ಯಾನ್-ಡೌಸ್’ ಎಂದು ಉಚ್ಚರಿಸಲಾಗುತ್ತದೆ. ಇದು ನಿಧಾನವಾಗಿ ಚಲಿಸುವ ಚಂಡಮಾರುತವಾಗಿದ್ದು, ಸಾಕಷ್ಟು ತೇವಾಂಶವನ್ನು ಹೀರಿಕೊಳ್ಳುತ್ತದೆ. ಪ್ರಪಂಚದಾದ್ಯಂತದ ಚಂಡಮಾರುತಗಳನ್ನು ಆಯಾ ವಿಶೇಷ ಪ್ರಾದೇಶಿಕ ಹವಾಮಾನ ಕೇಂದ್ರಗಳು ಮತ್ತು ಉಷ್ಣವಲಯದ ಚಂಡಮಾರುತ ಎಚ್ಚರಿಕೆ ಕೇಂದ್ರಗಳಿಂದ ಹೆಸರಿಸಲಾಗುತ್ತದೆ. IMD ಸೇರಿದಂತೆ 6 ಪ್ರಾದೇಶಿಕ ಕೇಂದ್ರಗಳು ಮತ್ತು 5 ಉಷ್ಣವಲಯದ ಎಚ್ಚರಿಕೆ ಕೇಂದ್ರಗಳಿವೆ.

ಮಾಂಡೌಸ್ ಚಂಡಮಾರುತ ತನ್ನ ತೀವ್ರತೆಯನ್ನು ಕಾಯ್ದುಕೊಳ್ಳುತ್ತಿರುವುದರಿಂದ ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇಂದು ಚೆನ್ನೈನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ನಾಮಕ್ಕಲ್ ಮತ್ತು ಕಾರೈಕಲ್ ಮತ್ತು ಪುದುಚೇರಿಯಲ್ಲಿ ಇಂದು ಮತ್ತು ಶನಿವಾರ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Bengaluru Weather Today: ಮ್ಯಾಂಡಸ್ ಚಂಡಮಾರುತದ ಎಫೆಕ್ಟ್​; ಬೆಂಗಳೂರಿನಲ್ಲಿ ಇಂದಿನಿಂದ 4 ದಿನ ಮಳೆ ಸಾಧ್ಯತೆ

ಈ ನಡುವೆ ಹವಾಮಾನ ಇಲಾಖೆಯು ಪುದುಚೇರಿ ಮತ್ತು ಕಾಂಚೀಪುರಂ, ಚೆಂಗಲ್‌ಪೇಟ್ ಮತ್ತು ವಿಲ್ಲುಪುರಂಗೆ ರೆಡ್ ಅಲರ್ಟ್ ಮತ್ತು ಚೆನ್ನೈ, ತಿರುವಳ್ಳೂರು, ರಾಣಿಪೇಟ್, ವೆಲ್ಲೂರು, ತಿರುವಣ್ಣಾಮಲೈ, ತಿರುಪತ್ತೂರ್, ಕಲ್ಲಕುರಿಚಿ ಮತ್ತು ಕಡಲೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 12ರವರೆಗೆ ವಾರಾಂತ್ಯದಲ್ಲಿ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಡಿಸೆಂಬರ್ 11 ಮತ್ತು 12ರಂದು ಗುಡುಗು ಮತ್ತು ಮಿಂಚು ಸಹಿತ ಮಳೆ ಸುರಿಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ