Cyclone Remal: ರೆಮಲ್ ಚಂಡಮಾರುತ; ಭಾನುವಾರ ಮಧ್ಯಾಹ್ನದಿಂದ ಕೊಲ್ಕತ್ತಾ ವಿಮಾನ ನಿಲ್ದಾಣ ಬಂದ್

ರೆಮಲ್ ಚಂಡಮಾರುತವು ಪಶ್ಚಿಮ ಬಂಗಾಳ, ಕರಾವಳಿ ಬಾಂಗ್ಲಾದೇಶ, ತ್ರಿಪುರಾ ಮತ್ತು ಈಶಾನ್ಯ ರಾಜ್ಯಗಳ ಇತರ ಕೆಲವು ಭಾಗಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ಭಾನುವಾರ (ನಾಳೆ) ಹೈ ಅಲರ್ಟ್ ಘೋಷಿಸಲಾಗಿದೆ.

Cyclone Remal: ರೆಮಲ್ ಚಂಡಮಾರುತ; ಭಾನುವಾರ ಮಧ್ಯಾಹ್ನದಿಂದ ಕೊಲ್ಕತ್ತಾ ವಿಮಾನ ನಿಲ್ದಾಣ ಬಂದ್
ರೆಮಲ್ ಚಂಡಮಾರುತ
Follow us
ಸುಷ್ಮಾ ಚಕ್ರೆ
|

Updated on: May 25, 2024 | 10:39 PM

ಕೊಲ್ಕತ್ತಾ: ರೆಮಲ್ ಚಂಡಮಾರುತದ (Cyclone Remal Updates) ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಇಂದು ಮತ್ತು ನಾಳೆ (ಭಾನುವಾರ) ತೀವ್ರ ಚಂಡಮಾರುತದ ಎಚ್ಚರಿಕೆ ನೀಡಿದೆ. ಈ ಚಂಡಮಾರುತ ಭಾನುವಾರ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಚಂಡಮಾರುತವು ನಾಳೆ (ಮೇ 26) ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ರೆಮಲ್’ ಚಂಡಮಾರುತದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು. ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದ ಮೇಲೆ ರೆಮಲ್ ಚಂಡಮಾರುತದ ಪ್ರಭಾವ ಹೆಚ್ಚಾಗಲಿದೆ. ಹೀಗಾಗಿ, ಮೇ 26ರಂದು ಮಧ್ಯಾಹ್ನ 12 ಗಂಟೆಯಿಂದ ಮೇ 27ರ 9 ಗಂಟೆಯವರೆಗೆ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Cyclone Remal: ಪಶ್ಚಿಮ ಬಂಗಾಳ, ಒಡಿಶಾ ಸಮೀಪಿಸುತ್ತಿದೆ ರೆಮಲ್ ಚಂಡಮಾರುತ; ಭಾರೀ ಮಳೆಯ ಎಚ್ಚರಿಕೆ

ಇದಲ್ಲದೆ, ಕೋಲ್ಕತ್ತಾ ಬಂದರು ಭಾನುವಾರ ಸಂಜೆಯಿಂದ 12 ಗಂಟೆಗಳ ಕಾಲ ಎಲ್ಲಾ ಸರಕು ಮತ್ತು ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಬಂದರು ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.

ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ, ಕರಾವಳಿ ಬಾಂಗ್ಲಾದೇಶ, ತ್ರಿಪುರಾ ಮತ್ತು ಈಶಾನ್ಯ ರಾಜ್ಯಗಳ ಇತರ ಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೇ 26ರ ರಾತ್ರಿ ರೆಮಲ್ ಚಂಡಮಾರುತವು 1.5 ಮೀಟರ್ ವರೆಗೆ ಚಂಡಮಾರುತದ ಉಲ್ಬಣವನ್ನು ಹೊಂದುವ ನಿರೀಕ್ಷೆಯಿದೆ. ಇದು ಕರಾವಳಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ತಗ್ಗು ಪ್ರದೇಶಗಳನ್ನು ಮುಳುಗಿಸುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Cyclone Remal: ಇಂದು ಸಂಜೆ ಭಾರತಕ್ಕೆ ಅಪ್ಪಳಿಸಲಿದೆ ರೆಮಲ್ ಚಂಡಮಾರುತ, ಕರಾವಳಿ ಭಾಗಗಳಲ್ಲಿ ಭೂಕುಸಿತ ಸಾಧ್ಯತೆ

ದಕ್ಷಿಣ 24 ಪರಗಣಗಳು, ಉತ್ತರ 24 ಪರಗಣಗಳು, ಕೋಲ್ಕತ್ತಾ, ಹೌರಾ ಮತ್ತು ಪೂರ್ವ ಮಿಡ್ನಾಪುರ ಸೇರಿದಂತೆ ಜಿಲ್ಲೆಗಳಿಗೆ IMD ರೆಡ್ ವಾರ್ನಿಂಗ್ ನೀಡಿರುವುದರಿಂದ ಪಶ್ಚಿಮ ಬಂಗಾಳದ ಕರಾವಳಿ ಗ್ರಾಮಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. IMD ಪ್ರಕಾರ, ಪಶ್ಚಿಮ ಬಂಗಾಳದೊಂದಿಗೆ, ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಂತಹ ಇತರ ಈಶಾನ್ಯ ರಾಜ್ಯಗಳು ಮಳೆ ಮತ್ತು ಬಲವಾದ ಗಾಳಿಗೆ ಸಾಕ್ಷಿಯಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ