ಮುಂಬೈ: ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ದಕ್ಷಿಣ ಮುಂಬೈನ ನಾರಾಯಣ್ ಧಾಬೋಲ್ಕರ್ ರಸ್ತೆಯಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ ಎಂದು ಕೇಳಬೇಡಿ.. ಇದರ ಬೆಲೆ ಕೇಳಿದರೆ ಖಂಡಿತ ನೀವೂ ಹುಬ್ಬೇರಿಸುತ್ತೀರಿ. ಟೋನಿ ಮಲ್ಬಾರ್ ಹಿಲ್ಸ್ನಲ್ಲಿ 1.5 ಎಕರೆ ಜಾಗದಲ್ಲಿ ಇರುವ ಮಧು ಕುಂಜ್ ಎಂಬ ಹೆಸರಿನ ಈ ಬಂಗಲೆಯ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ !
ಬಂಗಲೆ ಅಂದಾಜು 80 ವರ್ಷ ಹಳೆಯದಿರಬಹುದು. ಆರ್ಟ್ ಡೆಕೋ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ನೆಲ ಮತ್ತು ಒಂದು ಅಂತಸ್ತಿದೆ. ನಮ್ಮ ಪರಂಪರೆಯ ವೈಶಿಷ್ಟ್ಯಗಳನ್ನು ಬಿಂಬಿಸುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ರಾಧಾಕೃಷ್ಣನ್ ದಮಾನಿ ಮತ್ತು ಅವರ ಸೋದರ ಗೋಪಿಕೃಷ್ಣನ್ ದಮಾನಿ ಸೇರಿ ಮಾರ್ಚ್ 31ರಂದು ಬಂಗಲೆಯನ್ನು ಖರೀದಿಸಿದ್ದು, ನೋಂದಣಿಯ ಸಂದರ್ಭದಲ್ಲಿ 30 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಮಾರುಕಟ್ಟೆ ಮೂಲಗಳು ತಿಳಿಸಿವೆ.
19ನೇ ಶತಮಾನದ ಉದ್ಯಮಿಗೆ ಸೇರಿದ ಬಂಗಲೆ
ಈಗ ರಾಧಾಕೃಷ್ಣನ್ ದಮಾನಿ ಖರೀದಿಸಿರುವ ಈ ಬಂಗಲೆ 19ನೇ ಶತಮಾನದ, ಮುಂಬೈನ ಖ್ಯಾತ ಉದ್ಯಮಿ ಪ್ರೇಮ್ಚಂದ್ ರಾಯ್ಚಂದ್ ಅವರಿಗೆ ಸೇರಿದ್ದು. ಇವರನ್ನು ಕಾಟನ್ ಕಿಂಗ್ ಎಂದೇ ಕರೆಯಲಾಗುತ್ತಿತ್ತು. ಪ್ರೇಮ್ಚಂದ್ ಅವರ ಪೂರ್ವಜರು ಕಟ್ಟಿಸಿದ್ದ ಮನೆಯಾಗಿತ್ತು ಎಂದು ಸ್ಥಳೀಯರು, ಆ ಬಂಗಲೆಯ ಬಗ್ಗೆ ಗೊತ್ತಿದ್ದವರು ತಿಳಿಸಿದ್ದಾರೆ. ಈ ಬಂಗಲೆ, ದಕ್ಷಿಣ ಮುಂಬೈನ ದುಬಾರಿ ವಸತಿ ಪ್ರದೇಶ ಎನಿಸಿಕೊಂಡಿರುವ ನಾರಾಯಣ ಧಾಬೋಲ್ಕರ್ ರಸ್ತೆಯ ಮೂಲೆಯಲ್ಲಿ ಇದೆ. ಇಲ್ಲಿನ ಅಪಾರ್ಟ್ಮೆಂಟ್ಗಳಲ್ಲೇ, ಚದರ್ ಅಡಿಗೆ 70 ಸಾವಿರದಿಂದ 80 ಸಾವಿರ ರೂ.ವರೆಗೆ ದರ ನಿಗದಿ ಮಾಡಿವೆ. ಈ ಆಸುಪಾಸಿನ ಹಲವು ವಿಐಪಿಗಳ ಬಂಗಲೆಗಳೂ ಇವೆ.
ರಾಧಾಕೃಷ್ಣನ್ ದಮಾನಿ ಯಾರು?
ರಾಧಾಕೃಷ್ಣನ್ ದಮಾನಿ ಅವರಿಗೆ ಈಗ 67 ವರ್ಷ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ… ಹೂಡಿಕೆದಾರರು. ಮುಂಬೈ ಯೂನಿವರ್ಸಿಟಿಯಲ್ಲಿ ಕಾಮರ್ಸ್ ಅಭ್ಯಾಸ ಮಾಡಿದ್ದಾರೆ. ಆದರೆ ಒಂದೇ ವರ್ಷ ಓದಿ, ಅರ್ಧಕ್ಕೇ ಬಿಟ್ಟರು. 2001ರಲ್ಲಿ ಡಿ-ಮಾರ್ಟ್ ರಿಟೇಲ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ದೇಶಾದ್ಯಂತ ಮಾರ್ಟ್ಗಳಿವೆ. ಜನರ ನಂಬಿಕೆಯನ್ನೂ ಗಳಿಸಿದ ಕಂಪನಿ ಇದು. ಈ ಹಿಂದೆ ಒಂದೇ ಕೋಣೆಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ರಾಧಾಕೃಷ್ಣನ್ ದಮಾನಿ ಇದೀಗ ಬರೋಬ್ಬರಿ 1001 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೇ ಖರೀದಿಸಿದ್ದಾರೆ.
ಇದನ್ನೂ ಓದಿ: ಕೆ.ಮಂಜು ಯಾರು ಎಂದೇ ನನಗೆ ಗೊತ್ತಿಲ್ಲ; ಸಚಿವ ಡಾ.ಕೆ.ಸುಧಾಕರ್ ತಿರುಗೇಟು