ದುರ್ಗಮ ಪ್ರದೇಶದ ಜನರಿಗೆ ಲಸಿಕೆ ಕೊಡಲು, ತಂಡ ಕಟ್ಟಿಕೊಂಡು ಕಡಿದಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಜಿಲ್ಲಾಧಿಕಾರಿ; ಇವರ ಶ್ರದ್ಧೆಗೆ ಮೆಚ್ಚುಗೆ..ಕೃತಜ್ಞತೆ
ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವ ಎನ್ನುತ್ತಾರೆ ಸುರೇಂದ್ರ ಕುಮಾರ್ ಮೀನಾ
ಈ ಐಎಎಸ್ ಅಧಿಕಾರಿಯನ್ನು ಇಂಟರ್ನೆಟ್ನಲ್ಲಿ ಜನರು ಭರ್ಜರಿ ಶ್ಲಾಘಿಸುತ್ತಿದ್ದಾರೆ. ಬರೀ ನೆಟ್ಟಿಗರಷ್ಟೇ ಅಲ್ಲ, ಜಿಲ್ಲಾಧಿಕಾರಿಯ ನಿಷ್ಠೆಯ ಬಗ್ಗೆ ತಿಳಿದ ಪ್ರತಿಯೊಬ್ಬರೂ ಹೊಗಳುತ್ತಿದ್ದಾರೆ. ಅಲಿಪುರ್ದಾರ್ ಜಿಲ್ಲೆಯ ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್ ಮೀನಾ ಇದೀಗೆ ಎಲ್ಲೆಡೆಯಿಂದ ಶ್ಲಾಘನೆಗೆ ಪಾತ್ರರಾದವರು. ಇವರು ಜನರಿಗೆ ಉತ್ತರ ಬಂಗಾಳದ ಹಳ್ಳಿಹಳ್ಳಿಗೆ ಹೋಗಿ ಜನರಿಗೆ ಲಸಿಕೆ ನೀಡುತ್ತಿದ್ದಾರೆ. ಅದರಲ್ಲೇನು ವಿಶೇಷ ಕೇಳಬೇಡಿ? ವಾಹನ ಸಂಚಾರ ಸಾಧ್ಯವಿಲ್ಲದ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದಾರೆ. ಜನರಿಗೆ ಲಸಿಕೆ ಕೊಡಿಸಬೇಕು ಎಂದು ದುರ್ಗಮ ಅರಣ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. ಬೆಟ್ಟ ಹತ್ತಿದ್ದಾರೆ..ಕಡಿದಾದ ಮಾರ್ಗಗಳಲ್ಲಿ ಸಾಗಿದ್ದಾರೆ.
ಹೀಗೆ ದುರ್ಗಮ ಹಳ್ಳಿಯಾದ ಅದ್ಮಾಕ್ಕೆ ಹೋದ ಅನುಭವವನ್ನು ಸುರೇಂದ್ರ ಕುಮಾರ್ ಇಂಡಿಯಾ ಟುಡೆಯೊಂದಿಗೆ ಹಂಚಿಕೊಂಡಿದ್ದಾರೆ. ನಾನು ನನ್ನ ತಂಡದೊಂದಿಗೆ ಅದ್ಮಾಕ್ಕೆ ತಲುಪಲು ಸುಮಾರು 11 ಕಿಮೀ ದೂರ ಟ್ರೆಕ್ಕಿಂಗ್ ಮಾಡಬೇಕಾಯಿತು. ಈ ಗ್ರಾಮ ಭಾರತ-ಭೂತಾನ್ ಗಡಿಯಾದ ಬುಕ್ಸಾ ಎಂಬ ಗುಡ್ಡದ ಮೇಲಿದೆ. ಅತ್ಯಂತ ಕಡಿದಾದ ಮಾರ್ಗದಲ್ಲಿ ಟ್ರೆಕ್ಕಿಂಗ್ ಮಾಡಬೇಕಾಯಿತು ಎಂದಿದ್ದಾರೆ. ಉತ್ತರ ಬಂಗಾಳದಲ್ಲಿಯೇ ಈ ಅದ್ಮಾ ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಅಲ್ಲಿನ ಜನರಿಗೆ ಕೊವಿಡ್ 19 ಲಸಿಕೆ ನೀಡಲು ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿತ್ತು. ಹಾಗೇ ಅದ್ಮಾಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಪೊಖಾರಿ, ತೋರಿಬರಿ, ಶೇಗಾನ್, ಫುಲ್ಬಟಿ ಹಳ್ಳಿಗಳಿಗೂ ಭೇಟಿ ಕೊಟ್ಟು ಅಲ್ಲಿನ ಜನರಿಗೆ ಲಸಿಕೆ ಕೊಟ್ಟಿದ್ದೇವೆ. ಈ ಹಳ್ಳಿಗಳಿಗೆ ತಲುಪುವುದೇ ದೊಡ್ಡ ಸಾಹಸವಾಗಿತ್ತು. ನಮ್ಮೊಂದಿಗೆ ಇದ್ದ ಆರೋಗ್ಯ ಕಾರ್ಯಕರ್ತರು ಕೊವಿಡ್ ಲಸಿಕೆಯ ದೊಡ್ಡ ದೊಡ್ಡ ಬಾಕ್ಸ್ಗಳನ್ನು ಹೊತ್ತಿದ್ದರು ಎಂದು ತಮ್ಮ ಪ್ರಯಾಣದ ಅನುಭವ ಹೇಳಿದ್ದಾರೆ.
ಈ ಹಳ್ಳಿಯ ಜನರಿಗೆ ಲಸಿಕೆ ಕೊಡುವುದು ಸುಲಭವಾಗಿರಲಿಲ್ಲ. ಅದೆಷ್ಟೋ ಮಂದಿಗೆ ಕೊವಿಡ್ 19 ಲಸಿಕೆ ಬಗ್ಗೆ ಅರಿವು ಇರಲಿಲ್ಲ. ಅಂಥವರಿಗೆ ತಿಳಿವಳಿಕೆ ಮೂಡಿಸಿ, ಧೈರ್ಯ ತುಂಬಿ ಲಸಿಕೆ ಹಾಕಬೇಕಿತ್ತು. ಆದರೆ ಕೊನೆಗೂ ಎಲ್ಲರಿಗೂ ಲಸಿಕೆ ಹಾಕಿದ್ದೇವೆ. ಆ ಸಮಾಧಾನ ಖಂಡಿತ ಇದೆ ಎಂದು ಸುರೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಹಾಗೇ ಸುರೇಂದ್ರ ಕುಮಾರ್ ಮತ್ತು ಅವರ ತಂಡ ಹೀಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿ ಹಳ್ಳಿಗರಿಗೆ ಕೊರೊನಾ ವ್ಯಾಕ್ಸಿನ್ ನೀಡಿದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀನ್ ಕಸ್ವಾನ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿಯ ತಂಡ ಹಳ್ಳಿಗಳಿಗೆ ಕಾಲಿಟ್ಟ ತಕ್ಷಣ ಮೊದಲು ಅಲ್ಲಿನವರಿಗೆಲ್ಲ ಮಾಸ್ಕ್ ವಿತರಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇವರ ಶ್ರಮವನ್ನು ಗ್ರಾಮಪಂಚಾಯಿತಿ ಸದಸ್ಯರು, ಹಳ್ಳಿಯ ಜನರು ಮೆಚ್ಚಿಕೊಂಡಿದ್ದಾರೆ..ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
This is best thing you will watch today. He is Surender Kumar Meena. DM of Alipurduar, who trekked for the day through Forest & hills to reach a remote location on Bhutan border for vaccination drive. Such brings positive change. Kudos !! pic.twitter.com/oFP5C7jaAj
— Parveen Kaswan, IFS (@ParveenKaswan) June 19, 2021
ಇದನ್ನೂ ಓದಿ: ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ