Kannada News National Defence Minister Rajnath Singh External Affairs Minister S Jaishankar to brief parliament on Ukraine missile misfire into Pak
ಉಕ್ರೇನ್ ಯುದ್ಧದ ಪರಿಣಾಮ, ಪಾಕ್ ನೆಲಕ್ಕೆ ಹಾರಿದ ಭಾರತದ ಕ್ಷಿಪಣಿ ಬಗ್ಗೆ ಇಂದು ಸಂಸತ್ತಿನಲ್ಲಿ ಸರ್ಕಾರದಿಂದ ವಿವರಣೆ
ವಿದೇಶಗಳಿಂದ ಭಾರತಕ್ಕೆ ಹಿಂದಿರುಗಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಂಸತ್ತಿನಲ್ಲಿ ಇಂದು ಏನೆಲ್ಲಾ ನಡೆಯಬಹುದು ಎಂಬ ಬಗ್ಗೆ ವಿವರಿಸುವ 10 ಅಂಶಗಳು ಇಲ್ಲಿವೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್
Follow us on
ಪಾಕಿಸ್ತಾನದ ನೆಲಕ್ಕೆ ಬಿದ್ದ ಭಾರತದ ಕ್ಷಿಪಣಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಇಂದು ಸಂಸತ್ತಿನಲ್ಲಿ (Parliament Session) ವಿವರಣೆ ನೀಡಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S Jaishankar) ಅವರು ಉಕ್ರೇನ್ ಯುದ್ಧದ ಸ್ಥಿತಿಗತಿ ಮತ್ತು ಸಂಭಾವ್ಯ ಪರಿಣಾಮಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಲಿದ್ದಾರೆ. ವಿದೇಶಗಳಿಂದ ಭಾರತಕ್ಕೆ ಹಿಂದಿರುಗಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಂಸತ್ತಿನಲ್ಲಿ ಇಂದು ಏನೆಲ್ಲಾ ನಡೆಯಬಹುದು ಎಂಬ ಬಗ್ಗೆ ವಿವರಿಸುವ 10 ಅಂಶಗಳು ಇಲ್ಲಿವೆ.
ಭಾರತದಿಂದ ಹಾರಿಬಂದ ಕ್ಷಿಪಣಿ ತನ್ನ ನೆಲದಲ್ಲಿ ಬಿದ್ದ ಬಗ್ಗೆ ಪಾಕಿಸ್ತಾನ ಸರ್ಕಾರವು ಕಳೆದ ವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ದಾಖಲಿಸಿತ್ತು. ಈ ಕುರಿತು ಉನ್ನತ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಭಾರತ ಸರ್ಕಾರವು ಹೇಳಿತ್ತು. ಮಾರ್ಚ್ 9ರಂದು ದೈನಂದಿನ ನಿರ್ವಹಣೆ ಕಾರ್ಯಾಚರಣೆ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಕ್ಷಿಪಣಿಯೊಂದು ಹಾರಿ, ಪಾಕಿಸ್ತಾನದ ನೆಲದಲ್ಲಿ ಬಿದ್ದಿತ್ತು. ಘಟನೆಯ ಬಗ್ಗೆ ತೀವ್ರ ವಿವಾದ ವ್ಯಕ್ತಪಡಿಸಿದ್ದ ಭಾರತ ಸರ್ಕಾರವು, ಯಾವುದೇ ಜೀವ ಅಥವಾ ಆಸ್ತಿಗೆ ಹಾನಿಯಾಗಿಲ್ಲ ಎನ್ನುವುದು ಸಮಾಧಾನದ ವಿಷಯ ಎಂದು ಹೇಳಿತ್ತು.
ಕ್ಷಿಪಣಿ ತನ್ನ ನೆಲದತ್ತ ಹಾರಿಬಂದಿದ್ದನ್ನು ತೀವ್ರವಾಗಿ ಖಂಡಿಸಿದ್ದ ಪಾಕಿಸ್ತಾನವು ಕ್ಷಿಪಣಿ ಬಂದ ಹಾದಿಯಲ್ಲಿ ವಿಮಾನಗಳು ಸಂಚರಿಸುತ್ತಿದ್ದವು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಹಲವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಇದರಿಂದ ತೊಂದರೆಯಾಗುತ್ತಿತ್ತು. ಪಾಕ್ ವಾಯುಗಡಿಯಲ್ಲಿ ದೊಡ್ಡಮಟ್ಟದ ಅನಾಹುತ, ನಾಗರಿಕರ ಸಾವಿಗೆ ಕಾರಣವಾಗುತ್ತಿತ್ತು ಎಂದು ಪಾಕ್ ಆಕ್ರೋಶ ವ್ಯಕ್ತಪಡಿಸಿತ್ತು.
ಉಕ್ರೇನ್ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಸಂಸತ್ತಿಗೆ ವಿವರಣೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಹಲವು ಸಭೆಗಳನ್ನು ನಡೆಸಿದ್ದರು.
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರವು ವಿಶೇಷ ವಿಮಾನಗಳನ್ನು ಬಳಸಿತ್ತು. ಉಕ್ರೇನ್ನಿಂದ ಭಾರತಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಬೇಕು ಎಂಬ ಮನವಿಗಳು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಸತ್ ಪ್ರವೇಶಿಸಿದಾಗ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಸದಸ್ಯರು ಮೋದಿ ಅವರನ್ನು ‘ಮೋದಿ ಮೋದಿ’ ಘೋಷಣೆಯೊಂದಿಗೆ ಬರಮಾಡಿಕೊಂಡಿದ್ದರು. ಈ ದೃಶ್ಯವಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಉಕ್ರೇನ್ ಬಿಕ್ಕಟ್ಟು, ಹಣದುಬ್ಬರ ಮತ್ತು ನಿರುದ್ಯೋಗವನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿತ್ತು.
ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ದಿನ ಸರ್ಕಾರವು ಬುಡಕಟ್ಟು ಸಮುದಾಯಗಳಲ್ಲಿ ಕೊವಿಡ್ ಸೋಂಕು ಹರಡದಿರಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿತ್ತು.
ಪಂಜಾಬ್ ಮುಖ್ಯಮಂತ್ರಿಯಾಗಿ ಆಪ್ ನಾಯಕ ಭಗವಂತ್ ಮಾನ್ ನಾಳೆ (ಮಾರ್ಚ್ 16) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆ (ಮಾರ್ಚ್ 14) ಅವರು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 9ರವರೆಗೆ ಮುಂದುವರಿಸಲಿದೆ.
ಬಜೆಟ್ ಅಧಿವೇಶನದ ಮೊದಲಾರ್ಧವು ಫೆಬ್ರುವರಿ 1ರಿಂದ 11ರವರೆಗೆ ನಡೆದಿತ್ತು.