ಅಮಾನತಿನಲ್ಲಿರುವ ಜೈಲು ಅಧೀಕ್ಷಕ, ಅತಿಥಿಗಳ ಜತೆ ಸತ್ಯೇಂದ್ರ ಜೈನ್ ಸಭೆ; ಮತ್ತೊಂದು ವಿಡಿಯೊ ಬಹಿರಂಗ
ಇತ್ತೀಚೆಗೆ ಸಚಿವರು ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತು ಇತರ ಕೈದಿಗಳ ಜತೆ ಮಾತುಕತೆ ನಡೆಸುತ್ತಿರುವ ವಿಡಿಯೊ ಬಹಿರಂಗವಾಗಿತ್ತು. ಫ್ರೂಟ್ ಸಲಾಡ್ ಸವಿಯುತ್ತಿರುವುದೂ ಕಂಡುಬಂದಿತ್ತು.
ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ (Satyendar Jain) ತಿಹಾರ್ ಜೈಲಿನಲ್ಲಿ (Tihar Jail) ಮಸಾಜ್ ಮಾಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ವಿಡಿಯೊ ಇತ್ತೀಚೆಗೆ ವೈರಲ್ ಆಗಿ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೊ ಬಹಿರಂಗವಾಗಿದೆ. ಅಮಾನತಿನಲ್ಲಿರುವ ತಿಹಾರ್ ಜೈಲು ಅಧೀಕ್ಷಕ ಹಾಗೂ ಕೆಲವು ಮಂದಿ ಅತಿಥಿಗಳ ಜತೆ ಸಚಿವರು ಜೈಲಿನಲ್ಲಿ ಸಭೆ ನಡೆಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸುಮಾರು 10 ನಿಮಿಷಗಳ ವಿಡಿಯೊ ಇದಾಗಿದ್ದು, ಸೆಪ್ಟೆಂಬರ್ 12ರ ರಾತ್ರಿ 8 ಗಂಟೆಯದ್ದು ಎಂಬುದು ವಿಡಿಯೊದಲ್ಲಿರುವ ವಿವರಗಳಿಂದ ತಿಳಿದುಬಂದಿದೆ. ಜೈನ್ ಅವರು ಹಾಸಿಗೆಯಲ್ಲಿ ವಿರಮಿಸಿರುವಾಗ ಮೂವರು ಅವರ ಸೆಲ್ನೊಳಕ್ಕೆ ಬರುತ್ತಾರೆ. ಇದಾದ ಕೆಲವು ಕ್ಷಣಗಳ ನಂತರ ಜೈಲು ಅಧೀಕ್ಷಕ ಅಜಿತ್ ಕುಮಾರ್ ಅವರು ಬಂದು ಜೈನ್ ಜತೆ ಮಾತುಕತೆ ನಡೆಸುತ್ತಾರೆ. ಬಳಿಕ ಅಲ್ಲಿಂದ ತೆರಳಿರುವುದು ಸಿಟಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಇತ್ತೀಚೆಗೆ ಸಚಿವರು ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತು ಇತರ ಕೈದಿಗಳ ಜತೆ ಮಾತುಕತೆ ನಡೆಸುತ್ತಿರುವ ವಿಡಿಯೊ ಬಹಿರಂಗವಾಗಿತ್ತು. ಫ್ರೂಟ್ ಸಲಾಡ್ ಸವಿಯುತ್ತಿರುವುದೂ ಕಂಡುಬಂದಿತ್ತು. ತಿಹಾರ್ ಜೈಲು ಅಧಿಕಾರಿಗಳು ತಮ್ಮ ಧಾರ್ಮಿಕ ನಂಬಿಕೆಯಂತೆ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ ಮತ್ತು ವೈದ್ಯಕೀಯ ತಪಾಸಣೆಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಜೈನ್ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಈ ವಿಡಿಯೊ ಬಹಿರಂಗವಾಗಿತ್ತು. ಅತ್ಯಾಚಾರ ಆರೋಪಿಯೊಬ್ಬರಿಂದ ಸಚಿವರು ಮಸಾಜ್ ಮಾಡಿಸಿಕೊಂಡಿದ್ದರು ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ಜೈಲಿನಲ್ಲಿ ಸತ್ಯೇಂದ್ರ ಜೈನ್ಗೆ ಮಸಾಜ್ ಮಾಡಲು ವೈದ್ಯರೇ ಹೇಳಿದ್ದರು; ವೈರಲ್ ವಿಡಿಯೋಗೆ ಆಮ್ ಆದ್ಮಿ ನಾಯಕರ ಸ್ಪಷ್ಟನೆ
ಬಂಧಿತರ ಸಚಿವರಿಗೆ ತಿಹಾರ್ ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಎಪಿ, ವೈದ್ಯರ ಸಲಹೆಯ ಮೇರೆಗೆ ಸತ್ಯೇಂದ್ರ ಜೈನ್ಗೆ ಮಸಾಜ್ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು. ಜೈನ್ ಅವರು ಬಿದ್ದು ಬೆನ್ನುಹುರಿಗೆ ಪೆಟ್ಟು ಮಾಡಿಕೊಂಡಿದ್ದರಿಂದ ವೈದ್ಯರ ಶಿಫಾರಸಿನ ಮೇರೆಗೆ ಚಿಕಿತ್ಸೆ ನೀಡಲಾಗಿತ್ತು. ಅದೇ ಕಾರಣಕ್ಕೆ ಅವರಿಗೆ ಮಸಾಜ್ ಮಾಡಲಾಗುತ್ತಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟೀಕರಣ ನೀಡಿದ್ದರು.
#WATCH | More CCTV visuals of jailed Delhi Minister and AAP leader Satyendar Jain in Tihar jail come out: Sources pic.twitter.com/4c6YdJ2bAL
— ANI (@ANI) November 26, 2022
ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ಅವರನ್ನು ಜೂನ್ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರ ಜಾಮೀನು ಅರ್ಜಿ ಇತ್ತೀಚೆಗೆ ತಿರಸ್ಕೃತಗೊಂಡಿತ್ತು. ಆದರೆ, ಜೈನ್ ವಿರುದ್ಧದ ಆರೋಪಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಲ್ಲಗಳೆದಿದ್ದರು. ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣೆಗಳ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ನಾಯಕರ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ