ದೆಹಲಿಯಲ್ಲಿ ಸತತ ಏಳನೇ ದಿನವೂ ವಾಯು ಗುಣಮಟ್ಟ ಕಳಪೆ; ವಾಹನಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಸಾರಿಗೆ ಇಲಾಖೆ

ದೆಹಲಿಯಲ್ಲಿ ಸತತ ಏಳನೇ ದಿನವೂ ವಾಯು ಗುಣಮಟ್ಟ ಕಳಪೆ; ವಾಹನಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಸಾರಿಗೆ ಇಲಾಖೆ
ಪ್ರಾತಿನಿಧಿಕ ಚಿತ್ರ

Delhi Air Pollution: ದೆಹಲಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಸತತ ಏಳನೇ ದಿನವೂ ಕಳಪೆ ವಾಯು ಗುಣಮಟ್ಟ ದಾಖಲಾಗಿದೆ. ನಾಸಾ ಕೂಡ ಚಿತ್ರವನ್ನು ಹಂಚಿಕೊಂಡು ಆತಂಕ ವ್ಯಕ್ತಪಡಿಸಿದೆ.

TV9kannada Web Team

| Edited By: shivaprasad.hs

Nov 20, 2021 | 2:39 PM

ದೆಹಲಿಯಲ್ಲಿ ಸತತ ಏಳನೇ ದಿನವೂ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ. ಶನಿವಾರ ಸೂಚ್ಯಂಕದಲ್ಲಿ ಒಟ್ಟಾರೆ ಎಕ್ಯುಐ 355 ದಾಖಲಾಗಿದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಶನಿವಾರ ಬೆಳಗ್ಗೆ ಮಾಲಿನ್ಯದ ಪ್ರಮಾಣ ಸೂಚಿಸುವ ಸೂಚ್ಯಂಕ ಬಿಡುಗಡೆಗೊಳಿಸಿದೆ. ಅದರ ಪ್ರಕಾರ, ಎಕ್ಯುಐ 0 ಯಿಂದ 50ರ ಒಳಗಿದ್ದರೆ ಉತ್ತಮವೆಂದು, 51 ರಿಂದ 100ರೊಳಗಿದ್ದರೆ ಮಧ್ಯಮವೆಂದೂ, 301ರಿಂದ 400ರ ಒಳಗಿದ್ದರೆ ಕಳಪೆಯಿಂದೂ ಗುರುತಿಸಲಾಗುತ್ತದೆ. 5400-500ರ ನಡುವಿದ್ದರೆ ಅದನ್ನು ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿ ಮಾಲಿನ್ಯ ಅತ್ಯಂತ ಕಳಪೆ ಮಟ್ಟದಲ್ಲಿದೆ. ಮೂಲಗಳ ಪ್ರಕಾರ, ಭಾನುವಾರದಿಂದ ಭಾರಿ ಗಾಳಿಯನ್ನು ನಿರೀಕ್ಷಿಸಲಾಗಿದ್ದು, ಕ್ರಮೇಣ ವಾಯುಗುಣಮಟ್ಟ ಉತ್ತಮವಾಗುವ ಸಾಧ್ಯತೆ ಇದೆ.

ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಹರಸಾಹಸ ಪಡುತ್ತಿದ್ದು, ವಿವಿಧ ನಿಯಮಗಳನ್ನು ಜಾರಿಗೆ ತರು ಮುಂದಾಗುತ್ತಿದೆ. ಶುಕ್ರವಾರ ಸಾರಿಗೆ ಇಲಾಖೆ ನೀಡಿರುವ ಸೂಚನೆಯಂತೆ, ಕ್ರೋಮಿಯಮ್ ಮೂಲದ ಹಾಲೋಗ್ರಾಮ್ ಸ್ಟಿಕ್ಕರ್​ಗಳು ದೆಹಲಿಯ ಎನ್​ಸಿಟಿ ಅಡಿಯಲ್ಲಿ ನೋಂದಾಯಿತವಾದ ಎಲ್ಲಾ ವಾಹನಗಳಿಗೆ ಕಡ್ಡಾಯ ಎಂದು ತಿಳಿಸಲಾಗಿದೆ. ವಾಹನಗಳು ಹೊರಸೂಸುವ ಮಾಲಿನ್ಯದ ಪ್ರಮಾಣವನ್ನು ಸೂಚಿಸಲು ಅಂತಹ ಕಲರ್- ಕೋಡ್ ಸ್ಟಿಕ್ಕರ್ ಹೊಂದುವಂತೆ ಮಾಲಿಕರಿಗೆ ತಿಳಿಸಲಾಗಿದೆ. ಹಳೆಯ ವಾಹನಗಳ ಮಾಲೀಕರು ತಮ್ಮ ವಾಹನಗಳ ವಿಂಡ್‌ಶೀಲ್ಡ್‌ನಲ್ಲಿ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಸ್ಟಿಕ್ಕರ್‌ಗಳನ್ನು ಅಳವಡಿಸಲು ಸಂಬಂಧಪಟ್ಟ ವಿತರಕರನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಇಲಾಖೆ ಹೇಳಿದೆ. ಇದರಿಂದಾಗಿ ರಸ್ತೆಗಳಲ್ಲಿನ ತಪಾಸಣೆಯ ಸಮಯದಲ್ಲಿ ಯಾವ ಮಾದರಿಯ ವಾಹನ ಎಂದು ಗುರುತಿಸಲು ಸಹಾಯವಾಗಲಿದೆ ಎಂದು ಅದು ತಿಳಿಸಿದೆ.

ಆತಂಕದ ಸಂಗತಿಯೆಂದರೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ದೆಹಲಿಯ ಪಕ್ಕದ ನಗರಗಳಾದ, ಫರೀದಾಬಾದ್ (354), ಘಾಜಿಯಾಬಾದ್ (372), ಗ್ರೇಟರ್ ನೋಯ್ಡಾ (388), ಗುರುಗ್ರಾಮ್ (345) ಮತ್ತು ನೋಯ್ಡಾ (385)ಗಳೂ ಕೂಡ ಕಳಪೆ ವಾಯು ಗುಣಮಟ್ಟವನ್ನು ಹೊಂದಿವೆ. ಗುರುವಾರ ನಾಸಾ ಚಿತ್ರವೊಂದನ್ನು ಬಿಡುಗಡೆ ಮಾಡಿ, ಆತಂಕ ವ್ಯಕ್ತಪಡಿಸಿದೆ. ಚಿತ್ರದಲ್ಲಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ನಗರಗಳ ವಾಯು ಗುಣಮಟ್ಟವನ್ನು ಉಪಗ್ರಹ ಚಿತ್ರದ ಮುಖಾಂತರ ತೋರಿಸಲಾಗಿದೆ.

ನಾಸಾ ಹಂಚಿಕೊಂಡ ಚಿತ್ರ:

ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಬುಧವಾರ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಶಾಲಾ- ಕಾಲೇಜುಗಳ ಸುತ್ತಮುತ್ತ ಅವಶ್ಯಕ ವಸ್ತುಗಳಲ್ಲದ ಸರಕನ್ನು ಹೊತ್ತೊಯ್ಯುವ ಟ್ರಕ್​ಗಳ ಸಂಚಾರ ನಿಷೇಧವೂ ಸೇರಿದಂತೆ ಹಲವು ನಿಯಮ ಜಾರಿಗೆ ತರಲಾಗಿದೆ. ಅದಾಗ್ಯೂ ದೆಹಲಿ ಹಾಗೂ ಸುತ್ತಮುತ್ತ ನಗರಗಳ ವಾಯು ಗುಣಮಟ್ಟದ ಸಮಸ್ಯೆ ಹಾಗೂ ಅದರ ಪರಿಣಾಮಗಳು ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರನ್ನು ಕಂಗೆಡಿಸಿದೆ.

ಇದನ್ನೂ ಓದಿ:

ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ

ಈ ಕೆಲಸ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

Follow us on

Related Stories

Most Read Stories

Click on your DTH Provider to Add TV9 Kannada