ಈ ಕೆಲಸ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ
Varun Gandhi: ಕೃಷಿಕಾಯ್ದೆಗಳ ವಿರುದ್ಧದ ರೈತರ ಹೋರಾಟದ ಬಗ್ಗೆ ಅನೇಕ ಹಿರಿಯ ನಾಯಕರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರ ಪರಿಣಾಮವೇ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆಯಿತು ಎಂದೂ ವರುಣ್ ಗಾಂಧಿ ಆರೋಪ ಮಾಡಿದ್ದಾರೆ.
ದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ (BJP MP Varun Gandhi) ಈಗೀಗ ಪಕ್ಷದ ವಿರುದ್ಧ ತುಸು ತಿರುಗಿಬಿದ್ದಿದ್ದಾರೆ. ಅದರಲ್ಲೂ ರೈತರ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಕೇಂದ್ರ ಸರ್ಕಾರದ ತತ್ವ-ಸಿದ್ಧಾಂತಗಳನ್ನು ವಿರೋಧಿಸುತ್ತ ಬಂದಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರ ನಡೆದಾಗಲೂ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ವರುಣ್ ಗಾಂಧಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪ್ರಧಾನಿ ಮೋದಿಯವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ಕೆಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ ಪ್ರಧಾನಿ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು, ನೀವು ಈ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಕ್ಕೆ ತುಂಬ ಧನ್ಯವಾದಗಳು. ಆದರೆ ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಚಳವಳಿಯಲ್ಲಿ ಪ್ರಾಣತೆತ್ತ 700ಕ್ಕೂ ಹೆಚ್ಚು ಅನ್ನದಾತರು ಈಗಲೂ ಜೀವಂತವಾಗಿಯೇ ಇರುತ್ತಿದ್ದರು. ದಯವಿಟ್ಟು ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಿ ಎಂದು ವರುಣ್ ಗಾಂಧಿ ಬೇಡಿಕೆ ಇಟ್ಟಿದ್ದಾರೆ. ಹಾಗೇ, ಪ್ರತಿಭಟನಾ ನಿರತ ರೈತರ ವಿರುದ್ಧ, ಹಲವು ರಾಜಕೀಯ ಪ್ರೇರಿತ ಎಫ್ಐಆರ್ಗಳು ದಾಖಲಾಗಿವೆ. ಈ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ಅಂಥ ಅಷ್ಟೂ ಎಫ್ಐಆರ್ಗಳನ್ನು ಕೂಡಲೇ ರದ್ದುಗೊಳಿಸಿ ಎಂದೂ ಕೇಳಿಕೊಂಡಿದ್ದಾರೆ.
ವರುಣ್ ಗಾಂಧಿಯವರ ಎರಡನೇ ಬೇಡಿಕೆಯೆಂದರೆ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಬೇಕು ಎಂಬುದು. ನಮ್ಮ ದೇಶದಲ್ಲಿ ಶೇ.85ಕ್ಕಿಂತ ಜಾಸ್ತಿ ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಅಂಥ ರೈತರ ಸಬಲೀಕರಣ ಮಾಡಲು ಅವರ ಬೆಳೆಗೆ ಲಾಭದಾಯಕ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಿದ ವಿನರ್ ರೈತರು ಹೋರಾಟ ಹಿಂಪಡೆಯುವುದಿಲ್ಲ. ಹಾಗಾಗಿ ರೈತರು ಮತ್ತು ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಕೂಡಲೇ ಈ ಬೇಡಿಕೆ ಈಡೇರಿಸಬೇಕು ಎಂದೂ ಹೇಳಿದ್ದಾರೆ.
ಇದೇ ವೇಳೆ ಲಖಿಂಪುರ ಖೇರಿ ಹಿಂಸಾಚಾರವನ್ನೂ ಪ್ರಸ್ತಾಪ ಮಾಡಿದ ವರುಣ್ ಗಾಂಧಿ, ಕೃಷಿಕಾಯ್ದೆಗಳ ವಿರುದ್ಧದ ರೈತರ ಹೋರಾಟದ ಬಗ್ಗೆ ಅನೇಕ ಹಿರಿಯ ನಾಯಕರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರ ಪರಿಣಾಮವೇ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ. ಅದರಲ್ಲಿ ಒಟ್ಟು ಐದು ಮಂದಿ ರೈತರು ಮೃತಪಟ್ಟಿದ್ದು ಖೇದನೀಯ. ಈ ಪ್ರಕರಣದಲ್ಲಿ ಕೇಂದ್ರ ಸಚಿವರು ಮತ್ತುವರ ಪುತ್ರನ ಹೆಸರು ಕೇಳಿಬರುತ್ತಿದ್ದು, ಆ ಕೇಂದ್ರ ಸಚಿವರ ವಿರುದ್ಧ ನೀವು ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದಾರೆ. ವರುಣ್ ಗಾಂಧಿ ಇತ್ತೀಚೆಗೆ ಪದೇಪದೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು. ಅದರ ಬೆನ್ನಲ್ಲೇ ಅವರನ್ನು ಈ ಬಾರಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದಲೂ ಕೈಬಿಡಲಾಗಿದೆ.
I welcome the announcement of the withdrawal of the 3 #FarmLaws. It is my humble request that the demand for a law on MSP & other issues must also be decided upon immediately, so our farmers can return home after ending their agitation.
My letter to the Hon’ble Prime Minister: pic.twitter.com/6eh3C6Kwsz
— Varun Gandhi (@varungandhi80) November 20, 2021
ಇದನ್ನೂ ಓದಿ: Kartik Aaryan: ಲ್ಯಾಂಬೋರ್ಗಿನಿಯಲ್ಲಿ ತೆರಳಿ ರಸ್ತೆ ಬದಿ ತಿಂಡಿ ಸವಿದ ಕಾರ್ತಿಕ್ ಆರ್ಯನ್
ಲಕ್ನೋ: ಉನ್ನತ ಮಟ್ಟದ ಭದ್ರತಾ ಸಮಾವೇಶದಲ್ಲಿ ಭಾಗಿಯಾದ ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಅಜಿತ್ ದೋವಲ್
Published On - 1:55 pm, Sat, 20 November 21