
ನವದೆಹಲಿ, ನವೆಂಬರ್ 05: ದೆಹಲಿಯಲ್ಲಿ ಮೂರು ಅಂತಸ್ಥಿನ ಕಟ್ಟಡ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ದೆಹಲಿಯ ಜನನಿಬಿಡ ಚಾವರಿ ಬಜಾರ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತದ ಘಟನೆ ಆತಂಕ ಮೂಡಿಸಿದೆ. ಹಳೆಯ ದೆಹಲಿಯ ಜನನಿಬಿಡ ಚಾವರಿ ಬಜಾರ್ ಪ್ರದೇಶದಲ್ಲಿ ಗುರುವಾರ (ನವೆಂಬರ್ 5) ಬೆಳಗ್ಗೆ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಆರು ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ಚಾವರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪವಿರುವ ಗಲಿ ಸಿತಾರಾ ಪ್ರದೇಶದಲ್ಲಿ ಬೆಳಗ್ಗೆ ಸುಮಾರು 9.50ಕ್ಕೆ ಈ ಘಟನೆ ಸಂಭವಿಸಿದೆ. ನಿರ್ಮಾಣ ಕಾರ್ಯ ನಡೆಯುತ್ತಿದ್ದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಕುಸಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿವೆ. ನೀರಿನ ಟ್ಯಾಂಕರ್ಗಳು ಮತ್ತು ರಕ್ಷಣಾ ವಾಹನಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಚಾವರಿ ಬಜಾರ್ ಘಟನೆಗೂ ಮೊದಲು ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಅಕ್ಟೋಬರ್ 7ರಂದು ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದಿತ್ತು. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ಎನ್ಡಿಆರ್ಎಫ್, ದೆಹಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿ ಭಾಗವಹಿಸಿದ್ದರು. ಆ ಕಟ್ಟಡದ ಪಕ್ಕದಲ್ಲಿ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯದಿಂದ ಉಂಟಾದ ಕಂಪನ ಅಥವಾ ಕಟ್ಟಡದ ದುರ್ಬಲ ಅಡಿಪಾಯ ಕಾರಣವಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಲಾಗಿದೆ.
160 ವರ್ಷ ಹಳೆಯ ಟೌನ್ ಹಾಲ್ನ ಭಾಗವೂ ಕುಸಿತ
ಇದೇ ವೇಳೆ, ಹಳೆಯ ದೆಹಲಿಯ ಚಾಂದನಿ ಚೌಕ್ನಲ್ಲಿರುವ 160 ವರ್ಷಕ್ಕೂ ಹಳೆಯದಾದ ಐತಿಹಾಸಿಕ ಟೌನ್ ಹಾಲ್ ಕಟ್ಟಡದ ಒಂದು ಭಾಗವೂ ಕುಸಿದಿದೆ. ಭಾರೀ ಮಳೆಯ ನಂತರ ಕಟ್ಟಡದ ಪ್ರವೇಶದ್ವಾರದ ಮೇಲ್ಛಾವಣಿ, ದೊಡ್ಡ ಕಂಬಗಳು ಮತ್ತು ಮೊದಲ ಮಹಡಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಈ ಕಟ್ಟಡ ದೆಹಲಿ ಮಹಾನಗರ ಪಾಲಿಕೆಯ ಒಡೆತನದಲ್ಲಿದೆ. ಹಲವು ವರ್ಷಗಳಿಂದ ಹೆಚ್ಚಾಗಿ ಬಳಕೆಯಾಗದೆ ಇರುವ ಈ ಕಟ್ಟಡದ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಈ ಕುಸಿತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕಟ್ಟಡಗಳ ಸುರಕ್ಷತೆ ಬಗ್ಗೆ ಪ್ರಶ್ನೆ
ದೆಹಲಿಯಲ್ಲಿ ಒಂದರ ಹಿಂದೆ ಒಂದರಂತೆ ಕಟ್ಟಡಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡಗಳ ಸುರಕ್ಷತೆ, ಅಕ್ರಮ ನಿರ್ಮಾಣ ಮತ್ತು ಮಹಾನಗರ ಪಾಲಿಕೆಯ ಪರಿಶೀಲನೆಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಸತ್ಯ ನಿಕೇತನ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್ ವಸತಿಯಾಗಿ ಬಳಸುತ್ತಿದ್ದ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟಿದ್ದರು. ಆ ಘಟನೆಯ ನಂತರ ದೆಹಲಿ ಮಹಾನಗರ ಪಾಲಿಕೆ ಅಕ್ರಮ ನಿರ್ಮಾಣ ಮತ್ತು ಅಪಾಯಕಾರಿ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಸಾವಿರಕ್ಕೂ ಹೆಚ್ಚು ಆಸ್ತಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ವರದಿಯಾಗಿದೆ.
ಆದರೂ ಇಂತಹ ಘಟನೆಗಳು ಮುಂದುವರಿಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಳೆಯ ಕಟ್ಟಡಗಳ ಪರಿಶೀಲನೆ, ನಿರ್ಮಾಣ ನಿಯಮಗಳ ಪಾಲನೆ ಮತ್ತು ಅಪಾಯಕಾರಿ ಕಟ್ಟಡಗಳ ವಿರುದ್ಧ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಚಾವರಿ ಬಜಾರ್ನ ಕಟ್ಟಡ ಕುಸಿತ ದೆಹಲಿಯ ಕಟ್ಟಡ ಸುರಕ್ಷತೆಯ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕವೇ ಘಟನೆಯಲ್ಲಿನ ಸಾವು-ನೋವು ಮತ್ತು ಕುಸಿತಕ್ಕೆ ನಿಖರ ಕಾರಣ ತಿಳಿಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ