AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9ನೇ ತರಗತಿಯಲ್ಲೇ ಹಣಕಾಸಿನ ಪಾಠ! ಮ್ಯೂಚುವಲ್ ಫಂಡ್, ತೆರಿಗೆ, ಸಾಲದ ಬಗ್ಗೆ ಕಲಿಸಲಿರುವ ಎನ್​ಸಿಇಆರ್​ಟಿ

9ನೇ ತರಗತಿ ವಿದ್ಯಾರ್ಥಿಗಳು ಇನ್ನು ಶಾಲೆಯಲ್ಲೇ ಹಣಕಾಸು ನಿರ್ವಹಣೆ, ಉದ್ಯಮಶೀಲತೆಯ ಪಾಠ ಕಲಿಯಲಿದ್ದಾರೆ. ಎನ್‌ಸಿಇಆರ್‌ಟಿ ಹೊಸ ಪಠ್ಯಕ್ರಮದಡಿ ‘ವೈಯಕ್ತಿಕ ಹಣಕಾಸು ನಿರ್ವಹಣೆ’ ಮತ್ತು ‘ಐಡಿಯಾಗಳಿಂದ ಸ್ಟಾರ್ಟ್‌ಅಪ್‌ಗಳಿಗೆ’ ಅಧ್ಯಾಯಗಳನ್ನು ಪರಿಚಯಿಸಿದೆ. ಹಣ ಉಳಿತಾಯ, ಹೂಡಿಕೆ, ತೆರಿಗೆ, ಸಾಲ ಹಾಗೂ ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಮಕ್ಕಳಿಗೆ ಪ್ರಾಥಮಿಕ ಜ್ಞಾನ ನೀಡಿ, ಭವಿಷ್ಯದ ಆರ್ಥಿಕ ನಿರ್ಧಾರಗಳಿಗೆ ಸಜ್ಜುಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

9ನೇ ತರಗತಿಯಲ್ಲೇ ಹಣಕಾಸಿನ ಪಾಠ! ಮ್ಯೂಚುವಲ್ ಫಂಡ್, ತೆರಿಗೆ, ಸಾಲದ ಬಗ್ಗೆ ಕಲಿಸಲಿರುವ ಎನ್​ಸಿಇಆರ್​ಟಿ
ವಿದ್ಯಾರ್ಥಿಗಳು -ಸಾಂದರ್ಭಿಕ ಚಿತ್ರImage Credit source: DNA India
ನಯನಾ ರಾಜೀವ್
|

Updated on: Nov 05, 2026 | 10:06 AM

Share

ನವದೆಹಲಿ, ನವೆಂಬರ್ 05: ಇನ್ನು 9ನೇ ತರಗತಿಯ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಇತಿಹಾಸದ ಜೊತೆಗೆ ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು, ತೆರಿಗೆ ಎಂದರೇನು ಎಂಬುದನ್ನೂ ಕಲಿಯಲಿದ್ದಾರೆ. ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ಅರಿವು ಮೂಡಿಸಲು ಎನ್‌ಸಿಇಆರ್‌ಟಿ ಹೊಸ ಪ್ರಯತ್ನ ಮಾಡಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವೈಯಕ್ತಿಕ ಹಣಕಾಸು ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಎರಡು ಹೊಸ ಅಧ್ಯಾಯಗಳನ್ನು ಸೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಣ ನಿರ್ವಹಣೆ ಮತ್ತು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ  ಸ್ವಲ್ಪ ಜ್ಞಾನ ಸಿಗಲಿದೆ.

ಶಾಲೆಯಲ್ಲಿ ಓದುವಾಗಲೇ ಹಣದ ಮಹತ್ವ ತಿಳಿದುಕೊಂಡರೆ ಭವಿಷ್ಯದಲ್ಲಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ. ಈ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಎರಡು ಹೊಸ ಅಧ್ಯಾಯಗಳನ್ನು ಪರಿಚಯಿಸಿದೆ.

‘ನಿಮ್ಮ ವೈಯಕ್ತಿಕ ಹಣಕಾಸು ನಿರ್ವಹಣೆ’ ಮತ್ತು ‘ಐಡಿಯಾಗಳಿಂದ ಸ್ಟಾರ್ಟ್‌ಅಪ್‌ಗಳಿಗೆ’ ಎಂಬ ಎರಡು ಅಧ್ಯಾಯಗಳ ಮೂಲಕ ವಿದ್ಯಾರ್ಥಿಗಳಿಗೆ ಹಣ ಉಳಿಸುವುದು, ಹೂಡಿಕೆ ಮಾಡುವುದು, ತೆರಿಗೆ ಪಾವತಿಸುವುದು ಮತ್ತು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಹಣವನ್ನು ಹೇಗೆ ನಿರ್ವಹಿಸಬೇಕು ಎಂಬ ಪಾಠ

ಮೊದಲ ಅಧ್ಯಾಯದಲ್ಲಿ ವೈಯಕ್ತಿಕ ಹಣಕಾಸಿನ ಬಗ್ಗೆ ಸರಳವಾಗಿ ವಿವರಿಸಲಾಗಿದೆ. ನಮ್ಮ ಬಳಿ ಬರುವ ಹಣವನ್ನು ಹೇಗೆ ಬಳಸಬೇಕು? ಎಷ್ಟು ಖರ್ಚು ಮಾಡಬೇಕು? ಎಷ್ಟು ಉಳಿಸಬೇಕು? ಉಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಎಂಬ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯಲಿದ್ದಾರೆ.

ಈ ಅಧ್ಯಾಯದಲ್ಲಿ ಮುಖ್ಯವಾಗಿ ಐದು ವಿಷಯಗಳಿವೆ

– ಆದಾಯ: ಹಣ ಎಲ್ಲಿಂದ ಬರುತ್ತದೆ ಮತ್ತು ಅದನ್ನು ಹೇಗೆ ಬಳಸಬೇಕು? – ಬಜೆಟ್: ತಿಂಗಳ ಖರ್ಚು ಮತ್ತು ಉಳಿತಾಯಕ್ಕೆ ಹಣವನ್ನು ಹೇಗೆ ಹಂಚಬೇಕು? – ಉಳಿತಾಯ: ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಹೇಗೆ ಉಳಿಸಬೇಕು? – ಹೂಡಿಕೆ: ಉಳಿಸಿದ ಹಣವನ್ನು ಹೇಗೆ ಬೆಳೆಸಬಹುದು? – ರಕ್ಷಣೆ ಮತ್ತು ಅಪಾಯ ನಿರ್ವಹಣೆ: ಹಣಕಾಸಿನ ನಷ್ಟದಿಂದ ಹೇಗೆ ರಕ್ಷಿಸಿಕೊಳ್ಳಬೇಕು?

ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ ಬಗ್ಗೆಯೂ ಪಾಠ

ಇದುವರೆಗೆ ಹೂಡಿಕೆ, ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಮಾಹಿತಿ ಹುಡುಕಬೇಕಿತ್ತು. ಆದರೆ ಈಗ ಈ ವಿಷಯಗಳ ಮೂಲಭೂತ ಪರಿಚಯವನ್ನು ಪಠ್ಯಪುಸ್ತಕದಲ್ಲೇ ನೀಡಲಾಗುತ್ತಿದೆ. ಸ್ಥಿರ ಠೇವಣಿ ಅಂದರೆ ಎಫ್​ಡಿ, ಸರ್ಕಾರಿ ಉಳಿತಾಯ ಯೋಜನೆಗಳು, ಬಾಂಡ್‌ಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.

ಮ್ಯೂಚುವಲ್ ಫಂಡ್ ಎಂದರೆ ಹಲವು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಅದನ್ನು ಷೇರುಗಳು ಅಥವಾ ಬಾಂಡ್‌ಗಳಂತಹ ವಿವಿಧ ಹೂಡಿಕೆಗಳಲ್ಲಿ ಬಳಸುವ ವ್ಯವಸ್ಥೆ. ಈ ಹೂಡಿಕೆಯನ್ನು ಸಾಮಾನ್ಯವಾಗಿ ತಜ್ಞರು ನಿರ್ವಹಿಸುತ್ತಾರೆ.

ಇದರ ಜೊತೆಗೆ ಎಸ್​ಐಪಿ ಬಗ್ಗೆಯೂ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಎಸ್​ಐಪಿ ಎಂದರೆ ಪ್ರತಿ ತಿಂಗಳು ಅಥವಾ ನಿಗದಿತ ಅವಧಿಯಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ವಿಧಾನ.

ಹೂಡಿಕೆಯಲ್ಲಿ ಲಾಭದ ಸಾಧ್ಯತೆ ಇರುವಂತೆಯೇ ನಷ್ಟದ ಅಪಾಯವೂ ಇರುತ್ತದೆ ಎಂಬುದನ್ನು ಪಠ್ಯಪುಸ್ತಕ ವಿವರಿಸುತ್ತದೆ. ಹಣದುಬ್ಬರ, ಚಕ್ರಬಡ್ಡಿ ಮತ್ತು ಹೂಡಿಕೆಯಲ್ಲಿನ ಅಪಾಯ ಹಾಗೂ ಆದಾಯದ ನಡುವಿನ ಸಂಬಂಧವನ್ನೂ ಕಲಿಸಲಾಗುತ್ತದೆ.

ಇದನ್ನೂ ಓದಿ: ಕನ್ನಡ ವಿಷಯವೇ ಮಕ್ಕಳಿಗೆ ಕಬ್ಬಿಣದ ಕಡಲೆಯಾಯ್ತಾ? SSLCಯಲ್ಲಿ 1.65 ಲಕ್ಷ ವಿದ್ಯಾರ್ಥಿಗಳು ಫೇಲ್; ಪಠ್ಯಪುಸ್ತಕ ಪರಿಷ್ಕರಣೆಗೆ ಶಿಫಾರಸು!

ಸಾಲ, ಇಎಂಐಮತ್ತು ತೆರಿಗೆ ಲೆಕ್ಕಾಚಾರವೂ ಕಲಿಕೆ

ಹಣಕಾಸಿನ ನಿರ್ವಹಣೆಯಲ್ಲಿ ಸಾಲ ಮತ್ತು ತೆರಿಗೆಯೂ ಮುಖ್ಯ. ಹೀಗಾಗಿ ಹೊಸ ಅಧ್ಯಾಯದಲ್ಲಿ ಸಾಲ ಪಡೆಯುವುದು, ಸಾಲ ಮರುಪಾವತಿ ಮಾಡುವುದು, ವಿಮೆ ಮತ್ತು ಇಎಂಐ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಇಎಂಐ ಎಂದರೆ ಸಮಾನ ಮಾಸಿಕ ಕಂತು. ಉದಾಹರಣೆಗೆ, ಮನೆ ಅಥವಾ ವಾಹನ ಖರೀದಿಸಲು ಬ್ಯಾಂಕ್‌ನಿಂದ ಸಾಲ ಪಡೆದರೆ, ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸಬೇಕಾಗುತ್ತದೆ. ಇದನ್ನೇ ಇಎಂಐ ಎನ್ನುತ್ತಾರೆ. ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿರುವ ತೆರಿಗೆ ಸ್ಲ್ಯಾಬ್‌ಗಳ ಪರಿಚಯವನ್ನೂ ನೀಡಲಾಗಿದೆ. ಅಷ್ಟೇ ಅಲ್ಲದೆ, ಕೆಲವು ಉದಾಹರಣೆಗಳ ಮೂಲಕ ತೆರಿಗೆ ಲೆಕ್ಕಾಚಾರ ಮಾಡುವ ವಿಧಾನವನ್ನೂ ವಿವರಿಸಲಾಗಿದೆ.

ಸ್ವಂತ ಉದ್ಯಮ ಆರಂಭಿಸುವುದು ಹೇಗೆ?

ಎರಡನೇ ಅಧ್ಯಾಯದ ಹೆಸರು ‘ಐಡಿಯಾಗಳಿಂದ ಸ್ಟಾರ್ಟ್‌ಅಪ್‌ಗಳಿಗೆ’ ಅಂದರೆ ಒಂದು ಹೊಸ ಆಲೋಚನೆಯನ್ನು ವ್ಯವಹಾರವಾಗಿ ಹೇಗೆ ರೂಪಿಸಬಹುದು ಎಂಬುದನ್ನು ಈ ಅಧ್ಯಾಯ ತಿಳಿಸಿಕೊಡುತ್ತದೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಗೆ ಹೊಸ ಉತ್ಪನ್ನ ತಯಾರಿಸುವ ಅಥವಾ ಸೇವೆ ಆರಂಭಿಸುವ ಆಲೋಚನೆ ಬಂದರೆ ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು? ಅದಕ್ಕೆ ಎಷ್ಟು ಹಣ ಬೇಕು? ಗ್ರಾಹಕರನ್ನು ಹೇಗೆ ತಲುಪಬೇಕು? ಲಾಭ ಗಳಿಸುವುದು ಹೇಗೆ? ಎಂಬುದರ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಲಾಗುತ್ತದೆ.

ಪೋಸ್ಟ್

– ವ್ಯವಹಾರ ಯೋಜನೆ ರೂಪಿಸುವುದು.

– ವ್ಯಾಪಾರ ಆರಂಭಿಸಲು ಬೇಕಾದ ಸಿದ್ಧತೆ.

– ಹಣಕಾಸು ಮತ್ತು ನಿರ್ವಹಣೆಯ ಜವಾಬ್ದಾರಿಗಳು.

– ಲಾಭ ಮತ್ತು ನಷ್ಟದ ಲೆಕ್ಕಾಚಾರ.

– ಹೊಸ ಆಲೋಚನೆಗಳನ್ನು ಉದ್ಯಮವಾಗಿ ರೂಪಿಸುವುದು. ಮುಂತಾದ ವಿಷಯಗಳನ್ನು ಪರಿಚಯಿಸಲಾಗುತ್ತದೆ.

ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಉದ್ಯಮಗಳ ಮಹತ್ವ

ಭಾರತದಲ್ಲಿ ಹೊಸ ಹೊಸ ಉದ್ಯಮಗಳು ಆರಂಭವಾಗುತ್ತಿವೆ. ಇವುಗಳಲ್ಲಿ ಕೆಲವು ಸಣ್ಣ ಮಟ್ಟದಲ್ಲಿ ಆರಂಭವಾಗಿ ದೊಡ್ಡ ಕಂಪನಿಗಳಾಗಿ ಬೆಳೆಯುತ್ತವೆ. ಇಂತಹ ಉದ್ಯಮಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತಿಳಿಸಲು ಭಾರತೀಯ ಉದ್ಯಮಗಳ ಉದಾಹರಣೆಗಳನ್ನು ಪಠ್ಯಪುಸ್ತಕದಲ್ಲಿ ಬಳಸಲಾಗಿದೆ.

ಜೊತೆಗೆ ಎಂಎಸ್​ಎಂಇ ಎಂದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಇಂತಹ ಉದ್ಯಮಗಳು ದೇಶದಲ್ಲಿ ಉದ್ಯೋಗ ಸೃಷ್ಟಿಸಲು, ಹೊಸ ಉತ್ಪನ್ನಗಳನ್ನು ತಯಾರಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಉದ್ಯಮ ಆರಂಭಿಸುವುದು ಎಂದರೆ ಕೇವಲ ಹಣ ಗಳಿಸುವುದಲ್ಲ. ಹೊಸ ಆಲೋಚನೆಗಳನ್ನು ಜಾರಿಗೆ ತರುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಇತರರಿಗೆ ಉದ್ಯೋಗ ನೀಡುವುದೂ ಆಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.

ಈಗಿನ ಕಾಲಕ್ಕೆ ಹಣಕಾಸಿನ ಜ್ಞಾನ ಏಕೆ ಮುಖ್ಯ?

ಇಂದಿನ ದಿನಗಳಲ್ಲಿ ಮೊಬೈಲ್ ಮೂಲಕವೇ ಬ್ಯಾಂಕಿಂಗ್, ಹಣ ವರ್ಗಾವಣೆ ಮತ್ತು ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ಮತ್ತು ಎಸ್​ಐಪಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಮಾಹಿತಿ ಲಭ್ಯವಿದೆ. ಆದರೆ ಸರಿಯಾದ ಮಾಹಿತಿ ಇಲ್ಲದೆ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುವ ಅಪಾಯವೂ ಇದೆ. ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿನ ತಪ್ಪು ಸಲಹೆಗಳನ್ನು ನಂಬಿ ಜನರು ಹಣಕಾಸಿನ ತೊಂದರೆಗೆ ಸಿಲುಕುತ್ತಾರೆ.

ಹೀಗಾಗಿ ಶಾಲಾ ಹಂತದಲ್ಲೇ ಹಣಕಾಸಿನ ಮೂಲಭೂತ ಜ್ಞಾನ ನೀಡುವುದು ಮುಖ್ಯವಾಗಿದೆ. ಹಣ ಉಳಿಸುವುದು, ಖರ್ಚು ನಿಯಂತ್ರಿಸುವುದು ಮತ್ತು ಹೂಡಿಕೆಯ ಅಪಾಯವನ್ನು ಅರ್ಥಮಾಡಿಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಕವಾಗಬಹುದು.

ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಬದಲಾವಣೆ

ಈ ಹೊಸ ಅಧ್ಯಾಯಗಳು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023ರ ಅಡಿಯಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಬದಲಾವಣೆಗಳ ಭಾಗವಾಗಿವೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಓದುವುದಷ್ಟೇ ಅಲ್ಲದೆ, ನಿತ್ಯ ಜೀವನದಲ್ಲಿ ಉಪಯೋಗವಾಗುವ ಕೌಶಲ್ಯಗಳನ್ನೂ ಕಲಿಯಬೇಕು ಎಂಬುದು ಈ ಬದಲಾವಣೆಯ ಉದ್ದೇಶ.

ಹೀಗಾಗಿ ಹಣಕಾಸು ಶಿಕ್ಷಣ, ಉದ್ಯಮಶೀಲತೆ, ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್‌ನಂತಹ ಹೊಸ ವಿಷಯಗಳಿಗೂ ಪಠ್ಯಕ್ರಮದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಅವರು ಕೂಡ ಹೊಸ ಪಠ್ಯಪುಸ್ತಕದಲ್ಲಿನ ಈ ಬದಲಾವಣೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉಪಯೋಗವಾಗುವ ಹಣಕಾಸಿನ ಜ್ಞಾನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇನ್ನು ಪಠ್ಯಪುಸ್ತಕದಲ್ಲೇ ಹಣದ ಮೌಲ್ಯ, ಉಳಿತಾಯ, ಹೂಡಿಕೆ, ತೆರಿಗೆ ಮತ್ತು ಉದ್ಯಮ ಆರಂಭಿಸುವ ಪಾಠ ಸಿಗಲಿದೆ. ಓದಿನ ಜೊತೆಗೆ ಬದುಕಿಗೆ ಬೇಕಾದ ಆರ್ಥಿಕ ಜ್ಞಾನವನ್ನೂ ನೀಡುವ ಪ್ರಯತ್ನ ಇದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು