ಕನ್ನಡ ವಿಷಯವೇ ಮಕ್ಕಳಿಗೆ ಕಬ್ಬಿಣದ ಕಡಲೆಯಾಯ್ತಾ? SSLCಯಲ್ಲಿ 1.65 ಲಕ್ಷ ವಿದ್ಯಾರ್ಥಿಗಳು ಫೇಲ್; ಪಠ್ಯಪುಸ್ತಕ ಪರಿಷ್ಕರಣೆಗೆ ಶಿಫಾರಸು!
2025-26ನೇ ಸಾಲಿನ SSLC ಕನ್ನಡ ಪರೀಕ್ಷೆಯಲ್ಲಿ 1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಆತಂಕ ಮೂಡಿಸಿದೆ. ತಜ್ಞರ ಸಮಿತಿಯು ಪಠ್ಯಪುಸ್ತಕ ಪರಿಷ್ಕರಣೆ, ಸರಳ ಕನ್ನಡ ಪದಗಳ ಬಳಕೆ, ಶಿಕ್ಷಕರ ಬೋಧನಾ ವಿಧಾನ ಸುಧಾರಣೆ ಮತ್ತು ಕನ್ನಡ ಮಾಧ್ಯಮದವರಿಗೆ ಉದ್ಯೋಗ ಮೀಸಲಾತಿ ಹೆಚ್ಚಿಸಲು ಶಿಫಾರಸು ಮಾಡಿದೆ.

ಬೆಂಗಳೂರು, ಅಕ್ಟೋಬರ್ 31: ಕನ್ನಡಿಗರ ಮಕ್ಕಳಿಗೆ ಕನ್ನಡ ಕಬ್ಬಿಣದ ಕಡಲೆ ಆಗಿದೆಯಾ, ಮಾತೃ ಭಾಷೆಯಲ್ಲೇ ಮಕ್ಕಳ ಕಲಿಕೆ ಕಷ್ಟವಾಗುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಏಕೆಂದರೆ 2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ 1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಫೇಲ್ ಆಗಿದ್ದಾರೆ. ಈ ಆಘಾತಕಾರಿ ಫಲಿತಾಂಶ ಬೆನ್ನಲ್ಲೇ ಕನ್ನಡ ಪಠ್ಯಪುಸ್ತಕಗಳ ಪರಿಷ್ಕರಣೆಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಆತಂಕ ಮೂಡಿಸಿದ ಕನ್ನಡ ವಿಷಯದ ಫಲಿತಾಂಶ
ಮಕ್ಕಳಿಗೆ ಕನ್ನಡ ಕಲಿಕೆ ಕಷ್ಟವಾಗುತ್ತಿದೆಯಾ, ಮಾತೃ ಭಾಷೆಯಲ್ಲೇ ಮಕ್ಕಳು ಹಿಂದೆ ಬೀಳುತ್ತಿದ್ದಾರಾ? ಇಂತಹದ್ದೊಂದು ಪ್ರಶ್ನೆ ಇದೀಗ ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ 2025-26ನೇ ಸಾಲಿನ SSLC ಪರೀಕ್ಷೆಯ ಕನ್ನಡ ವಿಷಯದ ಫಲಿತಾಂಶ ಆತಂಕ ಮೂಡಿಸಿದೆ.
1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಫೇಲ್
ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಬರೋಬ್ಬರಿ 1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಅನುತ್ತೀರ್ಣರಾಗಿದ್ದಾರೆ. ಅಂದರೆ ಪರೀಕ್ಷೆ ಬರೆದ ಪ್ರತಿ 100 ವಿದ್ಯಾರ್ಥಿಗಳಲ್ಲಿ ಸುಮಾರು 22 ಮಕ್ಕಳು ಕನ್ನಡ ವಿಷಯದಲ್ಲಿ ಫೇಲ್ ಆಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕನ್ನಡ ಭಾಷಾ ಬೋಧನೆ ಮತ್ತು ಪಠ್ಯಕ್ರಮದ ಬಗ್ಗೆ ತಜ್ಞರ ಸಮಿತಿ ಮಹತ್ವದ ಶಿಫಾರಸು ಮಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ 3 ವರ್ಷ ಅನುಮತಿ ಇಲ್ಲ: ಸರ್ಕಾರದಿಂದ ಕರಡು ಅಧಿಸೂಚನೆ
ಕನ್ನಡದಲ್ಲಿ ಮಕ್ಕಳು ಹಿಂದೆ ಬೀಳಲು ಪಠ್ಯಪುಸ್ತಕಗಳಲ್ಲಿರುವ ಕಠಿಣ ಪದಗಳೂ ಒಂದು ಕಾರಣವಾಗಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಮನೆಯಲ್ಲಿ ದಿನನಿತ್ಯ ಬಳಸದ, ಮಕ್ಕಳಿಗೆ ಸುಲಭವಾಗಿ ಅರ್ಥವಾಗದ ಪದಗಳು ಪಠ್ಯಪುಸ್ತಕಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಸಂಸ್ಕೃತ ಮೂಲದ ಕಠಿಣ ಪದಗಳ ಬಳಕೆ ಮಕ್ಕಳಿಗೆ ಭಾಷೆ ಕಲಿಯುವ ಆಸಕ್ತಿಯನ್ನೇ ಕಡಿಮೆ ಮಾಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ತಜ್ಞರ ಸಮಿತಿಯ ಶಿಫಾರಸು ಏನು?
ಹೀಗಾಗಿ ಈಗಿನ ಕಾಲಕ್ಕೆ ತಕ್ಕಂತೆ ಕನ್ನಡ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಸಂಸ್ಕೃತ ಮೂಲದ ಕಠಿಣ ಪದಗಳ ಬದಲಿಗೆ ಸರಳ ಕನ್ನಡ ಪದಗಳ ಬಳಕೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಗೆ ಆದ್ಯತೆ. ಅನಗತ್ಯ ಪಠ್ಯಗಳನ್ನು ಕೈಬಿಟ್ಟು ಪುಸ್ತಕಗಳ ಸಂಕ್ಷಿಪ್ತಗೊಳಿಸುವಿಕೆ. ಸಮಕಾಲೀನ ವಿಚಾರಗಳಿಗೆ ಅನುಗುಣವಾಗಿ ಪಠ್ಯಕ್ರಮ ಬದಲಾವಣೆ ಮಕ್ಕಳ ಭಾಷಾ ಗ್ರಹಿಕೆ ಮತ್ತು ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಪಠ್ಯ ರೂಪಿಸುವುದು. ಅಂದರೆ ಕನ್ನಡ ಭಾಷೆಯ ಶ್ರೀಮಂತಿಕೆಗೆ ಧಕ್ಕೆಯಾಗದಂತೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಕನ್ನಡ ಕಲಿಸುವುದು ತಜ್ಞರ ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಕೇವಲ ಪಠ್ಯಪುಸ್ತಕ ಬದಲಾವಣೆಯಿಂದ ಮಾತ್ರ ಕನ್ನಡ ಕಲಿಕೆ ಸುಧಾರಣೆ ಸಾಧ್ಯವಿಲ್ಲ. ಕನ್ನಡ ಬೋಧಿಸುವ ಶಿಕ್ಷಕರ ಬೋಧನಾ ವಿಧಾನವೂ ಬದಲಾಗಬೇಕು ಎನ್ನುವ ಸಲಹೆಯನ್ನು ತಜ್ಞರ ಸಮಿತಿ ನೀಡಿದೆ. ಮಕ್ಕಳಿಗೆ ಕನ್ನಡವನ್ನು ಆಸಕ್ತಿದಾಯಕವಾಗಿ ಮತ್ತು ಸುಲಭವಾಗಿ ಕಲಿಸುವ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕನ್ನಡ ಬೋಧನೆ ಮಾಡುವ ಶಿಕ್ಷಕರಿಗೆ ಸಮರ್ಪಕ ತರಬೇತಿ ನೀಡಬೇಕು. ಭಾಷೆಯ ಮೇಲಿನ ಭಯ ಹೋಗಲಾಡಿಸಿ, ಕನ್ನಡ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.
ಉದ್ಯೋಗಾವಕಾಶದಲ್ಲೂ ಹೆಚ್ಚಿನ ಆದ್ಯತೆಗೆ ಸಲಹೆ
ಇನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉದ್ಯೋಗಾವಕಾಶಗಳಲ್ಲೂ ಹೆಚ್ಚಿನ ಆದ್ಯತೆ ನೀಡಬೇಕೆಂಬ ಸಲಹೆ ಮುಂದಿಟ್ಟಿದೆ. ಕನ್ನಡ ಮಾಧ್ಯಮದ ಮಕ್ಕಳಿಗೆ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಲಗಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.100 ಮೀಸಲಾತಿಗೆ ಸಲಹೆ ನೀಡಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ, ಕನ್ನಡ ಭಾಷಾ ಬೋಧನೆಯ ಗುಣಮಟ್ಟ ಹೆಚ್ಚಿಸಲು ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಒಟ್ಟಿನಲ್ಲಿ ಕನ್ನಡ ಕಲಿಕೆ ಕೇವಲ ಪರೀಕ್ಷೆಗೆ ಸೀಮಿತವಾಗಬಾರದು, ಮಕ್ಕಳಿಗೆ ಕನ್ನಡ ಅರ್ಥವಾಗಬೇಕು. ಭಾಷೆಯ ಮೇಲೆ ಪ್ರೀತಿ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಸಮಿತಿ ಹಲವು ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ತಜ್ಞರ ಸಮಿತಿಯ ಶಿಫಾರಸುಗಳು ಸರ್ಕಾರದ ಮಟ್ಟದಲ್ಲಿ ಜಾರಿಯಾದರೆ ಕನ್ನಡ ಕಲಿಕೆಯ ಗುಣಮಟ್ಟ ಸುಧಾರಿಸುತ್ತಾ, ಕನ್ನಡಿಗರ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆಯಾಗಿರುವ ಸ್ಥಿತಿ ಬದಲಾಗುತ್ತಾ ಕಾದುನೋಡಬೇಕಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:03 pm, Sat, 31 October 26




