ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸದಂತೆ ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಮನವಿ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸದಂತೆ ಕರ್ನಾಟಕ ಶಿಕ್ಷಣ ಇಲಾಖೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಶಿಕ್ಷಕರ ಚುನಾವಣಾ ಕರ್ತವ್ಯದಿಂದ ಶಾಲೆಗಳ ಬೋಧನೆ, ಪಠ್ಯಕ್ರಮ ಪೂರ್ಣಗೊಳಿಸುವಿಕೆ ಹಾಗೂ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಅಡ್ಡಿಯಾಗುವ ಆತಂಕ ವ್ಯಕ್ತವಾಗಿದೆ. ಎಸ್‌ಎಸ್‌ಆರ್ ಪ್ರಕ್ರಿಯೆಯಿಂದ ಶಿಕ್ಷಕರನ್ನು ಹೊರಗಿಡುವಂತೆ ಇಲಾಖೆ ಪತ್ರ ಬರೆದಿದೆ.

ಮುಖ್ಯಾಂಶಗಳು
- ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರ ನಿಯೋಜನೆ ಬೇಡವೆಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ.
- ಶಿಕ್ಷಕರ ಚುನಾವಣಾ ಕರ್ತವ್ಯದಿಂದ ಶಾಲೆಗಳ ಬೋಧನೆ ಹಾಗೂ ಪರೀಕ್ಷಾ ಸಿದ್ಧತೆಗೆ ಅಡ್ಡಿಯಾಗುವ ಆತಂಕ.
- ಎಸ್‌ಎಸ್‌ಆರ್ ಕಾರ್ಯದಿಂದ ಶಿಕ್ಷಕರನ್ನು ಹೊರಗಿಡುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.
ಬೆಂಗಳೂರು, ನವೆಂಬರ್ 22: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈಗಾಗಲೇ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷಾ ಸಿದ್ಧತೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಸಂಬಂಧಿಸಿದ ಹಲವು ಜವಾಬ್ದಾರಿಗಳಿರುವುದರಿಂದ ಶಿಕ್ಷಕರನ್ನು ಚುನಾವಣಾ ಸಂಬಂಧಿತ ಕಾರ್ಯಗಳಿಗೆ ನಿಯೋಜಿಸುವುದು ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಎಸ್‌ಐಆರ್ ಕಾರ್ಯದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ
2026ರ ಜೂನ್‌ನಿಂದ ಅಕ್ಟೋಬರ್‌ವರೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯದ ಸುಮಾರು ಶೇ.30ರಷ್ಟು ಶಿಕ್ಷಕರನ್ನು ನಿಯೋಜಿಸಲಾಗಿತ್ತು ಎಂದು ಶಿಕ್ಷಣ ಇಲಾಖೆ ಈ ಹಿಂದೆ ತಿಳಿಸಿತ್ತು. ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಮೇಲ್ವಿಚಾರಕರಾಗಿ ಶಿಕ್ಷಕರು ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಶಿಕ್ಷಕರು ಶಾಲೆಗಳಿಂದ ದೂರ ಉಳಿದಿದ್ದರಿಂದ ತರಗತಿ ಬೋಧನೆ ಮತ್ತು ಪಠ್ಯಕ್ರಮ ಪೂರ್ಣಗೊಳಿಸುವ ಕಾರ್ಯಕ್ಕೆ ತೊಂದರೆಯಾಗಿತ್ತು. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ನಿಯೋಜಿಸಿದ್ದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು ಎಂದು ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ನವೆಂಬರ್ 17ರಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE Act 2009) ಪ್ರಕಾರ ಶಿಕ್ಷಕರು ವಾರಕ್ಕೆ ಕನಿಷ್ಠ 45 ಗಂಟೆಗಳ ಕಾಲ ಶೈಕ್ಷಣಿಕ ಕರ್ತವ್ಯ ನಿರ್ವಹಿಸಬೇಕಿದೆ. ಇದರಲ್ಲಿ ಪಾಠದ ಸಿದ್ಧತೆಯ ಸಮಯವೂ ಸೇರಿದೆ. ಹೀಗಾಗಿ ಹೆಚ್ಚುವರಿ ಚುನಾವಣಾ ಕರ್ತವ್ಯ ನೀಡುವುದು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಎಸ್‌ಎಸ್‌ಆರ್, ಪರೀಕ್ಷೆಗಳ ವೇಳಾಪಟ್ಟಿ ಮುಂದಿಟ್ಟ ಇಲಾಖೆ
ಪ್ರಸ್ತುತ 2026-27ನೇ ಶೈಕ್ಷಣಿಕ ವರ್ಷದ ಅಂತಿಮ ತ್ರೈಮಾಸಿಕ ನಡೆಯುತ್ತಿದ್ದು, ಪಠ್ಯಕ್ರಮ ಪೂರ್ಣಗೊಳಿಸಲು ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಜನವರಿ 4ರಿಂದ ಫೆಬ್ರವರಿ 27, 2027ರವರೆಗೆ 10ನೇ ತರಗತಿಯ ಮೂರು ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 22ರಿಂದ ಮೇ 31ರವರೆಗೆ ವಾರ್ಷಿಕ ಪರೀಕ್ಷೆಗಳು ನಿಗದಿಯಾಗಿವೆ.
ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜನವರಿ 2ರಿಂದ 29ರವರೆಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿದ್ದು, ಫೆಬ್ರವರಿ 27ರಿಂದ ಮೇ 15ರವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಶಿಕ್ಷಕರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿದರೆ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಹಾಗೂ ಕಲಿಕೆಗೆ ತೊಂದರೆಯಾಗಲಿದೆ ಎಂಬುದು ಇಲಾಖೆಯ ಆತಂಕ.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 1ರಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಈ ಕಾರ್ಯದಿಂದ ಹೊರಗಿಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕೆಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ.
ಇದಲ್ಲದೆ, ಶಿಕ್ಷಕರನ್ನು ಬೋಧನೇತರ ಕರ್ತವ್ಯಗಳಿಗೆ ನಿಯೋಜಿಸುವುದನ್ನು ನಿಯಂತ್ರಿಸಲು ಪ್ರತ್ಯೇಕ ಮಸೂದೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಜನವರಿಯಿಂದ ಆರಂಭವಾಗಲಿರುವ ಜನಗಣತಿ ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಗಳಲ್ಲಿ ಶಿಕ್ಷಕರ ನಿಯೋಜನೆಯ ಸಾಧ್ಯತೆಯೂ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




