ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ಸೋಮವಾರ ಮಧ್ಯಾಹ್ನ ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದ ಬಳಿ 35 ವರ್ಷದ ಉದ್ಯಮಿಯನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪ್ಲಾಸ್ಟಿಕ್ ವ್ಯಾಪಾರಿಯಾಗಿದ್ದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಬೈಕ್​ಗಳಲ್ಲಿ ಬಂದ 3ರಿಂದ 4 ಜನರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಶುರುವಾಗಿದೆ.

ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ
Delhi Businessman Shot Dead

Updated on: Feb 10, 2026 | 3:25 PM

ನವದೆಹಲಿ, ಫೆಬ್ರವರಿ 10: ಸೋಮವಾರ ಮಧ್ಯಾಹ್ನ (ಫೆಬ್ರವರಿ 9) ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಹೊರಗೆ 35 ವರ್ಷದ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯ (Delhi Businessman) ಮೇಲೆ ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲಾರಂಭಿಸಿದ್ದಾರೆ.

ನಿನ್ನೆ ದಾಳಿ ನಡೆದಾಗ ಉದ್ಯಮಿ ತನ್ನನ್ನು ತಾನು ಉಳಿಸಿಕೊಳ್ಳಲು ಓಡಿಹೋಗಲು ಪ್ರಯತ್ನಿಸಿದರು. ಆದರೆ ದಾಳಿಕೋರರು ಅವರ ಬೆನ್ನಟ್ಟಿ ಗುಂಡು ಹಾರಿಸಿದರು. ಗುಂಡೇಟಿನಿಂದ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮಹಾರಾಜ ಅಗ್ರಸೇನ್ ಆಸ್ಪತ್ರೆಯಿಂದ ಈ ಗುಂಡೇಟಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿತು.

ಇದನ್ನೂ ಓದಿ: 42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್​​ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ

ಮೃತ ವ್ಯಕ್ತಿಯನ್ನು ಬವಾನಾದ ಕೈಗಾರಿಕಾ ಪ್ರದೇಶದ ನಿವಾಸಿ ವೈಭವ್ ಗಾಂಧಿ ಎಂದು ಗುರುತಿಸಲಾಗಿದೆ. ಮಾಹಿತಿಯ ನಂತರ, ಪೊಲೀಸ್ ತಂಡಗಳು ಆಸ್ಪತ್ರೆಗೆ ಮತ್ತು ಘಟನೆ ನಡೆದ ಸ್ಥಳಕ್ಕೆ ಧಾವಿಸಿದವು. ಸಿಸಿಟಿವಿಯಲ್ಲಿ ಆ ಉದ್ಯಮಿ ರಸ್ತೆಯಲ್ಲಿ ಬೀಳುತ್ತಿರುವುದು ಮತ್ತು ಗುಂಡು ಹಾರಿಸಿದವರು ಆ ಸ್ಥಳದಿಂದ ಪರಾರಿಯಾಗುತ್ತಿರುವುದು ರೆಕಾರ್ಡ್ ಆಗಿದೆ.

ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಸಹ ಪ್ರಯತ್ನಗಳು ನಡೆಯುತ್ತಿವೆ. ಇದರಲ್ಲಿ ವ್ಯಾಪಾರ ವೈಷಮ್ಯ, ವೈಯಕ್ತಿಕ ದ್ವೇಷ ಅಥವಾ ಯಾವುದೇ ಇತರ ವಿವಾದಕ್ಕೆ ಸಂಬಂಧವಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಇದರ ನಡುವೆ ಇಂದು ಬೆಳಿಗ್ಗೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದೆಹಲಿ ಉದ್ಯಮಿಯ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಣದೀಪ್ ಮಲಿಕ್ ಮತ್ತು ಅನಿಲ್ ಪಂಡಿತ್ ಬವಾನಾದಲ್ಲಿ ಉದ್ಯಮಿ ವೈಭವ್ ಗಾಂಧಿಯನ್ನು ತಾವೇ ಕೊಂದಿದ್ದಾಗಿ ಹೇಳಿಕೊಂಡಿದ್ದಾರೆ. “ಯಾರಾದರೂ ನಮ್ಮ ಕೆಲಸಕ್ಕೆ ಅಡ್ಡ ಬಂದರೆ ಅವರನ್ನೂ ಕೊಲ್ಲಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us