ಸೂಟ್‌ಕೇಸ್‌ನಲ್ಲಿ ದೆಹಲಿ ಮಹಿಳೆಯ ಸುಟ್ಟ ಶವ ಪತ್ತೆ; ಒಂದೇ ದಿನದಲ್ಲಿ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ದೆಹಲಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಸುಟ್ಟ ಶವ ಪತ್ತೆಯಾಗಿದೆ. ಘಾಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಕೊಲೆಗಾರನನ್ನು ಬಂಧಿಸಲು ಹೆಚ್ಚುವರಿ ಡಿಸಿಪಿ ವಿನಿತ್ ಕುಮಾರ್ ಮತ್ತು ಡಿಸಿಪಿ ಅಭಿಷೇಕ್ ಧನಿಯಾ ಅವರ ಮೇಲ್ವಿಚಾರಣೆಯಲ್ಲಿ ಹಲವಾರು ತಂಡಗಳನ್ನು ರಚಿಸಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ಕೇವಲ 24 ಗಂಟೆಗಳಲ್ಲಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹಾಗಾದರೆ, ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ: ಭಾನುವಾರ ದೆಹಲಿಯ ಗಾಜಿಪುರದಲ್ಲಿ 25 ವರ್ಷದ ಮಹಿಳೆಯ ಸುಟ್ಟ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಡಲಾಗಿತ್ತು. ವಿಚಿತ್ರವೆಂದರೆ ಆ ಮಹಿಳೆ ಯಾರೆಂಬ ಬಗ್ಗೆ ಏನೂ ಸುಳಿವೇ ಇರಲಿಲ್ಲ. ಹೀಗಾಗಿ, ಈ ಕೊಲೆಯ ಹಿನ್ನೆಲೆ, ಅಪರಾಧಿಗಳನ್ನು ಕಂಡುಹಿಡಿಯುವುದು ಬಹಳ ಕಷ್ಟವಾಗಿತ್ತು. ಆದರೆ, ಈ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿರುವುದಾಗಿ ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ. ಆರೋಪಿಯು ಮಹಿಳೆಯ ಶವವನ್ನು ಸುಟ್ಟು ಸೂಟ್‌ಕೇಸ್ ಒಳಗೆ ಇಡಲಾಗಿತ್ತು.
ಈ ಕೊಲೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಸಂಬಂಧಿ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಸಂಬಂಧಿಯ ಬಳಿ ಆತನ ಕುಟುಂಬವನ್ನು ಬಿಟ್ಟು ಬಂದು ತನ್ನೊಂದಿಗೆ ವಾಸಿಸುವಂತೆ ಒತ್ತಡ ಹೇರಿದ್ದಳು. ಇದರಿಂದ ಬೇಸತ್ತ ಆತ ಆಕೆಯನ್ನು ಕೊಂದಿದ್ದಾನೆ ಎಂಬುದು ಬಯಲಾಗಿದೆ.
ಭಾನುವಾರ ಮುಂಜಾನೆ ಅಂಬೇಡ್ಕರ್ ಚೌಕ್ ಮತ್ತು ಕೇರಳ ಪಬ್ಲಿಕ್ ಶಾಲೆಯ ನಡುವಿನ ಶಿವಾಜಿ ರಸ್ತೆಯ ಬಳಿ ರಸ್ತೆಬದಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಸುಟ್ಟ ಶವದ ಭಾಗಗಳು ಪತ್ತೆಯಾಗಿತ್ತು. ಗಾಜಿಯಾಬಾದ್‌ನ ಖೋರಾ ಕಾಲೋನಿಯ ನಿವಾಸಿಗಳಾದ ಟ್ಯಾಕ್ಸಿ ಚಾಲಕ ಅಮಿತ್ ತಿವಾರಿ (22) ಮತ್ತು ಆತನ ಸೋದರಸಂಬಂಧಿ ಅನುಜ್ ಕುಮಾರ್ (20) ವೆಲ್ಡರ್ ಆಗಿರುವ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣ; ಗಲ್ಲು ಶಿಕ್ಷೆ ನೀಡಲು ಇದು ಅತ್ಯಪರೂಪದ ಕೇಸಲ್ಲ ಎಂದ ಕೋರ್ಟ್
ಪೊಲೀಸರ ಪ್ರಕಾರ, ಮೃತ ಮಹಿಳೆ ಶಿಲ್ಪಾ ಪಾಂಡೆ ತನ್ನ ಪ್ರೇಮಿಯಾಗಿದ್ದ ಅಮಿತ್ಗೆ ಆತನ ಕುಟುಂಬವನ್ನು ತೊರೆದು ತನ್ನೊಂದಿಗೆ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು. ಇದಕ್ಕೆ ಒಪ್ಪದಿದ್ದರೆ ಅವನ ವಿರುದ್ಧ ಮತ್ತು ಅವನ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸುವುದಾಗಿಯೂ ಆಕೆ ಬೆದರಿಕೆ ಹಾಕಿದ್ದಳು.
ಈ ಬೇಡಿಕೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಆತ ತನ್ನ ಗೆಳೆಯರೊಂದಿಗೆ ಸೇರಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಕೊಲೆ ಮಾಡಿದ ನಂತರ, ಆಕೆಯ ದೇಹವನ್ನು ಸುಟ್ಟುಹಾಕಿ ಸಾಕ್ಷ್ಯಗಳನ್ನು ನಾಶಮಾಡಲು ಸೂಟ್‌ಕೇಸ್‌ನಲ್ಲಿ ಶವದ ಅವಶೇಷಗಳನ್ನು ವಿಲೇವಾರಿ ಮಾಡಿದ್ದ. ರಸ್ತೆಬದಿಯಲ್ಲಿ ಸುಟ್ಟ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಘಟನಾ ಸ್ಥಳವನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡ ಮತ್ತು ಅಪರಾಧ ತನಿಖಾ ತಂಡವನ್ನು ಕರೆಯಲಾಯಿತು.
ಇದನ್ನೂ ಓದಿ: ಗಂಡನನ್ನು ಕೊಂದು, ಜೇಬಿನಲ್ಲಿ 8 ವಯಾಗ್ರದ ಪ್ಯಾಕೆಟ್ ಇಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ಸ್ಥಳಕ್ಕೆ ತಲುಪಿದಾಗ, ಸುಟ್ಟ ಸೂಟ್‌ಕೇಸ್‌ನಲ್ಲಿ 30ರಿಂದ 35 ವರ್ಷ ವಯಸ್ಸಿನ ಮಹಿಳೆಯ ಸುಟ್ಟ ಶವ ಪತ್ತೆಯಾಗಿತ್ತು. ಆ ಶವವನ್ನು ಎಲ್‌ಬಿಎಸ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿತ್ತು.
ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?:
ಸಿಸಿಟಿವಿ ದೃಶ್ಯಾವಳಿಗಳು ಕೊಲೆಗೆ ಸಂಬಂಧಿಸಿದ ಟ್ಯಾಕ್ಸಿಯನ್ನು ತೋರಿಸುವ ಪ್ರಮುಖ ಸುಳಿವು ನೀಡಿವೆ. ತಾಂತ್ರಿಕ ಕಣ್ಗಾವಲು ಮತ್ತು ಮೊಬೈಲ್ ಡೇಟಾವನ್ನು ಬಳಸಿಕೊಂಡು, ಪೊಲೀಸರು ವಾಹನವನ್ನು ಪತ್ತೆಹಚ್ಚಿ ಅದರ ಮಾಲೀಕರನ್ನು ಗುರುತಿಸಿದರು. ಇದು ಆರೋಪಿಯನ್ನು ಬಂಧಿಸಲು ಸಹಾಯ ಮಾಡಿತು. ಅಮಿತ್ ಕಳೆದ 6ರಿಂದ 7 ವರ್ಷಗಳಿಂದ ಅನುಜ್ ಜೊತೆ ಸ್ನೇಹಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಇಬ್ಬರೂ ಅಪರಾಧವನ್ನು ಒಪ್ಪಿಕೊಂಡರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ