Delhi Results: ದೆಹಲಿಯಲ್ಲಿ 48 ಸ್ಥಾನಗಳ ಭರ್ಜರಿ ಜಯ ಗಳಿಸಿದ ಬಿಜೆಪಿ; ಆಪ್​ಗೆ 22 ಸ್ಥಾನ, ಈ ಬಾರಿಯೂ ಶೂನ್ಯಕ್ಕೆ ಶರಣಾದ ಕಾಂಗ್ರೆಸ್

27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆಮ್ ಆದ್ಮಿ ಪಕ್ಷವನ್ನು ಸೋಲಿಸಿ ದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಕೇಸರಿ ಪಕ್ಷ ಮುಂದಾಗಿದೆ. ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾಗರಿಕರು ತಮ್ಮ ಮತಗಳನ್ನು ಚಲಾಯಿಸಿದರು. ಇಂದು (ಫೆಬ್ರವರಿ 8) ಮತ ಎಣಿಕೆ ನಡೆಯಿತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಶೀಘ್ರದಲ್ಲೇ ಹೊಸ ಸರ್ಕಾರ ರಚನೆಯಾಗಲಿದೆ.

Delhi Results: ದೆಹಲಿಯಲ್ಲಿ 48 ಸ್ಥಾನಗಳ ಭರ್ಜರಿ ಜಯ ಗಳಿಸಿದ ಬಿಜೆಪಿ; ಆಪ್​ಗೆ 22 ಸ್ಥಾನ, ಈ ಬಾರಿಯೂ ಶೂನ್ಯಕ್ಕೆ ಶರಣಾದ ಕಾಂಗ್ರೆಸ್
Pm Modi In Delhi Election Victory Celebration

Updated on: Feb 08, 2025 | 8:52 PM

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಮಧ್ಯಾಹ್ನದ ವೇಳೆಗಾಗಲೇ ದೆಹಲಿಯಲ್ಲಿ ಕಮಲ ಅರಳುವ ಖಚಿತತೆ ಸಿಕ್ಕಿತ್ತು. ಇದೀಗ 70 ಸ್ಥಾನಗಳ ಪೈಕಿ ಬರೋಬ್ಬರಿ 48 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ದಿಗ್ವಿಜಯ ಸಾಧಿಸಿದೆ. 1 ದಶಕದಿಂದ ದೆಹಲಿಯನ್ನು ಆಳಿದ್ದ ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಈ ನಡುವೆ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಭಾರತೀಯ ಚುನಾವಣಾ ಆಯೋಗದ (ECI) ಪ್ರಕಾರ, ಬಿಜೆಪಿ ಪ್ರಸ್ತುತ 48 ಸ್ಥಾನಗಳಲ್ಲಿ ಗೆದ್ದಿದೆ. ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನು ಪಡೆದಿದೆ. 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. ಇದು ಈಗ ಸತತ ಮೂರನೇ ಬಾರಿಗೆ ಶೂನ್ಯ ಸ್ಥಾನವನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಆಮ್ ಆದ್ಮಿ ಪಕ್ಷದ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರೇ ಸೋಲನ್ನು ಅನುಭವಿಸಿದ್ದಾರೆ. ಜೊತೆಗೆ, ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ, ಆಪ್ ನಾಯಕರಾದ ಸೌರಭ್ ಭಾರದ್ವಾಜ್, ಸತ್ಯೇಂದ್ರ ಜೈನ್ ಮುಂತಾದವರು ಸೋತಿದ್ದಾರೆ. ಸಿಎಂ ಅತಿಶಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಜಯ ಗಳಿಸಿದ್ದಾರೆ.


ಇದನ್ನೂ ಓದಿ: ದೆಹಲಿಯಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ವೇಗದ ಅಭಿವೃದ್ಧಿ; ಗೆಲುವಿನ ಬಳಿಕ ಪ್ರಧಾನಿ ಮೋದಿ ಭರವಸೆ

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅತಿಶಿ, “ನನ್ನನ್ನು ನಂಬಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಎಲ್ಲಾ ಸವಾಲುಗಳನ್ನು ಎದುರಿಸಿ ನಮ್ಮ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಿದ ನನ್ನ ತಂಡಕ್ಕೂ ನಾನು ಧನ್ಯವಾದ ಹೇಳುತ್ತೇನೆ. ನಾನು ನನ್ನ ಸ್ಥಾನವನ್ನು ಗೆದ್ದಿದ್ದೇನೆ. ಆದರೆ ಇದು ಸಂಭ್ರಮಾಚರಣೆಗೆ ಸಮಯವಲ್ಲ; ಇದು ಹೋರಾಡುವ ಸಮಯ. ಬಿಜೆಪಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧದ ಹೋರಾಟ ಮುಂದುವರಿಯುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಯ ಜನಾದೇಶ ರಾಜಕೀಯದಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿಲ್ಲ ಎಂದು ಸಾಬೀತುಪಡಿಸಿದೆ; ಪ್ರಧಾನಿ ಮೋದಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿರುವುದರಿಂದ ದೆಹಲಿಯಲ್ಲಿ ಅದರ ಕುಸಿತ ನಿರಂತರವಾಗಿ ಮುಂದುವರೆದಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಕಾಂಗ್ರೆಸ್ ಪಕ್ಷವು ಶೂನ್ಯ ಸ್ಥಾನಗಳನ್ನು ಗಳಿಸಿದೆ. ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 67 ಸ್ಥಾನಗಳಲ್ಲಿ ತಮ್ಮ ಠೇವಣಿಗಳನ್ನು ಕಳೆದುಕೊಂಡರು. ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸಿದರೂ, ಕಾಂಗ್ರೆಸ್ ತನ್ನ ಠೇವಣಿಯನ್ನು ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬದ್ಲಿ, ಕಸ್ತೂರ್ಬಾ ನಗರ ಮತ್ತು ನಂಗ್ಲೋಯಿ ಜಾಟ್ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಉಳಿಸಿಕೊಂಡಿದೆ. ಆದರೂ ಗೆಲ್ಲಲು ಕಾಂಗ್ರೆಸ್​ಗೆ ಸಾಧ್ಯವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ