ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೊರೊನಾ ಹಬ್ಬುವುದನ್ನು ತಡೆಯಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ತನಕ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ದೇಶದಲ್ಲಿ ಒಂದೇ ದಿನ 1 ಲಕ್ಷ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಆರಂಭದಿಂದ ಇಲ್ಲಿಯವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಹೀಗಾಗಿ ದೇಶಾದ್ಯಂತ ಬಹುತೇಕ ರಾಜ್ಯಗಳು ಕಟ್ಟೆಚ್ಚರ ವಹಿಸುತ್ತಿವೆ.
ಮಹಾರಾಷ್ಟ್ರದಲ್ಲೂ ನೈಟ್ ಕರ್ಫ್ಯೂ
ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿಗೆ ತಡೆಯೊಡ್ಡಲು ಸಂಪೂರ್ಣ ಮಹಾರಾಷ್ಟ್ರ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ಡೌನ್ ವಿಧಿಸಲು ಮಹಾರಾಷ್ಟ್ರ ಸರ್ಕಾರ ಎರಡು ದಿನಗಳ ಹಿಂದೆಯೇ ನಿರ್ಧರಿಸಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಈಗಾಗಲೇ ತಿಳಿಸಿದೆ.
ಕೇವಲ ಅನಿವಾರ್ಯ ಸೇವೆಗಳು ಮಾತ್ರ ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಬಹುದು. ಚಿತ್ರಮಂದಿರಗಳು, ಗಾರ್ಡನ್, ಮತ್ತು ಆಟದ ಅಂಗಣಗಳನ್ನು ತೆರೆಯುವಂತಿಲ್ಲ. ಸರ್ಕಾರಿ ಕಚೇರಿಗಳನ್ನು ಅರ್ಧದಷ್ಟು ಸಿಬ್ಬಂದಿಗಳ ಮೂಲಕ ತೆರೆಯಬಹುದು. ಕಟ್ಟಡ ನಿರ್ಮಾಣ, ಮಾರುಕಟ್ಟೆ ಮತ್ತು ಕಾರ್ಖಾನೆಗಳ ಚಟುವಟಿಕೆಗಳು ಕೊರೊನಾ ತಡೆ ಮಾರ್ಗಸೂಚಿಯ ಪ್ರಕಾರ ಕಾರ್ಯನಿರ್ವಹಿಸಬಹುದು ಎಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.
ಪುಣೆಯಲ್ಲಿ ಈಗಾಗಲೇ ಜಾರಿಯಾಗಿದೆ ನೈಟ್ ಕರ್ಫ್ಯೂ
ಪುಣೆ ಜಿಲ್ಲೆಯಲ್ಲಿ ಏಪ್ರಿಲ್ 3ರಿಂದಲೇ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿತ್ತು. ಪುಣೆ (ಮಹಾರಾಷ್ಟ್ರ) ಡಿವಿಷನಲ್ ಕಮಿಷನರ್ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಬಾರ್, ಹೊಟೇಲ್, ರೆಸ್ಟೋರೆಂಟ್ಗಳು ಏಳು ದಿನಗಳ ಕಾಲ ಕಾರ್ಯನಿರ್ವಹಿಸುವಂತಿಲ್ಲ. ಹೊಟೆಲ್ ಹಾಗೂ ರೆಸ್ಟೋರೆಂಟ್ಗಳಿಂದ ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿದೆ. ಜೊತೆಗೆ, ಧಾರ್ಮಿಕ ಕ್ಷೇತ್ರಗಳು ಕೂಡ 7 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.
ಮದುವೆ ಹಾಗೂ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ತಡೆಯೊಡ್ಡಿದೆ. ಸಾವು ಸಂಭವಿಸಿದಲ್ಲಿ ಕೇವಲ 20 ಮತ್ತು ವಿವಾಹ ಸಮಾರಂಭದಲ್ಲಿ ಕೇವಲ 50 ಜನರು ಸೇರಬಹುದು ಎಂದು ಪುಣೆಯಲಲ್ಲಿ ಏಪ್ರಿಲ್ 3ಕ್ಕೆ ಸೂಚನೆ ನೀಡಲಾಗಿತ್ತು.
ಕೊರೊನಾ ಹೆಚ್ಚಳ: ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ 15 ದಿನ ರಜೆ ಘೋಷಣೆ