ಕೊರೊನಾ ಹೆಚ್ಚಳ: ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ 15 ದಿನ ರಜೆ ಘೋಷಣೆ

ಹಾಸ್ಟೆಲ್​ಗಳು ಸಹ 15 ದಿನಗಳ ಕಾಲ ಬಂದ್ ಆಗಲಿವೆ. ಹಾಸ್ಟೆಲ್​ನಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ. ಬಾಕಿ ಉಳಿದ ವಿಷಯಗಳನ್ನು ವರ್ಚುವಲ್ ಮೂಲಕ ಪಾಠ ಮಾಡುವಂತೆ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಆದರೆ ಪ್ರಾಯೋಗಿಕ ತರಗತಿಗಳು ಮಾತ್ರ ಎಂದಿನಂತೆ ನಡೆಯಲಿವೆ

  • TV9 Web Team
  • Published On - 11:10 AM, 6 Apr 2021
ಕೊರೊನಾ ಹೆಚ್ಚಳ: ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ 15 ದಿನ ರಜೆ ಘೋಷಣೆ
ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು: ನಗರದಲ್ಲಿ ಕೊರೊನಾ ಹೆಚ್ಚಾದ ಕಾರಣ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿವಿ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜ್ಯೋತಿ ಆದೇಶಿಸಿದ್ದಾರೆ. ಈ ಮೂಲಕ ಏಪ್ರಿಲ್ 20 ರವರೆಗೂ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ರಜೆ ನೀಡಿದಂತಾಗಿದೆ.

ಅಷ್ಟೇ ಅಲ್ಲದೇ, ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್​ಗಳು ಸಹ 15 ದಿನಗಳ ಕಾಲ ಬಂದ್ ಆಗಲಿವೆ. ಹಾಸ್ಟೆಲ್​ನಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ. ಬಾಕಿ ಉಳಿದ ವಿಷಯಗಳನ್ನು ಆನ್​ಲೈನ್​ ಮೂಲಕ ಪಾಠ ಮಾಡುವಂತೆ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಪ್ರಾಯೋಗಿಕ ತರಗತಿಗಳು ಮಾತ್ರ ಎಂದಿನಂತೆ ನಡೆಯಲಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ಆಫ್​ಲೈನ್​ನಲ್ಲೇ ನಡೆಯಲಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ ಒಟ್ಟು 20 ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್​ಗಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಟಿವಿ9ಗೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಜ್ಯೋತಿ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಹೆಚ್ಚಿದ ಸೋಂಕು
ಬೆಂಗಳೂರಿನಲ್ಲಿ ಸೋಮವಾರ ( ಏಪ್ರಿಲ್ 5)  ರಾಜ್ಯದಲ್ಲಿಯೇ ಅತಿಹೆಚ್ಚು ಅಂದರೆ 3728 ಸೋಂಕು ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಈವರೆಗೆ 4667 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 30,782 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ದಿನೇದಿನೇ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಒಟ್ಟು 198 ವಾರ್ಡ್​ಗಳ ಪೈಕಿ 150 ವಾರ್ಡ್​ಗಳಲ್ಲಿ ತಲಾ 50 ಸಕ್ರಿಯ ಕೇಸ್​ಗಳಿರಬಹುದು ಎಂದು ಶಂಕಿಸಲಾಗಿದೆ. ಉಳಿದ 48 ವಾರ್ಡ್​ಗಳಲ್ಲಿ 50ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿರಬಹುದು ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ( ಏಪ್ರಿಲ್ 5)  ಹೊಸದಾಗಿ 5279 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,20,434ಕ್ಕೆ (10.20 ಲಕ್ಷ) ಏರಿಕೆಯಾದಂತೆ ಆಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 32 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,657 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 9,65,275 (9.65 ಲಕ್ಷ) ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 42,483 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Coronavirus India Update: ಕಳೆದ 24 ಗಂಟೆಗಳಲ್ಲಿ 96,517 ಕೊವಿಡ್ ಪ್ರಕರಣ ಪತ್ತೆ, 445 ಸಾವು

Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ

(Bengaluru University announced 15 days holiday for all UG and PG colleges due to fast spreading of Covid 19)