ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ನಿವಾಸದ ಮೇಲೆ ಸಿಬಿಐ ದಾಳಿ (CBI Raid) ನಡೆಸಿದ ಕೆಲವೇ ಗಂಟೆಗಳ ನಂತರ ದೆಹಲಿಯ 12 ಐಎಎಸ್ (IAS) ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆದೇಶ ಹೊರಡಿಸಿದ್ದಾರೆ. ದೆಹಲಿ ಸರ್ಕಾರದ ಸೇವೆಗಳ ಇಲಾಖೆ ಹೊರಡಿಸಿದ ವರ್ಗಾವಣೆ ಪೋಸ್ಟಿಂಗ್ ಆದೇಶದ ಪ್ರಕಾರ, ವರ್ಗಾವಣೆಗೊಂಡವರಲ್ಲಿ ಎಜಿಎಂಯುಟಿ ಕೇಡರ್‌ನ 2007ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಶೇಷ ಕಾರ್ಯದರ್ಶಿ ಉದಿತ್ ಪ್ರಕಾಶ್ ರೈ ಕೂಡ ಸೇರಿದ್ದಾರೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಇತ್ತೀಚೆಗೆ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ 50 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಉದಿತ್ ಪ್ರಕಾಶ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಇದೀಗ ಅವರೇ ಹೊರಡಿಸಿರುವ ಆದೇಶದ ಪ್ರಕಾರ, ಉದಿತ್ ಪ್ರಕಾಶ್ ರೈ ಅವರನ್ನು ಆಡಳಿತ ಸುಧಾರಣಾ ಇಲಾಖೆಗೆ ವಿಶೇಷ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Breaking News: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ದಾಳಿ
ಪ್ರಸ್ತುತ, ಮನೀಶ್ ಸಿಸೋಡಿಯಾ ದೆಹಲಿ ಸರ್ಕಾರದಲ್ಲಿ ಆರೋಗ್ಯ ಖಾತೆಯ ಸಚಿವ ಕೂಡ ಆಗಿದ್ದಾರೆ. 2007ರ ಬ್ಯಾಚ್‌ನ ಐಎಎಸ್ ಅಧಿಕಾರಿ ವಿಜೇಂದ್ರ ಸಿಂಗ್ ರಾವತ್ ಉದಿತ್ ಪ್ರಕಾಶ್ ರೈ ಅವರ ಸ್ಥಾನಕ್ಕೆ ಬಂದಿದ್ದಾರೆ. ಹೊಸ ಆದೇಶದ ಪ್ರಕಾರ, 1990ರ ಬ್ಯಾಚ್ ಅಧಿಕಾರಿ ಜಿತೇಂದ್ರ ನರೇನ್ ಅವರನ್ನು ದೆಹಲಿ ಹಣಕಾಸು ನಿಗಮದ (ಡಿಎಫ್‌ಸಿ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಲಾಗಿದೆ. ನೈಋತ್ಯ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮಂತ್ ಕುಮಾರ್ ಅವರಿಗೆ ಡಿಎಫ್‌ಸಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.
ವಿವೇಕ್ ಪಾಂಡೆ ಅವರನ್ನು ಕಾರ್ಯದರ್ಶಿಯಾಗಿ (ಐಟಿ) ನೇಮಿಸಲಾಗಿದೆ ಮತ್ತು ಜಿಯೋಸ್ಪೇಷಿಯಲ್ ದೆಹಲಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕೇಂದ್ರಾಡಳಿತ ಪ್ರದೇಶದ ನಾಗರಿಕ ಸೇವೆಗಳ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಇಲ್ಲಿಯವರೆಗೆ ಅವರಿಗೆ ಕಾರ್ಯದರ್ಶಿ, ಆಡಳಿತ ಸುಧಾರಣೆ ಸ್ಥಾನಗಳನ್ನು ನೀಡಲಾಗಿತ್ತು.
2004ರ ಬ್ಯಾಚ್‌ನ ಅಧಿಕಾರಿ ಶುರ್ಬೀರ್ ಸಿಂಗ್ ಅವರನ್ನು ಕಾರ್ಯದರ್ಶಿ (ಸಹಕಾರ) ಪ್ರಭಾರದಿಂದ ಬಿಡುಗಡೆ ಮಾಡಲಾಗಿದ್ದು, ಕಾರ್ಯದರ್ಶಿ (ಅಧಿಕಾರ) ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಅವರು ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಐಎಎಸ್ ಅಧಿಕಾರಿ ಗರಿಮಾ ಗುಪ್ತಾ ಅವರಿಗೆ ವಿಶೇಷ ಕಾರ್ಯದರ್ಶಿ, ಸಾರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರು ಶಹಜಹಾನಾಬಾದ್ ಪುನರಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Big News: ಮನೀಶ್ ಸಿಸೋಡಿಯಾ ಜನಪ್ರಿಯತೆಗೆ ಹೆದರಿ ಕೇಜ್ರಿವಾಲ್ ಸಿಬಿಐಗೆ ಮಾಹಿತಿ ನೀಡಿರಬಹುದು; ಬಿಜೆಪಿ ಹೊಸ ಆರೋಪ
2005ರ ಬ್ಯಾಚ್‌ನ ಅಧಿಕಾರಿ ಆಶಿಶ್ ಮಾಧೋರಾವ್ ಮೋರೆ ಅವರಿಗೆ ಕಾರ್ಯದರ್ಶಿ (ಸೇವೆಗಳು) ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಕಾರ್ಯದರ್ಶಿ, ಸಾಮಾನ್ಯ ಆಡಳಿತ ಇಲಾಖೆ ಮತ್ತು ಮುಖ್ಯ ಕಾರ್ಯದರ್ಶಿಯ ಸಿಬ್ಬಂದಿ ಅಧಿಕಾರಿಯಾಗಿ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಕೃಷ್ಣಕುಮಾರ್ ಅವರಿಗೆ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ರಿಜಿಸ್ಟ್ರಾರ್ ಸಹಕಾರ ಸಂಘಗಳ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದೆ. 2010ರ ಬ್ಯಾಚ್ ಅಧಿಕಾರಿ ಕಲ್ಯಾಣ್ ಸಹಾಯ್ ಮೀನಾ ಅವರನ್ನು ನಗರಾಭಿವೃದ್ಧಿ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2012ರ ಬ್ಯಾಚ್‌ನ ಅಧಿಕಾರಿ ಸೋನಲ್ ಸ್ವರೂಪ್ ಅವರನ್ನು ಲೆಫ್ಟಿನೆಂಟ್ ಗವರ್ನರ್‌ನ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
Published On - 8:08 am, Sat, 20 August 22