Big News: ಮನೀಶ್ ಸಿಸೋಡಿಯಾ ಜನಪ್ರಿಯತೆಗೆ ಹೆದರಿ ಕೇಜ್ರಿವಾಲ್ ಸಿಬಿಐಗೆ ಮಾಹಿತಿ ನೀಡಿರಬಹುದು; ಬಿಜೆಪಿ ಹೊಸ ಆರೋಪ
ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಅರವಿಂದ್ ಕೇಜ್ರಿವಾಲ್ ಭಯಗೊಂಡಿದ್ದಾರೆ. ಅವರನ್ನು ತನ್ನ ದಾರಿಯಿಂದ ಹೊರಹಾಕಬೇಕೆಂದು ಅವರೇ ಸಿಬಿಐ ದಾಳಿ ಮಾಡಿಸಿದ್ದಾರೆ ಎಂದು ವರ್ಮಾ ಹೇಳಿದ್ದಾರೆ.
ನವದೆಹಲಿ: ದೆಹಲಿಯ ಹೊಸ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ತಮ್ಮ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಭ್ರಷ್ಟಾಚಾರದ ಬಗ್ಗೆ ಸಿಬಿಐಗೆ ಮಾಹಿತಿ ನೀಡಿರಬಹುದು ಎಂದು ಬಿಜೆಪಿ ಹೊಸ ಆರೋಪ ಮಾಡಿದೆ. ಮನೀಶ್ ಸಿಸೋಡಿಯಾ ಪ್ರಸಿದ್ಧಿಯ ಬಗ್ಗೆ ಅರವಿಂದ್ ಕೇಜ್ರಿವಾಲ್ಗೆ (Arvind Kejriwal) ಅಸಮಾಧಾನವಿದೆ. ತನಗಿಂತ ಹೆಚ್ಚು ಖ್ಯಾತಿ ಹೊಂದಿದ್ದಾರೆಂಬ ಬೇಸರವೂ ಇದೆ. ಅದೇ ಕಾರಣಕ್ಕೆ ಅವರೇ ಸಿಬಿಐನವರಿಗೆ ಈ ಬಗ್ಗೆ ಸುಳಿವು ನೀಡಿರಬಹುದು ಎಂದು ಬಿಜೆಪಿ ಹೇಳಿದೆ.
ಇಂದು ಮುಂಜಾನೆ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದಿತ್ತು. ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಗೆ ಆಗಮಿಸಿದರು. ಸಿಬಿಐ ತಮಗೆ ಮೇಲಿನಿಂದ ಬಂದ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುತ್ತಿದೆ, ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆಪ್ ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಪ್ರವೇಶ್ ವರ್ಮ ಎಎಪಿಯ ರಾಜಕೀಯ ಸೇಡಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರೇ ಸಿಬಿಐಗೆ ಮಾಹಿತಿ ನೀಡಿದ್ದು, ಎಲ್ಲಾ ಆಂತರಿಕ ಮಾಹಿತಿಯನ್ನು ನೀಡುವ ಸಾಧ್ಯತೆಯಿದೆ ಎಂದು ಬಾಂಬ್ ಹಾಕಿದ್ದಾರೆ.
ಇದನ್ನೂ ಓದಿ: Breaking News: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ದಾಳಿ
ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಅರವಿಂದ್ ಕೇಜ್ರಿವಾಲ್ ಭಯಗೊಂಡಿದ್ದಾರೆ. ಅವರನ್ನು ತನ್ನ ದಾರಿಯಿಂದ ಹೊರಹಾಕಬೇಕೆಂದು ಅವರೇ ಸಿಬಿಐ ದಾಳಿ ಮಾಡಿಸಿದ್ದಾರೆ ಎಂದು ವರ್ಮಾ ಹೇಳಿದ್ದಾರೆ. ಈಗ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಇಬ್ಬರೂ ಅರವಿಂದ್ ಕೇಜ್ರಿವಾಲ್ ಅನುಮತಿಯಿಲ್ಲದೆ ಶೌಚಾಲಯಕ್ಕೆ ಕೂಡ ಹೋಗುವಂತಿಲ್ಲ. ಈಗ ಸತ್ಯೇಂದ್ರ ಜೈನ್ ಮೂರು ತಿಂಗಳು ಜೈಲಿನಲ್ಲಿದ್ದಾರೆ, ಮನೀಶ್ ಸಿಸೋಡಿಯಾ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿವೆ. ಕೇಜ್ರಿವಾಲ್ ಎಷ್ಟು ದಿನ ಸ್ವತಂತ್ರವಾಗಿ ಉಳಿಯಬಹುದು? ಎಂದು ವರ್ಮಾ ಲೇವಡಿ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಒಬ್ಬ ಮಾಸ್ಟರ್ ಮೈಂಡ್ ಎಂದು ಬಿಜೆಪಿ ನಾಯಕ ಪ್ರವೇಶ್ ವರ್ಮಾ ಆರೋಪಿಸಿದ್ದಾರೆ. ಅವರ ಬಳಿ ಯಾವುದೇ ಇಲಾಖೆ ಇಲ್ಲದ ಕಾರಣ ಅವರು ಯಾವುದೇ ಪೇಪರ್‌ಗಳಿಗೆ ಸಹಿ ಹಾಕುವುದಿಲ್ಲ. ಭ್ರಷ್ಟಾಚಾರ ನಡೆದಾಗಲೆಲ್ಲಾ ಅರವಿಂದ್ ಕೇಜ್ರಿವಾಲ್ ಅವರು ಎಷ್ಟು ಪ್ರಾಮಾಣಿಕರು ಎಂಬುದನ್ನು ತೋರಿಸಲು ಕೊಳ್ಳೆ ಹೊಡೆಯುತ್ತಾರೆ ಮತ್ತು ತಮ್ಮ ಮಂತ್ರಿಗಳನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದ ಬಾಕ್ಸರ್ ದಿವ್ಯಾ ಕಾಕರಾನ್; ಆಪ್ ಸರ್ಕಾರದ ಪ್ರತಿಕ್ರಿಯೆ ಹೀಗಿತ್ತು
ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರು ತಮ್ಮ ಸರ್ಕಾರದ ಡಿಸಿಎಂ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು ಇದೇ ಮೊದಲಲ್ಲ. ಆದರೆ, ಈ ಬಾರಿಯೂ ಸಿಬಿಐನವರಿಗೆ ಏನೂ ದಾಖಲೆ ಸಿಗುವುದಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಹೊರತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಆರೋಪದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದ ನಂತರ ಮನೀಶ್ ಸಿಸೋಡಿಯಾ ಅವರ ಮನೆ, ಐಎಎಸ್ ಅಧಿಕಾರಿ ಮತ್ತು ಮಾಜಿ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಅವರ ನಿವಾಸ ಮತ್ತು ಇತರ 19 ಸ್ಥಳಗಳಲ್ಲಿ ಶೋಧ ನಡೆಸಲಾಯಿತು.