ಕೇಂದ್ರ ಸರ್ಕಾರ ಕೊಡದಿದ್ದರೂ ನಾವು ಉಚಿತವಾಗಿ ಲಸಿಕೆ ವಿತರಿಸುತ್ತೇವೆ: ಅರವಿಂದ್ ಕೇಜ್ರಿವಾಲ್
ಜೀವ ಉಳಿಸಬಲ್ಲ ಕೊರೊನಾ ಲಸಿಕೆಯನ್ನು ಕೊಳ್ಳುವ ಶಕ್ತಿಯೂ ಕೆಲವರಲ್ಲಿ ಇಲ್ಲ. ಆದ್ದರಿಂದ ಇಂತಹ ಕಠಿಣ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ನೀಡುವುದು ಮುಖ್ಯ.
ದೆಹಲಿ: ಒಂದುವೇಳೆ ಕೇಂದ್ರ ಸರ್ಕಾರ ಉಚಿತವಾಗಿ ಕೊರೊನಾ ಲಸಿಕೆ ಕೊಡದಿದ್ದರೆ ದೆಹಲಿ ಜನತೆಗೆ ಉಚಿತ ಲಸಿಕೆ ನೀಡುವ ಜವಾಬ್ದಾರಿ ನಮ್ಮದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಜನರು ಕಷ್ಟದಲ್ಲಿರುವುದರಿಂದ ಉಚಿತವಾಗಿ ಕೊರೊನಾ ಲಸಿಕೆ ನೀಡುವಂತೆ ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಅವರು ಇದಕ್ಕೆ ಒಪ್ಪದಿದ್ದರೂ ನಮ್ಮ ರಾಜ್ಯದ ಜನರಿಂದ ಯಾವುದೇ ಹಣ ಪಡೆಯದೇ ಲಸಿಕೆ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೊನಾ ಹೊಡೆತದಿಂದಾಗಿ ಕಂಗಾಲಾಗಿರುವ ದೇಶದ ಜನ ಸಾಮಾನ್ಯರನ್ನು ನಾವು ಗಮನದಲ್ಲಿಟ್ಟುಕೊಂಡು ಲಸಿಕೆ ವಿತರಿಸಬೇಕು. ಜೀವ ಉಳಿಸಬಲ್ಲ ಕೊರೊನಾ ಲಸಿಕೆಯನ್ನು ಕೊಳ್ಳುವ ಶಕ್ತಿಯೂ ಕೆಲವರಲ್ಲಿ ಇಲ್ಲ. ಆದ್ದರಿಂದ ಇಂತಹ ಕಠಿಣ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ನೀಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಲಸಿಕೆಯ ಬಗ್ಗೆ ವದಂತಿ ಹಬ್ಬಿಸಬೇಡಿ.. ನಮ್ಮ ವಿಜ್ಞಾನಿಗಳು ಮತ್ತು ಔಷಧ ತಯಾರಿಕಾ ಕೇಂದ್ರಗಳು ಎಲ್ಲಾ ಬಗೆಯ ವೈಜ್ಞಾನಿಕ ಪರೀಕ್ಷೆಗಳನ್ನು ಎದುರಿಸಿಯೇ ಕೊರೊನಾ ಲಸಿಕೆ ತಯಾರಿಸಿವೆ. ನಮ್ಮ ದೇಶದಲ್ಲಿ ತಯಾರಾಗಿರುವ ಲಸಿಕೆ ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಈ ಕುರಿತು ಸಂದೇಹ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು ಮತ್ತು ಫ್ರಂಟ್ಲೈನ್ ವಾರಿಯರ್ಸ್ಗಳಿಗೆ ಕೊರೊನಾ ಲಸಿಕೆ ನೀಡಲಾಗುವುದು. ನಂತರ ಹಂತಹಂತವಾಗಿ ಅದನ್ನು ವಿಸ್ತರಣೆ ಮಾಡಲಿದ್ದೇವೆ. ಕಳೆದ ಒಂದು ವರ್ಷದಲ್ಲಿ ಕೊರೊನಾ ವೈರಾಣು ತಂದೊಡ್ಡಿದ ನೋವನ್ನು ಲಸಿಕೆ ಶಮನ ಮಾಡಲಿದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.