Excise Policy case: ಇ.ಡಿ ವಿಚಾರಣೆಗೆ ಹಾಜರಾದ ದೆಹಲಿ ಸಚಿವ ಕೈಲಾಶ್ ಗೆಹ್ಲೋಟ್
ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಮತ್ತು ಅವರಿಗೆ ಏಪ್ರಿಲ್ 1 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ನಂತರ ಕೈಲಾಶ್ ಗಹ್ಲೋಟ್ ಅವರಿಗೆ ಸಮನ್ಸ್ ನೀಡಲಾಗಿದೆ. ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ನಂತರ ಈ ಪ್ರಕರಣದಲ್ಲಿ ಸಮನ್ಸ್ ಪಡೆದ ಮೂರನೇ ದೆಹಲಿ ಸಚಿವ ಗಹ್ಲೋಟ್ ಆಗಿದ್ದಾರೆ.

ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಜಾರಿ ನಿರ್ದೇಶನಾಲಯ ಕಸ್ಟಡಿ ವಿಸ್ತರಣೆ ಬೆನ್ನಲ್ಲೇ ಇದೀಗ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ (Kailash Gahlot) ಇ.ಡಿ (ED) ವಿಚಾರಣೆಗೆ ಹಾಜರಾದರು. ಕೈಲಾಶ್ ಗಹ್ಲೋಟ್ ದೆಹಲಿ ಸರ್ಕಾರದಲ್ಲಿ ಸಾರಿಗೆ ಮಾತ್ರವಲ್ಲದೆ ಗೃಹ, ಕಾನೂನು ಮತ್ತು ಸುವ್ಯವಸ್ಥೆ ಖಾತೆಗಳ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
49 ವರ್ಷದ ಗಹ್ಲೋಟ್ ನಜಾಫ್‌ಗಢದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರಾಗಿದ್ದಾರೆ. ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಎಎಪಿಯ ಹಲವು ನಾಯಕರು ಜೈಲು ಪಾಲಾಗುತ್ತಿರುವ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಇ.ಡಿ ಕೇಜ್ರಿವಾಲ್ರನ್ನು ಬಂಧಿಸಿತ್ತು.
ವರದಿಯ ಪ್ರಕಾರ, ಗಹ್ಲೋಟ್ಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಬರುವಂತೆ ಸೂಚಿಸಲಾಗಿತ್ತು. ಇದರಂತೆ ಅವರು ಇಂದು ವಿಚಾರಣೆಗೆ ಹಾಜರಾದರು.
2021-22 ಕ್ಕೆ ಹೊಸ ಮದ್ಯ ನೀತಿಯನ್ನು ಸಿದ್ಧಪಡಿಸುವ ಮತ್ತು ಅನುಷ್ಠಾನಗೊಳಿಸುವಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿದ್ದ ಸಚಿವರ ಗುಂಪಿನ ಭಾಗವಾಗಿರುವುದರಿಂದ ನೀತಿ ರಚನೆಗೆ ಸಂಬಂಧಿಸಿದಂತೆ ಗೆಹ್ಲೋಟ್ರನ್ನು ಇ.ಡಿ ಪ್ರಶ್ನಿಸಿರುವ ಸಾಧ್ಯತೆ ಇದೆ.
ಇ.ಡಿ ಚಾರ್ಜ್‌ಶೀಟ್‌ನಲ್ಲಿ ಗಹ್ಲೋಟ್ ಹೆಸರನ್ನು ಉಲ್ಲೇಖಿಸಿದೆ ಮತ್ತು ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾದ ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಬಗ್ಗೆಯೂ ಉಲ್ಲೇಖಿಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣ
ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ, ಅಕ್ರಮ ಹಣಕಾಸು ವರ್ಗಾವಣೆ ಮಾಡಿದ ಆರೋಪಗಳಿಗೆ ಸಂಬಂಧಿಸಿದೆ. ನಂತರ ಸರ್ಕಾರದ ಅಬಕಾರಿ ನೀತಿಯನ್ನು ರದ್ದುಗೊಳಿಸಲಾಯಿತು. ಈ ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಈ ಹಿಂದೆಯೇ ಇಡಿ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ನಂತರ ಇ.ಡಿ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತೆ 4 ದಿನ ಇಡಿ ಕಸ್ಟಡಿಗೆ
ಮತ್ತೊಂದೆಡೆ, ಅಕ್ರಮ ಹಣ ವರ್ಗಾವಣೆ ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಂದ 10 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಜೈಲು ಪಾಲಾದ ಎಎಪಿ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ