Hanif Shaikh: ನಿಷೇಧಿತ ಸಿಮಿ ಸಂಘಟನೆಯ ಉಗ್ರ ಹನೀಫ್ ಶೇಖ್ ಬಂಧನ: ಕರ್ನಾಟಕದಲ್ಲೂ ಹಲವು ಸಭೆಗಳನ್ನು ನಡೆಸಿದ್ದ ಆರೋಪಿ

ಮೋಸ್ಟ್ ವಾಂಟೆಡ್ ಉಗ್ರಗಾಮಿ, ನಿಷೇಧಿತ ಸೆಮಿ ಸಂಘಟನೆಯ ಉಗ್ರ ಹನೀಫ್ ಶೇಖ್​ನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೆಹಲಿ ಪೊಲೀಸ್ ವಿಶೇಷ ದಳ ಮಹಾರಾಷ್ಟ್ರದಲ್ಲಿ ಉಗ್ರನನ್ನು ಬಂಧಿಸಿದೆ. ಹೆಸರು ಬದಲಾಯಿಸಿಕೊಂಡು ತಲೆಮರಸಿ ಓಡಾಡುತ್ತಿದ್ದ ಈ ಉಗ್ರ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಶಾಮಿಲಾಗಿದ್ದ.

Hanif Shaikh: ನಿಷೇಧಿತ ಸಿಮಿ ಸಂಘಟನೆಯ ಉಗ್ರ ಹನೀಫ್ ಶೇಖ್ ಬಂಧನ: ಕರ್ನಾಟಕದಲ್ಲೂ ಹಲವು ಸಭೆಗಳನ್ನು ನಡೆಸಿದ್ದ ಆರೋಪಿ
ನಿಷೇಧಿತ ಸಿಮಿ ಸಂಘಟನೆಯ ಉಗ್ರ ಹನೀಫ್ ಶೇಖ್ ಬಂಧನ
Follow us
Ganapathi Sharma
|

Updated on: Feb 26, 2024 | 6:28 AM

ನವದೆಹಲಿ, ಫೆಬ್ರವರಿ 26: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ, ಹಲವು ಬಾರಿ ಸಭೆಗಳನ್ನು ನಡೆಸಿ ಕುಕೃತ್ಯಗಳಿಗೆ ಸಂಚು ಹೂಡಿದ್ದ, ನಿಷೇಧಿತ ಸಿಮಿ (SIMI) ಸಂಘಟನೆಯ ಉಗ್ರ ಹನೀಫ್ ಶೇಖ್​ನನ್ನು (Hanif Shaikh) ದೆಹಲಿ ಪೊಲೀಸ್ ವಿಶೇಷ ದಳ (Delhi Police) ಭಾನುವಾರ ಬಂಧಿಸಿದೆ. ಆರೋಪಿಯು ಮಹಾರಾಷ್ಟ್ರದ ಉರ್ದು ಶಾಲೆಯೊಂದರಲ್ಲಿ ಮಾರುವೇಷದಲ್ಲಿ ಪಾಠ ಮಾಡುತ್ತಿದ್ದ. 2001ರಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ದೇಶದ್ರೋಹ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.

ನ್ಯಾಯಾಲಯವಯ ಹನೀಫ್ ಶೇಖ್​ನನ್ನು ತಲೆಮರೆಸಿಕೊಂಡಿರುವ ಆರೋಪಿ ಘೋಷಿಸಿತ್ತು. ಹನೀಫ್ ಸಿಮಿ ಸಂಘಟನೆಯ ನಿಯತಕಾಲಿಕೆ ಇಸ್ಲಾಮಿಕ್ ಮೂವ್​ಮೆಂಟ್ (ಉರ್ದು ಆವೃತ್ತಿ) ಸಂಪಾದಕನಾಗಿದ್ದ. ಆರೋಪಿಯು ಕಳೆದ 25 ವರ್ಷಗಳ ಅವಧಿಯಲ್ಲಿ ಯುವಕರಿಗೆ ಮೂಲಭೂತವಾದದ ಬಗ್ಗೆ ಪ್ರಚೋದನೆ ನೀಡಿದ್ದ. ಮಹಾರಾಷ್ಟ್ರದಲ್ಲಿ ಹಲವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ. ಅನೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಆತ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ದಳದ ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪ್ರಕಾರ, ಇನ್ಸ್‌ಪೆಕ್ಟರ್ ಪವನ್ ಕುಮಾರ್ ಮತ್ತು ಎಸ್‌ಐ ಸುಮಿತ್ ತಂಡವು ಎಸಿಪಿ ವೇದಪ್ರಕಾಶ್ ಅವರ ಮೇಲ್ವಿಚಾರಣೆಯಲ್ಲಿ ಹನೀಫ್ ಶೇಖ್ ಸೇರಿದಂತೆ ಪರಾರಿಯಾಗಿರುವ ಸಿಮಿ ಸದಸ್ಯರನ್ನು ಬೆನ್ನುಹತ್ತಿದೆ. ಇನ್ಸ್‌ಪೆಕ್ಟರ್ ಪವನ್ ಅವರ ತಂಡ, ಇನ್ಸ್‌ಪೆಕ್ಟರ್ ಕರಂವೀರ್ ಅವರೊಂದಿಗೆ ಹಲವು ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಸಿಮಿ ಕಾರ್ಯಕರ್ತರು, ಸಿಮಿ ಬೆಂಬಲಿಗರು ಮತ್ತು ಸ್ಲೀಪರ್ ಸೆಲ್​​ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ತಂಡವು ದೇಶದ ವಿವಿಧ ಭಾಗಗಳಿಗೆ, ವಿಶೇಷವಾಗಿ ದೆಹಲಿಯಲ್ಲಿ ಹಾಗೂ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಮಾಹಿತಿ ಸಂಗ್ರಹದ ವೇಳೆ ಸಿಕ್ಕಿತು ಹನೀಫ್ ಶೇಖ್ ವಿವರ

ತನಿಖೆಯ ಸಮಯದಲ್ಲಿ, ಇನ್ಸ್‌ಪೆಕ್ಟರ್ ಪವನ್‌ಗೆ ಹನೀಫ್ ಶೇಖ್ ಬಗ್ಗೆ ಮಾಹಿತಿ ಸಿಕ್ಕಿತು. ಹನೀಫ್ ತನ್ನ ಗುರುತನ್ನು ಮೊಹಮ್ಮದ್ ಎಂದು ಬದಲಾಯಿಸಿದ್ದ. ಹನೀಫ್ ಈಗ ಮಹಾರಾಷ್ಟ್ರದ ಭೂಸಾವಲ್‌ನಲ್ಲಿರುವ ಉರ್ದು ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ವಿವರ ದೊರೆಯಿತು. ಫೆಬ್ರವರಿ 22 ರಂದು ಮೊಹಮ್ಮದ್ದೀನ್ ನಗರದಿಂದ ಖಡ್ಕ ರಸ್ತೆ ಕಡೆಗೆ ಬರುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ಭೂಸಾವಲ್ ಖಡ್ಕ ರಸ್ತೆಯ ಆಶಾ ಟವರ್ ಬಳಿ ಪೊಲೀಸ್ ತಂಡವು ಮುತ್ತಿಗೆ ಹಾಕಿತು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಿಮಿ ಸಂಘಟನೆಯ ಸಭೆಗಳಲ್ಲಿ ಭಾಗವಹಿಸುವುದು ಮತ್ತು ಆಯೋಜಿಸುವುದು ಮುಂತಾದ ಎಲ್ಲಾ ಘಟನೆಗಳಲ್ಲಿ ಆರೋಪಿ ಪ್ರಮುಖ ಪಾತ್ರ ವಹಿಸಿದ್ದ.

ಇದನ್ನೂ ಓದಿ: ಉತ್ತರ ಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಐವರು ಸಾವು, ಹಲವು ಕಾರ್ಮಿಕರಿಗೆ ಗಾಯ

ಏನಿದು ಸಿಮಿ?

ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು 1976 ರಲ್ಲಿ ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ಥಾಪನೆಯಾಗಿತ್ತು. ಇಸ್ಲಾಂ ಸಾಮ್ರಾಜ್ಯವನ್ನು ಸ್ಥಾಪಿಸುವುದು ಈ ಸಂಸ್ಥೆಯ ಗುರಿ ಎಂದು ಹೇಳಲಾಗಿದೆ. ಸಿಮಿ ಕಾರ್ಯಕರ್ತರು ವಿವಿಧ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಸಿಮಿಯನ್ನು ಸರ್ಕಾರ ನಿಷೇಧಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ