ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) 2018 ರ ಟ್ವೀಟ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿ ಜುಬೇರ್ ಬಂಧನಕ್ಕೆ ಕಾರಣವಾದ ಟ್ವಿಟರ್ (Twitter) ಬಳಕೆದಾರರ ಹೇಳಿಕೆಯನ್ನು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜೂನ್‌ನಲ್ಲಿ ಜುಬೇರ್ನ್ನು ಬಂಧಿಸಿದ ಒಂದು ವಾರದ ನಂತರ ತನ್ನ ಹೇಳಿಕೆಯನ್ನು ದಾಖಲಿಸಲು ಪೊಲೀಸರು ದ್ವಾರಕಾ ನಿವಾಸಿಯಾದ ಟ್ವಿಟರ್ ಬಳಕೆದಾರರನ್ನು ಪತ್ತೆಹಚ್ಚಿದ್ದಾರೆ ಎಂದು ವಿಷಯ ತಿಳಿದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾಗ ಜುಬೇರ್ 2018 ರ ಆಕ್ಷೇಪಾರ್ಹ ಟ್ವೀಟ್ ನೋಡಿದ್ದೇನೆ ಎಂದು ದೂರುದಾರರು ಹೇಳಿದ್ದಾರೆ. ಜೂನ್ 27 ರಂದು ಜುಬೇರ್ ಬಂಧನದ ಒಂದು ದಿನದ ನಂತರ ಅವರು ತಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದರು.
ನಮ್ಮ ಅಧಿಕಾರಿಗಳು ದೆಹಲಿ ನಿವಾಸಿಯಾಗಿರುವ ಬಳಕೆದಾರರನ್ನು ಸಂಪರ್ಕಿಸಿದ್ದಾರೆ. ಅವರ ಹೇಳಿಕೆಯನ್ನು ಜೂನ್ 30 ಅಥವಾ ಜುಲೈ 1 ರಂದು ದಾಖಲಿಸಲಾಗಿದೆ. ಇದು ನಮ್ಮ ತನಿಖಾ ಪ್ರಕ್ರಿಯೆಯ ಭಾಗವಾಗಿದೆ. ವಿಚಾರಣೆಯ ಸಮಯದಲ್ಲಿ ಅವರನ್ನು ಮತ್ತೆ ಸಂಪರ್ಕಿಸಲಾಗುವುದು ಎಂದು ದೆಹಲಿ ಪೊಲೀಸ್‌ನ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಜೂನ್‌ನಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ ಟ್ವಿಟರ್ ಬಳಕೆದಾರರು ದೆಹಲಿಯ ದ್ವಾರಕಾದಲ್ಲಿ ವಾಸಿಸುವ 36 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ರಾಜಸ್ಥಾನದ ಅಜ್ಮೀರ್‌ನವರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆತನ ಐಪಿ ವಿಳಾಸದ ಮೂಲಕ ಪತ್ತೆ ಹಚ್ಚಲಾಗಿದ್ದು, ಪೊಲೀಸರ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಜುಲೈನಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಬಿಡುಗಡೆಯಾದ ಜುಬೇರ್ ವಿರುದ್ಧ ಐಎಫ್ಎಸ್ಒ ಸರಣಿ ಪ್ರಕರಣಗಳ ತನಿಖೆ ನಡೆಸುತ್ತಿದೆ.