ಮನೆಕೆಲಸದಾಕೆಯನ್ನು ಕೂಡಿಹಾಕಿ ಚಿತ್ರಹಿಂಸೆ; ಅಮಾನತುಗೊಂಡ ಬಿಜೆಪಿ ನಾಯಕಿ ಸೀಮಾ ಪತ್ರಾ ಬಂಧನ
ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ ಸುನೀತಾಳನ್ನು ಹಿಂಸಿಸಿ, ಆಕೆಗೆ ನಾಲಿಗೆಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಸೀಮಾ ಹೇಳಿದ್ದರು. ಸೀಮಾ ಪತ್ರಾ ತನ್ನನ್ನು ಬಿಸಿ ವಸ್ತುಗಳಿಂದ ಸುಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು.
ರಾಂಚಿ: ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ಸೀಮಾ ಪತ್ರಾ (Seema Patra) ಅವರನ್ನು ರಾಂಚಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ. ಸೀಮಾ ಪತ್ರಾ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಬಂಧನಕ್ಕೆ ಹೆದರಿ ಸೀಮಾ ಪತ್ರಾ ಪರಾರಿಯಾಗಿದ್ದರು. ರಾಂಚಿಯ ಅರ್ಗೋರಾ ಪೊಲೀಸರು ಆಕೆಗಾಗಿ ನಿನ್ನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ ಸುನೀತಾಳನ್ನು ಹಿಂಸಿಸಿ, ಆಕೆಗೆ ನಾಲಿಗೆಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಸೀಮಾ ಹೇಳಿದ್ದರು ಎನ್ನಲಾಗಿದೆ. ಸುನೀತಾ ಅವರ ದೇಹದಾದ್ಯಂತ ಅನೇಕ ಗಾಯಗಳಾಗಿತ್ತು. ಸೀಮಾ ಪತ್ರಾ ತನ್ನನ್ನು ಬಿಸಿ ವಸ್ತುಗಳಿಂದ ಸುಡುತ್ತಿದ್ದರು ಎಂದು ಆಕೆ ಆರೋಪಿಸಿದ್ದರು. ಈ ಘಟನೆ ಬೆಳಕಿಗೆ ಬಂದ ಬಳಿಕ ಸೀಮಾ ಪತ್ರಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.
ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪತ್ರಾ ಅವರ ಪತ್ನಿ ಸೀಮಾ ಪತ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆ, 1989ರ ಸೆಕ್ಷನ್‌ಗಳ ಅಡಿಯಲ್ಲಿ ರಾಂಚಿಯ ಅರ್ಗೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಸೆಕ್ಷನ್ 164ರ ಅಡಿಯಲ್ಲಿ ಸುನೀತಾ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: Jharkhand Crisis: ಸಿಎಂ ಹೇಮಂತ್ ಸೊರೇನ್ಗೆ ಅನರ್ಹತೆ ಭೀತಿ; ಜಾರ್ಖಂಡ್ ಶಾಸಕರು ರೆಸಾರ್ಟ್ಗೆ ಶಿಫ್ಟ್?
ರಾಂಚಿ ಪೊಲೀಸರು ಸೀಮಾ ಪತ್ರಾ ಅವರನ್ನು ಬಂಧಿಸಲು ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಕೊನೆಗೆ ತಮಗೆ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ರಾಂಚಿಯಿಂದ ರಸ್ತೆ ಮಾರ್ಗವಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸೀಮಾ ಪತ್ರಾಳನ್ನು ಬಂಧಿಸಿದ್ದರು.
ಸೀಮಾ ಪತ್ರಾ ಯಾರು?: ಸೀಮಾ ಪತ್ರಾ ಅವರು ‘ಬೇಟಿ ಬಚಾವೋ-ಬೇಟಿ ಪಢಾವೋ’ ಅಭಿಯಾನದ ರಾಜ್ಯ ಸಂಚಾಲಕರಾಗಿದ್ದಾರೆ. ಅವರು ಬಿಜೆಪಿಯ ಮಹಿಳಾ ವಿಭಾಗದ ಸದಸ್ಯರಾಗಿದ್ದರು. ಅವರು ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪತ್ರಾ ಅವರ ಪತ್ನಿ ಕೂಡ ಹೌದು. ಸೀಮಾ ಪತ್ರಾ ಅವರ ಮಗ ಆಯುಷ್ಮಾನ್ ರಾಜ್ಯ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಮನೆಯ ಕೆಲಸದಾಕೆಯನ್ನು ರಕ್ಷಿಸಲು ಪ್ರಯತ್ನಿಸಿದನು. ಹೀಗಾಗಿ, ಅವನು ತನ್ನ ಸ್ನೇಹಿತ ವಿವೇಕ್ ಬಾಸ್ಕೆಗೆ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದನು. ಸುನೀತಾ ಕೊನೆಗೆ ವಿವೇಕ್‌ಗೆ ತನ್ನ ಕಷ್ಟದ ಬಗ್ಗೆ ಹೇಳಿಕೊಂಡ ನಂತರ ಆಕೆಯನ್ನು ರಕ್ಷಿಸಲಾಯಿತು. ಜಾರ್ಖಂಡ್‌ನಲ್ಲಿ ಸೀಮಾ ಪತ್ರಾ ತನ್ನ ಮನೆಗೆಲಸದವರಿಗೆ ಕಿರುಕುಳ ನೀಡಿದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗಮನಕ್ಕೆ ತಂದಿದೆ.
ಇದನ್ನೂ ಓದಿ: ನೆಲದ ಮೇಲೆ ಮೂತ್ರ ನೆಕ್ಕುವಂತೆ ಮಾಡಿ ಮನೆ ಕೆಲಸದ ಸಹಾಯಕಿಗೆ ಕಿರುಕುಳ ನೀಡಿದ್ದ ಜಾರ್ಖಂಡ್ ಬಿಜೆಪಿ ನಾಯಕಿ ಅಮಾನತು
ದಲಿತ್ ವಾಯ್ಸ್ ಹಂಚಿಕೊಂಡ ಪೋಸ್ಟ್ ಪ್ರಕಾರ, ಮನೆಗೆಲಸದವರನ್ನು ಸೀಮಾ ಪತ್ರಾ ತಮ್ಮ ಮನೆಯಲ್ಲಿ ಇರಿಸಿ 8 ವರ್ಷಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಬಿಸಿಯಾದ ಪಾತ್ರೆ ಮತ್ತು ಲೋಹದ ರಾಡ್‌ಗಳಿಂದ ಆಕೆಯನ್ನು ಥಳಿಸಿದ್ದಾರೆ. ಅಲ್ಲದೆ, ನೆಲದಲ್ಲಿ ಬಿದ್ದ ಮೂತ್ರವನ್ನು ನಾಲಿಗೆಯಿಂದ ನೆಕ್ಕುವಂತೆ ಒತ್ತಾಯಿಸಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಕೆಲಸದಾಕೆ ಸುನೀತಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು, ತನ್ನೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗೆ ಏನೋ ಹೇಳಲು ಪ್ರಯತ್ನವನ್ನು ಮಾಡುತ್ತಿರುವುದನ್ನು ನೋಡಬಹುದು. ಆಕೆಯ ಹಲ್ಲುಗಳು ಮುರಿದುಹೋಗಿವೆ ಮತ್ತು ಆಕೆಯ ದೇಹದ ಮೇಲೆರುವ ಗಾಯಗಳು ಆಕೆ ಮೇಲೆ ಪದೇ ಪದೇ ಹಲ್ಲೆ ನಡೆದಿತ್ತು ಎಂಬುದನ್ನು ತೋರಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಲೈವ್ ಹಿಂದೂಸ್ತಾನ್ ಪ್ರಕಾರ, ಜಾರ್ಖಂಡ್‌ನ ಗುಮ್ಲಾ ನಿವಾಸಿ ಸುನೀತಾ ಸುಮಾರು 10 ವರ್ಷಗಳ ಹಿಂದೆ ಸೀಮಾ ಪತ್ರಾ ಅವರ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಕೆ ಮನೆಗೆಲಸದವಳಾಗಿ ಕೆಲಸ ಮಾಡಲು ಪತ್ರಾ ಅವರ ಮಗಳು ವತ್ಸಲಾಳೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದಳು. ಸುಮಾರು ನಾಲ್ಕು ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ಇಬ್ಬರೂ ರಾಂಚಿಗೆ ಮರಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Wed, 31 August 22