ಕ್ಲಬ್ ಹೌಸ್ನಲ್ಲೂ ಮುಸ್ಲಿಂ ಹುಡುಗಿಯರ ಬಗ್ಗೆ ಅಶ್ಲೀಲ ಚರ್ಚೆ; ಅಸಭ್ಯ ಮಾತನಾಡಿದವರ ಬಂಧನಕ್ಕೆ ದೆಹಲಿ ಮಹಿಳಾ ಆಯೋಗ ಆಗ್ರಹ
ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗಿಂತ ಸುಂದರವಾಗಿರುತ್ತಾರೆ..ಎಲ್ಲ ಮುಸ್ಲಿಂ ಹುಡುಗಿಯರೂ ಅಂತಿಮವಾಗಿ ಹಿಂದೂ ಎಂಬಂಥ ಮಾತುಗಳು ಆಡಿಯೋದಲ್ಲಿ ಕೇಳುತ್ತವೆ.
ಇತ್ತೀಚೆಗೆ ಒಮ್ಮೆಲೇ ಪ್ರಸಿದ್ಧಿಗೆ ಬಂದಿರುವ ಆಡಿಯೋ ಆಧಾರಿತ ಅಪ್ಲಿಕೇಶನ್ ಕ್ಲಬ್ಹೌಸ್ ವಿರುದ್ಧ ದೆಹಲಿ ಮಹಿಳಾ ಆಯೋಗ (DCW) ದೆಹಲಿ ಪೊಲೀಸರಿಗೆ ದೂರು ನೀಡಿದೆ. ದೆಹಲಿ ಪೊಲೀಸ್ ಸೈಬರ್ಕ್ರೈಂ ಸೆಲ್ ಗೆ ನೋಟಿಸ್ ಕಳಿಸಿರುವ ಮಹಿಳಾ ಆಯೋಗ, ಕ್ಲಬ್ ಹೌಸ್ನಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾಮಿ ಮಲಿವಾಲ್, ಸುಲ್ಲಿ ಬಾಯ್ ಆಯ್ತು..ನಂತರ ಬುಲ್ಲಿ ಬಾಯ್ ಬಂತು. ಇದೀಗ ಕ್ಲಬ್ ಹೌಸ್ ಆ್ಯಪ್ನ್ನು ಕೂಡ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಲು ಬಳಸಿಕೊಳ್ಳುತ್ತಿರುವುದು ಖೇದ ತಂದಿದೆ. ಇದಕ್ಕೆಲ್ಲ ಕೊನೆಯೆಂಬುದು ಯಾವಾಗ? ಕ್ಲಬ್ ಹೌಸ್ನಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಚರ್ಚಿಸುತ್ತಿರುವ ಬಗ್ಗೆ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದೇನೆ. ಎಫ್ಐಆರ್ ದಾಖಲಿಸಿದ ಕೂಡ ಬಂಧಿಸುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕ್ಲಬ್ ಹೌಸ್ ಎಂಬುದು ಒಂದು ಗುಂಪು ಹರಟೆಯಾಗಿದ್ದು, ಇದಕ್ಕೆ ಯಾವುದೇ ಪ್ರೈವಸಿ ಇರುವುದಿಲ್ಲ. ಕ್ಲಬ್ ಹೌಸ್ ಆ್ಯಪ್ ಹೊಂದಿದವರೆಲ್ಲ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳಬಹುದು. ಹೀಗೆ ಒಬ್ಬರು ಶುರುಮಾಡುವ ಹರಟೆಗೆ ಇನ್ನೊಬ್ಬರನ್ನು ಕರೆಯಬಹುದು. ಹೀಗೆ ಶುರುವಾದ ಮಾತುಕತೆಯನ್ನು ಯಾರು ಬೇಕಾದರೂ ಕೇಳಬಹುದಾಗಿದೆ. ಆದರೆ ಮಾತನಾಡುವ ಅವಕಾಶ ಕಲ್ಪಿಸುವ ಅಧಿಕಾರ ಮಾತ್ರ, ಗ್ರೂಪ್ ಕ್ರಿಯೇಟ್ ಮಾಡಿದವನಿಗೆ ಇರುತ್ತದೆ. ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ಈ ಕ್ಲಬ್ ಹೌಸ್ ಬಗ್ಗೆ ಇದೀಗ ದೆಹಲಿ ಮಹಿಳಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಹೀಗೆ ಕ್ಲಬ್ ಹೌಸ್ನಲ್ಲಿ ಕೆಲವರು ಮುಸ್ಲಿಂ ಮಹಿಳೆಯರ ಬಗ್ಗೆ ತುಂಬ ಅಶ್ಲೀಲ ಚರ್ಚೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
सुल्ली बाई, फिर बुल्ली बाई और अब क्लब्हाउस ऐप पे मुस्लिम लड़कियों के ख़िलाफ़ अभद्र यौन टिप्पणी! ऐसा कब तक चलेगा?
मैंने क्लब्हाउस वाले मामले में दिल्ली पुलिस को नोटिस इशू किया है की जल्द FIR कर अपराधियों को अरेस्ट करें! pic.twitter.com/rGBj5y0QFq
— Swati Maliwal (@SwatiJaiHind) January 18, 2022
ಈಗೊಂದು ಎರಡು ದಿನಗಳ ಹಿಂದೆ ತನ್ವೀರ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಎರಡು ನಿಮಿಷಗಳ ಕ್ಲಬ್ ಹೌಸ್ ಸಂಭಾಷಣೆಯ ಆಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಇರುವವರು ಹಿಂದು ಹುಡುಗ-ಹುಡುಗಿಯರು ಎಂದು ಹೇಳಿದ್ದ ಅವರು, ಈ ಕ್ಲಬ್ಹೌಸ್ನಲ್ಲಿ ಹಿಂದು ಹುಡುಗ-ಹುಡುಗಿಯರು ನಡೆಸುತ್ತಿರುವ ಚರ್ಚೆ ಎದುರು ಬುಲ್ಲಿ ಮತ್ತು ಸುಲ್ಲಿ ಡೀಲ್ಸ್ಗಳು ಏನೇನೂ ಅಲ್ಲ ಎನ್ನಿಸುತ್ತದೆ. ಬಹುಶ್ಯಃ ಬಹುತೇಕ ಹಿಂದುಗಳ ಮನೆಯ ಡೈನಿಂಗ್ ಟೇಬಲ್, ಡ್ರಾಯಿಂಗ್ ರೂಮ್ಗಳಲ್ಲಿ ಹೀಗೆ ಮಸ್ಲಿಮರ ಬಗ್ಗೆ ನಿರಂತರ ಮಾತುಕತೆಗಳು ನಡೆಯುತ್ತವೆ ಎಂದೆನಿಸುತ್ತದೆ ಎಂದು ಕ್ಯಾಪ್ಷನ್ ಬರೆದಿದ್ದರು. ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗಿಂತ ಸುಂದರವಾಗಿರುತ್ತಾರೆ..ಎಲ್ಲ ಮುಸ್ಲಿಂ ಹುಡುಗಿಯರೂ ಅಂತಿಮವಾಗಿ ಹಿಂದೂ. ಒಬ್ಬಳು ಮುಸ್ಲಿಂ ಹುಡುಗಿಯ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಏಳು ದೇವಸ್ಥಾನ ಕಟ್ಟಿಸುವುದಕ್ಕೆ ಸಮ ಎಂದು ಒಬ್ಬ ಹೇಳಿದರೆ, ಇನ್ನೊಬ್ಬಾತ ಪ್ರತಿಕ್ರಿಯೆ ನೀಡಿ, ಇಲ್ಲ, ಅದು ಇನ್ನೂ ದೊಡ್ಡ ಕೆಲಸ ಅಂದರೆ ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಸಮನಾವಾದ ಕ್ರಿಯೆ ಎಂಬಿತ್ಯಾದಿ ಮಾತುಗಳು ಈ ಸಂಭಾಷಣೆಯಲ್ಲಿ ಕೇಳಿಬರುತ್ತವೆ.
ದೆಹಲಿ ಮಹಿಳಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಭಾಗವಹಿಸಿದವರು ಮುಸ್ಲಿಂ ಸಮುದಾಯದ ಮಹಿಳೆಯರು ಮತ್ತು ಹುಡುಗಿಯರ ಬಗ್ಗೆ ಅಶ್ಲೀಲ, ಅಸಭ್ಯ ಮಾತುಗಳನ್ನಾಡಿದ್ದನ್ನು ಕೇಳಬಹುದು. ಅವಹೇಳನಕಾರಿ ಹೇಳಿಕೆಗಳು ಸ್ಪಷ್ಟವಾಗಿ ಕೇಳುತ್ತವೆ ಎಂದು ಮಹಿಳಾ ಆಯೋಗ ಹೇಳಿದೆ. ಅಷ್ಟೇ ಅಲ್ಲ, ನಾವು ನೀಡಿರುವ ನೋಟಿಸ್ಗೆ ದೆಹಲಿ ಪೊಲೀಸರು ಜನವರಿ 24ರೊಳಗೆ ಉತ್ತರಿಸಬೇಕು ಎಂದೂ ಹೇಳಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್ಗೆ ಮುರುಗೇಶ್ ನಿರಾಣಿ ಆಹ್ವಾನ
Published On - 6:01 pm, Tue, 18 January 22