ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಪ್ರದರ್ಶಿಸುವ ಸ್ತಬ್ಧಚಿತ್ರಗಳ ಆಯ್ಕೆ ಹೇಗಿರುತ್ತದೆ? ಮಾನದಂಡವೇನು?

ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಪ್ರದರ್ಶಿಸುವ ಸ್ತಬ್ಧಚಿತ್ರಗಳ ಆಯ್ಕೆ ಹೇಗಿರುತ್ತದೆ? ಮಾನದಂಡವೇನು?
2021ರಲ್ಲಿ ಪ್ರದರ್ಶಿತವಾದ ಉತ್ತರ ಪ್ರದೇಶದ ಸ್ತಬ್ಧಚಿತ್ರ

Republic Day tableaux ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಗಣರಾಜ್ಯೋತ್ಸವದ ಪರೇಡ್ ಮತ್ತು ಆಚರಣೆಗಳ ಜವಾಬ್ದಾರಿಯನ್ನು ಹೊಂದಿರುವ ರಕ್ಷಣಾ ಸಚಿವಾಲಯವು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಕೆಲವು ಸಾಂವಿಧಾನಿಕ ಅಧಿಕಾರಿಗಳನ್ನು ಸ್ತಬ್ಧಚಿತ್ರಗಳ ಮೂಲಕ ಪರೇಡ್‌ನಲ್ಲಿ ಭಾಗವಹಿಸಲು ಆಹ್ವಾನಿಸುತ್ತದೆ.

TV9kannada Web Team

| Edited By: Rashmi Kallakatta

Jan 18, 2022 | 5:57 PM

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಗಣರಾಜ್ಯೋತ್ಸವದ ಪರೇಡ್‌ಗಾಗಿ (Republic Day Parade) ಪಶ್ಚಿಮ ಬಂಗಾಳದ ಟ್ಯಾಬ್ಲೋವನ್ನು “ಯಾವುದೇ ಕಾರಣಗಳು ಅಥವಾ ಸಮರ್ಥನೆಗಳನ್ನು ನೀಡದೆ ತಿರಸ್ಕರಿಸಲಾಗಿದೆ”. ಇದರಿಂದ ತೀವ್ರ ಆಘಾತವಾಗಿದೆ ಎಂದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ 125 ನೇ ಜನ್ಮ ವಾರ್ಷಿಕೋತ್ಸವದ ವರ್ಷದಲ್ಲಿ ಅವರ ಐಎನ್‌ಎ ಕೊಡುಗೆಗಳನ್ನು ಸ್ಮರಿಸುವ ಸ್ತಬ್ಧಚಿತ್ರವಾಗಿತ್ತು ಅದು ಎಂದು ಮಮತಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡಿನ ಸ್ತಬ್ಧಚಿತ್ರವನ್ನು ಹೊರಗಿಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಕೂಡಾ ಪತ್ರಬರೆದಿದ್ದರು.  ಪರೇಡ್‌ಗಾಗಿ ಅಂತಿಮ ಆಯ್ಕೆ ಮಾಡಿದ ಸ್ತಬ್ದ ಚಿತ್ರಗಳನ್ನು ಸರ್ಕಾರವು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸದಿದ್ದರೂ, ಮೂಲಗಳ ಪ್ರಕಾರ ಪರೇಡ್‌ನಲ್ಲಿ 21 ಸ್ತಬ್ದ ಚಿತ್ರಗಳಿರಲಿವೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರ ಅಥವಾ ಸ್ವತಂತ್ರ ಸಂಸ್ಥೆಗಳ ಅಡಿಯಲ್ಲಿ ಒಂಬತ್ತು ಇಲಾಖೆಗಳ ಸ್ತಬ್ಧಚಿತ್ರ ಇದರಲ್ಲಿ ಭಾಗಿಯಾಗಲಿದೆ.  ಟ್ಯಾಬ್ಲೋ ತಿರಸ್ಕರಿಸಲ್ಪಟ್ಟ ಏಕೈಕ ರಾಜ್ಯ ಪಶ್ಚಿಮ ಬಂಗಾಳವಲ್ಲ. ಇದಕ್ಕಿಂತ ಮುನ್ನ ಶ್ರೀ ನಾರಾಯಣ ಗುರುಗಳನ್ನು ಒಳಗೊಂಡಿರುವ ಕೇರಳದ ಪ್ರಸ್ತಾವಿತ ಟ್ಯಾಬ್ಲೋ ಆಯ್ಕೆಯಾದ ಪಟ್ಟಿಯಲ್ಲಿಲ್ಲ ಎಂದು ರಾಜ್ಯದ ಅಧಿಕಾರಿಗಳು ಹೇಳಿದ್ದರು.

ಪರೇಡ್‌ನ ಜವಾಬ್ದಾರಿಯನ್ನು ಹೊತ್ತಿರುವ ಮತ್ತು ಸ್ತಬ್ಧಚಿತ್ರದ ಸಮನ್ವಯ ಸಂಸ್ಥೆಯಾಗಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಆಯ್ಕೆಯನ್ನು ತಜ್ಞರ ಸಮಿತಿಯು ಮಾಡುತ್ತದೆ ಮತ್ತು ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಹೇಳಿದ್ದಾರೆ.  ರಾಜಕೀಯ ವಿವಾದಗಳು ಉಲ್ಬಣಗೊಳ್ಳುತ್ತಿದ್ದಂತೆ ಈ ಸ್ತಬ್ಧಚಿತ್ರಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತಿದೆ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ವಿವರಣೆ ಇಲ್ಲಿದೆ.

ಸ್ತಬ್ಧಚಿತ್ರವನ್ನು ನಿರ್ಧರಿಸುವ ಪ್ರಕ್ರಿಯೆಯು ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾರು ಭಾಗವಹಿಸಬಹುದು?

ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಗಣರಾಜ್ಯೋತ್ಸವದ ಪರೇಡ್ ಮತ್ತು ಆಚರಣೆಗಳ ಜವಾಬ್ದಾರಿಯನ್ನು ಹೊಂದಿರುವ ರಕ್ಷಣಾ ಸಚಿವಾಲಯವು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಕೆಲವು ಸಾಂವಿಧಾನಿಕ ಅಧಿಕಾರಿಗಳನ್ನು ಸ್ತಬ್ಧಚಿತ್ರಗಳ ಮೂಲಕ ಪರೇಡ್‌ನಲ್ಲಿ ಭಾಗವಹಿಸಲು ಆಹ್ವಾನಿಸುತ್ತದೆ.

ರಕ್ಷಣಾ ಸಚಿವಾಲಯವು 80 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಕಾರ್ಯದರ್ಶಿಗಳ ಮೂಲಕ ಮತ್ತು ಚುನಾವಣಾ ಆಯೋಗ ಮತ್ತು ನೀತಿ ಆಯೋಗಕ್ಕೆ ಸೆಪ್ಟೆಂಬರ್ 16 ರಂದು ಪತ್ರಗಳನ್ನು ಬರೆದು ಭಾಗವಹಿಸಲು ಆಹ್ವಾನಿಸಿತು. ಗಣರಾಜ್ಯೋತ್ಸವದ ಪರೇಡ್‌ನಲ್ಲಿ “ಭಾಗವಹಿಸಲು ಸ್ತಬ್ಧಚಿತ್ರದ ಪ್ರಸ್ತಾಪಗಳನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.  ಸೆಪ್ಟೆಂಬರ್ 27ರೊಳಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕಾಗಿತ್ತು ಮತ್ತು ಅಕ್ಟೋಬರ್ ಎರಡನೇ ವಾರದಲ್ಲಿ ಪ್ರಸ್ತಾವನೆಗಳ ಶಾರ್ಟ್ ಲಿಸ್ಟ್ ಪ್ರಾರಂಭವಾಯಿತು.

ಭಾಗವಹಿಸುವ ರಾಜ್ಯಗಳು ಅಥವಾ ಕೇಂದ್ರ ಸರ್ಕಾರದ ಇಲಾಖೆಗಳ ಸ್ತಬ್ಧಚಿತ್ರಕ್ಕಿರುವ ಮಾನದಂಡವೇನು?

ಭಾಗವಹಿಸುವವರು ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ಸಮಗ್ರ ಥೀಮ್‌ನಲ್ಲಿ ಪ್ರದರ್ಶಿಸಬೇಕು. ಈ ವರ್ಷ ಭಾಗವಹಿಸುವವರಿಗೆ ನೀಡಲಾದ ಥೀಮ್ ಭಾರತದ ಸ್ವಾತಂತ್ರ್ಯದ 75 ವರ್ಷಗಳು ಎಂಬುದಾಗಿದೆ. India@75 – Freedom struggle, Ideas @ 75, Achievements @ 75, Actions @ 75 ಮತ್ತು Resolve @ 75- ಇವಿಷ್ಟು ಥೀಮ್ ಗಳನ್ನು ಸರ್ಕಾರ ಸೂಚಿಸಿತ್ತು.

ರಕ್ಷಣಾ ಸಚಿವಾಲಯವು ಎಲ್ಲಾ ಸ್ತಬ್ಧಚಿತ್ರಗಳು ಏನನ್ನು ಒಳಗೊಂಡಿರಬಹುದು ಅಥವಾ ಒಳಗೊಂಡಿರಬೇಕು ಎಂಬುದರ ಕುರಿತು ಮೂಲಭೂತ ಮಾರ್ಗಸೂಚಿಗಳನ್ನು ಸಹ ಹಂಚಿಕೊಳ್ಳುತ್ತದೆ. ಭಾಗವಹಿಸುವ ಘಟಕಗಳು “ಪ್ರಸಿದ್ಧ ಸಂಸ್ಥೆಗಳ ಯುವ ಅರ್ಹ ವಿನ್ಯಾಸಕರು” ತೊಡಗಿಸಿಕೊಳ್ಳಬೇಕು. ಚಿತ್ರಗಳು ಅಥವಾ ವಿಷಯದ ಸ್ಪಷ್ಟ ಪ್ರದರ್ಶನಕ್ಕಾಗಿ ಎಲೆಕ್ಟ್ರಾನಿಕ್ ಡಿಸ್ಪ್ಲೇ ಗೋಡೆಗಳು, ರೋಬೋಟಿಕ್ಸ್ ಅಥವಾ ಮೆಕಾಟ್ರಾನಿಕ್ಸ್ ಬಳಸಿ ಚಲಿಸುವಂತೆ ಮಾಡುವುದು, 3D ಮುದ್ರಣವನ್ನು ಬಳಸಬಹುದು. ವರ್ಧಿತ ಅಥವಾ ವರ್ಚುವಲ್ ರಿಯಾಲಿಟಿಯನ್ನೂ ಬಳಸಿ ಟ್ಯಾಬ್ಲೋಗೆ ಸ್ಪೆಷಲ್ ಎಫೆಕ್ಟ್ ಕೊಡಬಹುದು.

ಎರಡು ವಿಭಿನ್ನ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ಒಂದೇ ರೀತಿ ಇರಬಾರದು. ಏಕೆಂದರೆ ಸ್ತಬ್ಧಚಿತ್ರಗಳು ಒಟ್ಟಾಗಿ ದೇಶದ ವೈವಿಧ್ಯತೆಯನ್ನು ಪ್ರದರ್ಶಿಸಬೇಕು.  ಸ್ತಬ್ಧಚಿತ್ರಗಳ್ಲಲಿ ಯಾವುದೇ ಬರವಣಿಗೆ ಅಥವಾ ಲೋಗೋಗಳನ್ನು ಬಳಸುವಂತಿಲ್ಲ, ರಾಜ್ಯ/ ಕೇಂದ್ರಾಡಳಿತ ಪ್ರದೇಶ/ ಇಲಾಖೆಯ ಹೆಸರನ್ನು ಹೊರತುಪಡಿಸಿ, ಅದನ್ನು ಮುಂಭಾಗದಲ್ಲಿ ಹಿಂದಿ, ಹಿಂದೆ ಇಂಗ್ಲಿಷ್ ಮತ್ತು ಬದಿಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಬರೆಯಬೇಕು.

ರಕ್ಷಣಾ ಸಚಿವಾಲಯವು ಭಾಗವಹಿಸುವವರಿಗೆ ಸ್ತಬ್ಧಚಿತ್ರಗಳು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಮತ್ತು ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಆಧಾರಿತ ಉತ್ಪನ್ನಗಳ ಬಳಸದಂತೆ ಹೇಳಿದೆ.

ಸ್ತಬ್ಧಚಿತ್ರಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಆಯ್ಕೆ ಪ್ರಕ್ರಿಯೆಯು ಸುದೀರ್ಘವಾಗಿದ್ದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರಕ್ಷಣಾ ಸಚಿವಾಲಯವು ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಮುಂತಾದ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳ ಪರಿಣಿತ ಸಮಿತಿಯನ್ನು ರಚಿಸುತ್ತದೆ, ಅವರು ಪ್ರಸ್ತಾಪಗಳಿಂದ ಸ್ತಬ್ಧಚಿತ್ರನ್ನು ಶಾರ್ಟ್‌ಲಿಸ್ಟ್ ಮಾಡಲು ಸಹಾಯ ಮಾಡುತ್ತಾರೆ.

ಮೊದಲಿಗೆ ಸಲ್ಲಿಸಿದ ರೇಖಾಚಿತ್ರಗಳು ಅಥವಾ ಪ್ರಸ್ತಾವನೆಗಳ ವಿನ್ಯಾಸಗಳನ್ನು ಈ ಸಮಿತಿಯು ಪರಿಶೀಲಿಸುತ್ತದೆ, ಇದು ಸ್ಕೆಚ್ ಅಥವಾ ವಿನ್ಯಾಸದಲ್ಲಿ ಯಾವುದೇ ಮಾರ್ಪಾಡುಗಳಿಗೆ ಸಲಹೆಗಳನ್ನು ನೀಡಬಹುದು. ಸ್ಕೆಚ್ ಸರಳ, ವರ್ಣರಂಜಿತ, ಗ್ರಹಿಸಲು ಸುಲಭ ಮತ್ತು ಅನಗತ್ಯ ವಿವರಗಳನ್ನು ತಪ್ಪಿಸಬೇಕು. ಇದು ಸ್ವಯಂ ವಿವರಣಾತ್ಮಕವಾಗಿರಬೇಕು ಮತ್ತು ಯಾವುದೇ ಲಿಖಿತ ವಿವರಣೆಯ ಅಗತ್ಯವಿಲ್ಲ.

ಟ್ಯಾಬ್ಲೋದೊಂದಿಗೆ ಸಾಂಪ್ರದಾಯಿಕ ನೃತ್ಯವಿದ್ದರೆ, ಅದು ಜಾನಪದ ನೃತ್ಯವಾಗಿರಬೇಕು ಮತ್ತು ವೇಷಭೂಷಣಗಳು ಮತ್ತು ಸಂಗೀತ ವಾದ್ಯಗಳು ಸಾಂಪ್ರದಾಯಿಕ ಮತ್ತು ಅಧಿಕೃತವಾಗಿರಬೇಕು. ಪ್ರಸ್ತಾವನೆಯು ನೃತ್ಯದ ವೀಡಿಯೊ ಕ್ಲಿಪ್ಪಿಂಗ್ ಅನ್ನು ಒಳಗೊಂಡಿರಬೇಕು.

ಒಮ್ಮೆ ಅನುಮೋದನೆ ಪಡೆದ ನಂತರ ಮುಂದಿನ ಹಂತವು ಭಾಗವಹಿಸುವವರು ತಮ್ಮ ಪ್ರಸ್ತಾಪಗಳಿಗಾಗಿ ಮೂರು ಆಯಾಮದ ಮಾದರಿಗಳೊಂದಿಗೆ ಬರಲು ಹೇಳುತ್ತಿದ್ದು, ಅಂತಿಮ ಆಯ್ಕೆಗಾಗಿ ಪರಿಣಿತ ಸಮಿತಿಯು ಮತ್ತೊಮ್ಮೆ ಪರಿಶೀಲಿಸುತ್ತದೆ.  ಇದು ಹಲವಾರು ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಅಂತಿಮ ಆಯ್ಕೆಯನ್ನು ಮಾಡುವಾಗ ಸಮಿತಿಯು ಅಂಶಗಳ ಸಂಯೋಜನೆಯನ್ನು ನೋಡುತ್ತದೆ, ದೃಶ್ಯ ಆಕರ್ಷಣೆ, ಜನಸಾಮಾನ್ಯರ ಮೇಲೆ ಪ್ರಭಾವ, ಸ್ತಬ್ಧಚಿತ್ರದ ಕಲ್ಪನೆ / ಥೀಮ್, ಒಳಗೊಂಡಿರುವ ವಿವರಗಳು, ಸಂಗೀತ ಇವೆಲ್ಲವನ್ನೂ ಪರಿಶೀಲಿಸಲಾಗುತ್ತದೆ.

ಸಮಿತಿಯು ಹಲವಾರು ದಿನಗಳಲ್ಲಿ ಸುಮಾರು ಅರ್ಧ ಡಜನ್ ಸುತ್ತುಗಳವರೆಗೆ ಸಭೆ ಸೇರುತ್ತದೆ. ಸುತ್ತುಗಳು ಹೆಚ್ಚುತ್ತಾ ಹೋದಂತೆ ಪ್ರಸ್ತಾಪಗಳನ್ನು ತೆಗೆದುಹಾಕುತ್ತದೆ ಮತ್ತು ಶಾರ್ಟ್‌ಲಿಸ್ಟ್ ಮಾಡುತ್ತದೆ. ಶಾರ್ಟ್‌ಲಿಸ್ಟ್ ಆದವರಿಗೆ ಮಾತ್ರ ಮುಂದಿನ ಸುತ್ತಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಆಯ್ಕೆ ಸುತ್ತಿನ ಸಮಯದಲ್ಲಿ ಅಂತಿಮ ಅನುಮೋದಿತ ಆವೃತ್ತಿಯ ಪರಿಭಾಷೆಯಲ್ಲಿ ಇದನ್ನು ರಚಿಸದಿದ್ದರೆ ಅಂತಿಮ ಆಯ್ಕೆಯು ಅಂತಿಮ ಪರೇಡ್‌ನಲ್ಲಿ ರಾಜ್‌ಪಥ್‌ನಲ್ಲಿ ಚಲನೆಯನ್ನು ಖಾತರಿಪಡಿಸುವುದಿಲ್ಲ ಎಂದು ಆಹ್ವಾನ ಪತ್ರದಲ್ಲಿ ಒತ್ತಿ ಹೇಳಿದೆ. ರಕ್ಷಣಾ ಸಚಿವಾಲಯವು ಭಾಗವಹಿಸುವವರು ಎರಡು ಸ್ತಬ್ಧಚಿತ್ರಗಳ ರಚನೆಯಲ್ಲಿ ತೊಡಗಿರುವ ಯಾವುದೇ ಸಂಸ್ಥೆ ಅಥವಾ ತಯಾರಕರನ್ನು ತೊಡಗಿಸಿಕೊಳ್ಳದಂತೆ  ಶಿಫಾರಸು ಮಾಡುತ್ತದೆ.

ನಿರ್ದಿಷ್ಟ ಗಾತ್ರ ಎಷ್ಟು?

ರಕ್ಷಣಾ ಸಚಿವಾಲಯವು ಪ್ರತಿ ಭಾಗವಹಿಸುವವರಿಗೆ ಒಂದು ಟ್ರಾಕ್ಟರ್ ಮತ್ತು ಒಂದು ಟ್ರೈಲರ್ ಅನ್ನು ಒದಗಿಸುತ್ತದೆ. ಅದರ ಮೇಲೆ ಟ್ಯಾಬ್ಲೋ ಹೊಂದಿಕೆಯಾಗಬೇಕು. ಸಚಿವಾಲಯವು ಯಾವುದೇ ಹೆಚ್ಚುವರಿ ಟ್ರಾಕ್ಟರ್ ಅಥವಾ ಟ್ರೇಲರ್ ಅಥವಾ ಅದರ ಭಾಗವಾಗಲು ಯಾವುದೇ ಇತರ ವಾಹನವನ್ನು ಬಳಸುವುದನ್ನು ನಿಷೇಧಿಸುತ್ತದೆ. ಆದಾಗ್ಯೂ, ಭಾಗವಹಿಸುವವರು ತಮ್ಮ ಸಚಿವಾಲಯ ಒದಗಿಸಿದ ಟ್ರಾಕ್ಟರ್ ಅಥವಾ ಟ್ರೇಲರ್ ಅನ್ನು ಇತರ ವಾಹನಗಳೊಂದಿಗೆ ಬದಲಾಯಿಸಬಹುದು. ಆದರೆ ಒಟ್ಟು  ಎರಡು ವಾಹನಗಳಿಗಿಂತ ಹೆಚ್ಚಿರಬಾರದು.

ಟ್ಯಾಕ್ಟರ್ ಅನ್ನು ಟ್ಯಾಬ್ಲೋದ ಥೀಮ್‌ಗೆ ತಕ್ಕಂತೆ ಬದಲಾವಣೆ ಮಾಡಬೇಕು. ಟ್ರಾಕ್ಟರ್ ಮತ್ತು ಟ್ರೈಲರ್ ನಡುವೆ ತಿರುಗಲು ಮತ್ತು ಸುಮಾರು ಆರು ಅಡಿ ಅಂತರವನ್ನು ಸಚಿವಾಲಯವು ನಿಗದಿಪಡಿಸುತ್ತದೆ.  ಭಾಗವಹಿಸುವವರು ಥೀಮ್ ಅನ್ನು ಪರಿಗಣಿಸಿ ಕೆಲವು ಅಂಶಗಳನ್ನು ಸೇರಿಸಬಹುದು. 24 ಅಡಿಗಳ ಟ್ರೈಲರ್ ಮೇಲೆ ಸ್ತಬ್ಧಚಿತ್ರವನ್ನು ಇರಿಸಲಾಗುತ್ತದೆ. ಇದರ ಉದ್ದ 8 ಇಂಚು, ಎಂಟು ಅಡಿ ಅಗಲ. ನಾಲ್ಕು ಅಡಿ ಎರಡು ಇಂಚು ಎತ್ತರ; 10 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಸ್ತಬ್ಧಚಿತ್ರ ನೆಲದಿಂದ 45 ಅಡಿಗಿಂತ ಹೆಚ್ಚು ಉದ್ದ, 14 ಅಡಿ ಅಗಲ ಮತ್ತು 16 ಅಡಿ ಎತ್ತರ ಇರಬಾರದು.

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada