ದೇಶದ 44 ಕೋಟಿ ಮಕ್ಕಳಿಗೆ ಕೊವಿಡ್ 19 ಲಸಿಕೆ ನೀಡಲು ಸಿದ್ಧತೆ ನಡೆಯುತ್ತಿದೆ: ಡಾ. ಎನ್.ಕೆ.ಅರೋರಾ
ಕೊವಿಡ್ 19 ಲಸಿಕೆಯ ಬೂಸ್ಟರ್ ಡೋಸ್ಗೂ ಹೆಚ್ಚುವರಿ ಡೋಸ್ಗಳು ವ್ಯತ್ಯಾಸವಿದೆ. ಎರಡು ಡೋಸ್ ಲಸಿಕೆ ತೆಗೆದುಕೊಂಡವರಿಗೆ ನಿರ್ಧಿಷ್ಟ ಅವಧಿಯಲ್ಲಿ ಇನ್ನೊಂದು ಡೋಸ್ ನೋಡಿದರೆ ಅದು ಬೂಸ್ಟರ್ ಡೋಸ್ ಎನ್ನಿಸಿಕೊಳ್ಳುತ್ತದೆ ಎಂದು ಅರೋರಾ ತಿಳಿಸಿದ್ದಾರೆ.
ಕೊವಿಡ್ 19 ಲಸಿಕೆಯ ಬೂಸ್ಟರ್ ಡೋಸ್ ಮತ್ತು ಹೆಚ್ಚುವರಿ ಡೋಸ್ ಕೊಡಬೇಕಾಗುತ್ತದೆಯಾ ಎಂಬ ಬಗ್ಗೆ ಇನ್ನೂ ಎರಡು ವಾರಗಳು ಬಿಟ್ಟು ಭಾರತದ ಇಮ್ಯುನೈಸೇಶನ್ (ಎನ್‌ಟಿಎಜಿಐ) ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಸಾರ್ವಜನಿಕ ಮಾಹಿತಿ ಪ್ರಕಟಿಸಲಾಗುವುದು ಎಂದು ಭಾರತದ ಕೊವಿಡ್ 19 ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಹೇಳಿದ್ದಾರೆ. ಕೊವಿಡ್ 19 ರೂಪಾಂತರಿ ವೈರಾಣು ಒಮಿಕ್ರಾನ್ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅದರ ಬೆನ್ನಲ್ಲೇ ಡಾ. ಅರೋರಾ ಈ ಹೇಳಿಕೆ ನೀಡಿದ್ದಾರೆ.
ಕೊವಿಡ್ 19 ಲಸಿಕೆಯ ಬೂಸ್ಟರ್ ಡೋಸ್ಗೂ ಹೆಚ್ಚುವರಿ ಡೋಸ್ಗಳು ವ್ಯತ್ಯಾಸವಿದೆ. ಎರಡು ಡೋಸ್ ಲಸಿಕೆ ತೆಗೆದುಕೊಂಡವರಿಗೆ ನಿರ್ಧಿಷ್ಟ ಅವಧಿಯಲ್ಲಿ ಇನ್ನೊಂದು ಡೋಸ್ ನೋಡಿದರೆ ಅದು ಬೂಸ್ಟರ್ ಡೋಸ್ ಎನ್ನಿಸಿಕೊಳ್ಳುತ್ತದೆ. ಆದರೆ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯೇ ಇರುತ್ತದೆಯೋ ಅಂಥವರಿಗೆ ಅಗತ್ಯವಿದ್ದರೆ ನೀಡುವ ಡೋಸ್ನ್ನು ಹೆಚ್ಚುವರಿ ಡೋಸ್ ಎನ್ನಲಾಗುತ್ತದೆ ಎಂದು ಡಾ. ಅರೋರಾ ಮಾಹಿತಿ ನೀಡಿದ್ದಾರೆ.
ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಅರೋರಾ, ಮಕ್ಕಳು ನಮ್ಮ ದೇಶದ ಅತ್ಯಂತ ಮುಖ್ಯ ಆಸ್ತಿ. ದೇಶದಲ್ಲಿರುವ 18 ವರ್ಷ ಒಳಗಿನ ಸುಮಾರು 44 ಕೋಟಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಸಮಗ್ರ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ವಯಸ್ಕರಿಗೆ ಲಸಿಕೆ ನೀಡುವಾಗ ಅನುಸರಿಸಿದ ಹಂತಗಳಂತೆಯೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವಾಗಲೂ ಕೆಲವು ಹಂತ ಅನುಸರಿಸಲಾಗುವುದು. ಅದರಂತೆ 18 ವರ್ಷ ಒಳಗಿನ, ಬೇರೆ ಕೆಲವು ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ನಂತರ ಆರೋಗ್ಯವಂತ ಮಕ್ಕಳಿಗೂ ಲಸಿಕೆ ಹಾಕಲಾಗುತ್ತದೆ. ಈ ಬಗ್ಗೆ ಸಮಗ್ರ ಯೋಜನೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು. ZyCoV-D, Covaxin, Corbevax ಮತ್ತು mRNA ಕೊವಿಡ್ 19 ಲಸಿಕೆಗಳು ಮಕ್ಕಳಿಗೆ ಲಭ್ಯವಿದೆ. ಶೀಘ್ರದಲ್ಲೇ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ಅರೋರಾ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕಂತೂ ಕೊರೊನಾದ ಒಮಿಕ್ರಾನ್ ತಳಿ ಹೆಚ್ಚಿನ ಆತಂಕ ಸೃಷ್ಟಿಸಿದೆ. ಈ ವೈರಸ್ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ. ಇದನ್ನು ಕೊರೊನಾ ವೈರಸ್ನ B.1.1.529 ತಳಿ ಎಂದು ಗುರುತಿಸಲಾಗಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ ಎಂದು ನಾಮಕರಣ ಮಾಡಿದೆ. ಒಮಿಕ್ರಾನ್ ಆತಂಕದ ಬೆನ್ನಲ್ಲೇ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಸಿಎಂ ಆಗ್ತಾರೆ ಎಂದ ಈಶ್ವರಪ್ಪ ಅಭಿಮಾನಕ್ಕೆ ಋಣಿ: ಸಚಿವ ಮುರುಗೇಶ್ ನಿರಾಣಿ
Published On - 5:41 pm, Mon, 29 November 21