ಕ್ಷಮಿಸು ಡಿಂಪಿ, ಮಹಿಳಾ ಕಾಲೇಜಿನ ಗೋಡೆಯ ಮೇಲೆ ಪ್ರೇಮ ಪುರಾಣ, ಆದ್ರೆ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದೇಕೆ?

ಧನಬಾದ್‌ನ ಬಿಎಸ್‌ಎಸ್ ಮಹಿಳಾ ಕಾಲೇಜು ಗೋಡೆಗಳ ಮೇಲೆ 'ಕ್ಷಮಿಸು ಡಿಂಪಿ' ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡು ಭೀತಿ ಮೂಡಿಸಿವೆ. ಪ್ರೇಮಿಯು ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದರಿಂದ ಪರಿಸ್ಥಿತಿ ಗಂಭೀರವಾಯಿತು. ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಕ್ಷಮಿಸು ಡಿಂಪಿ, ಮಹಿಳಾ ಕಾಲೇಜಿನ ಗೋಡೆಯ ಮೇಲೆ ಪ್ರೇಮ ಪುರಾಣ, ಆದ್ರೆ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದೇಕೆ?
ಡಿಂಪಿ
Image Credit source: NDTV

Updated on: Apr 10, 2026 | 8:12 AM

ಧನಬಾದ್, ಏಪ್ರಿಲ್ 10: ಪ್ರೀತಿ(Love) ಎಂಬುದು ಒಂದು ಮಾಯೆ,   ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅಂತಾರೆ. ಆದರೆ ಧನ್‌ಬಾದ್‌ನ ಬಿಎಸ್‌ಎಸ್ (BSS) ಮಹಿಳಾ ಕಾಲೇಜಿನ ಮುಂದೆ ನಡೆದ ಘಟನೆ ಮಾತ್ರ ವಿದ್ಯಾರ್ಥಿನಿಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಒಬ್ಬ ಹತಾಶ ಪ್ರೇಮಿ ತನ್ನ ಪ್ರೇಯಸಿಯ ಕ್ಷಮೆ ಕೇಳಲು ಇಡೀ ಕಾಲೇಜಿನ ದ್ವಾರವನ್ನೇ ಪೋಸ್ಟರ್‌ಗಳಿಂದ ತುಂಬಿಸಿದ ಘಟನೆ ಗುರುವಾರ (ಏಪ್ರಿಲ್ 9) ನಡೆದಿದೆ.

ಕಾಲೇಜಿನ ಮುಖ್ಯ ದ್ವಾರದ ಗೋಡೆಗಳ ಮೇಲೆ ಬಿಳಿ ಬಣ್ಣದ ದೊಡ್ಡ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ನನ್ನನ್ನು ಕ್ಷಮಿಸಿ ಡಿಂಪಿ, ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ನೀನು ನನಗೆ ತುಂಬಾ ಮುಖ್ಯ ಎಂಬ ಪೋಸ್ಟರ್‌ಗಳು ದಾರಿಹೋಕರ ಗಮನ ಸೆಳೆದವು.

ಕಾಲೇಜಿನ ಭದ್ರತಾ ಸಿಬ್ಬಂದಿ ಮತ್ತು ಪ್ಯೂನ್ ಈ ಪೋಸ್ಟರ್‌ಗಳನ್ನು ತೆಗೆದುಹಾಕಲು ಮುಂದಾದಾಗ, ಅಲ್ಲಿಯೇ ಹೊಂಚು ಹಾಕುತ್ತಿದ್ದ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಪೋಸ್ಟರ್‌ಗಳನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗಾರ್ಡ್‌ಗಳಿಗೆ ಎಚ್ಚರಿಕೆ ನೀಡಿ ಗಲಾಟೆ ಮಾಡಿದ್ದಾನೆ. ಗದ್ದಲ ಕೇಳಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರುಣಾ ಸಿಂಗ್ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಆರೋಪಿ ಯುವಕ ಅಲ್ಲಿಂದ ಬೈಕ್ ಹತ್ತಿ ಪರಾರಿಯಾಗಿದ್ದಾನೆ.ನಂತರ ಸಿಬ್ಬಂದಿಗಳು ಎಲ್ಲಾ ಪೋಸ್ಟರ್‌ಗಳನ್ನು ಹರಿದು ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮತ್ತಷ್ಟು ಓದಿ: ಪ್ರೀತಿ ವಿಚಾರ ಹುಡುಗಿ ಮನೆಗೆ ಗೊತ್ತಾಯ್ತು, ಅವ್ರು ಒಪ್ಪದಿದ್ರೆ ಮಗ ಏನಾದ್ರೂ ಮಾಡಿಕೊಂಡಾನು ಎಂದು ತಂದೆ ಜತೆನೇ ಇದ್ರೂ ಉಳಿಸಲಾಗಲಿಲ್ಲ

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಾಂಶುಪಾಲರು, ಇದು ಕೇವಲ ಪ್ರೇಮದ ವಿಷಯವಲ್ಲ, ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಪೋಸ್ಟರ್ ಅಂಟಿಸಿದವನು ನಾಳೆ ಕಾಲೇಜಿನ ಒಳಗೆ ಬಂದು ಅಹಿತಕರ ಕೃತ್ಯ ಎಸಗಬಹುದು. ಇಂತಹ ವ್ಯಕ್ತಿಗಳಿಂದ ವಿದ್ಯಾರ್ಥಿನಿಯರಿಗೆ ಅಪಾಯವಿದೆ, ಎಂದು ಡಾ. ಕರುಣಾ ಸಿಂಗ್ ಹೇಳಿದ್ದಾರೆ.

ಘಟನೆಯ ಕುರಿತು ಧನ್‌ಬಾದ್ ಉಪ ಆಯುಕ್ತರು (DC) ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಕಾಲೇಜಿನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಡಿಂಪಿ ಯಾರು ಮತ್ತು ಆ ಹತಾಶ ಪ್ರೇಮಿ ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us