ಡಿಕೆ ಶಿವಕುಮಾರ್ ವಿರುದ್ಧ ಇಡಿ ವಿಚಾರಣೆ: ವಿದೇಶ ಪ್ರವಾಸಕ್ಕೆ ಅನುಮತಿ ಕೋರಿದ್ದ ಡಿಕೆಶಿ ಪರವಾಗಿ ದೆಹಲಿ ಹೈಕೋರ್ಟ್ನಲ್ಲಿ ಕಪಿಲ್ ಸಿಬಲ್ ವಾದ
2ನೇ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನದಿಂದ ರಕ್ಷಣೆ ಕೋರಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ನ್ಯಾಯಾಲಯವು ಡಿ 26ಕ್ಕೆ ಮುಂದೂಡಿತು.
ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ದೆಹಲಿ ಹೈಕೋರ್ಟ್ಗೆ ಹಾಜರಾದರು. ಡಿಕೆಶಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ‘ಮೊದಲ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಹೀಗಾಗಿ ಎರಡನೇ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐ ನಿರ್ವಹಿಸುತ್ತಿದೆ. ಈ ನಡುವೆ ಜಾರಿ ನಿರ್ದೇಶನಾಲಯವು (ಇಡಿ) 2ನೇ ಪ್ರಕರಣ ದಾಖಲಿಸಿ ವಿಚಾರಣೆಗೆ ಕರೆದಿದೆ. ಇಡಿ ದಾಖಲಿಸಿರುವ ಇಸಿಐಆರ್ ರದ್ದು ಮಾಡಬೇಕು’ ಎಂದು ಅವರು ವಾದಿಸಿದರು.
ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ಗೆ ಮಾಹಿತಿ ನೀಡಿದ ಇಡಿ ಅಧಿಕಾರಿಗಳು, ‘ಸದ್ಯಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ದೆಹಲಿ ಹೈಕೋರ್ಟ್ಗೆ ಇಡಿ ತನಿಖಾಧಿಕಾರಿಗಳು ಮಾಹಿತಿ ನೀಡಿದರು. ತಮ್ಮ ವಿರುದ್ಧ 2ನೇ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನದಿಂದ ರಕ್ಷಣೆ ಕೋರಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ನ್ಯಾಯಾಲಯವು ಡಿ 26ಕ್ಕೆ ಮುಂದೂಡಿತು.
ನ್ಯಾಯಾಲಯ ವಿಚಾರಣೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಡಿಕೆಶಿ, ‘ಇಡಿ ವಿಚಾರಣೆ ಕುರಿತು ನಾನು ಮಾತನಾಡುವುದಿಲ್ಲ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದಾಖಲೆಗಳನ್ನು ಕೊಡುತ್ತಿಲ್ಲ. ದುಬೈಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಸಲ್ಲಿಸುತ್ತಿದ್ದೇನೆ. ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕಿದೆ’ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ನಿಲ್ಲಬೇಕೆನ್ನುವ ಆಸೆ, ಆಸಕ್ತಿ ಇದ್ದವರೆಲ್ಲರೂ ಅರ್ಜಿ ಹಾಕಿಕೊಂಡಿದ್ದಾರೆ. ಅರ್ಜಿ ಹಾಕಿರುವ ಎಲ್ಲರಿಗೂ ಪಕ್ಷದ ಜವಾಬ್ದಾರಿ ಕೊಡುತ್ತೇವೆ. ಎಲ್ಲರೂ ಪಕ್ಷದ ಕೆಲಸ ಮಾಡಲಿ. ಅರ್ಜಿ ಹಾಕುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು. ಕೋರ್ಟ್ಗೆ ಅರ್ಜಿ ಹಾಕಿದ ಮೇಲೆ ನ್ಯಾಯಾಧೀಶರು ಹೇಳಿದರೂ ಪ್ರಸಾದವೇ. ಜಡ್ಜ್ ಹೇಳಿದ್ದನ್ನು ನಾವೆಲ್ಲರೂ ಕೇಳಬೇಕು ಎಂದರು.
ಡಿಕೆಶಿ ರಾಜೀನಾಮೆ ನೀಡಬೇಕೆನ್ನುವ ಈಶ್ವರಪ್ಪ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ಈಶ್ವರಪ್ಪ ಮೊದಲು ಅವರ ಸ್ಥಾನ ಉಳಿಸಿಕೊಳ್ಳಲಿ. ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ಸಿಗಲಿ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ನನ್ನೊಂದಿಗೆ ರಂದೀಪ್ ಸುರ್ಜೇವಾಲ, ಎಂ.ಬಿ.ಪಾಟೀಲ್ ಸಹ ಚುನಾವಣಾ ಆಯೋಗಕ್ಕೆ ಬರಲಿದ್ದಾರೆ. ಬಹಳಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಅಲ್ಪಸಂಖ್ಯಾತರ ಹೆಸರುಗಳನ್ನು ತೆಗೆದು ಹಾಕಿದ್ದಾರೆ. ಚಿಲುಮೆ ಸಂಸ್ಥೆಯೊಂದೇ ಅಲ್ಲ, ಹಲವು ದೊಡ್ಡದೊಡ್ಡ ಕುಳಗಳಿವೆ. ಸಿದ್ದರಾಮಯ್ಯ ಸರ್ಕಾರ ಅನುಮತಿ ನೀಡಿದ್ದರೆ, ಅದರ ಬಗ್ಗೆಯೂ ತನಿಖೆ ಆಗಲಿ ಎಂದು ಹೇಳಿದರು.
ಇದನ್ನೂ ಓದಿ: ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ, ಮಲ್ಲಿಕಾರ್ಜುನ ಖರ್ಗೆ ಘೋಷಿಸಬಹುದು: ಡಿಕೆ ಶಿವಕುಮಾರ್
Published On - 2:14 pm, Wed, 23 November 22