ಧಾರಾಪುರಂ: ಬಿಜೆಪಿ ಪಕ್ಷವು ತಮಿಳುನಾಡಿನಲ್ಲಿ ಅಭಿವೃದ್ಧಿ ಅಜೆಂಡಾವನ್ನಿಟ್ಟುಕೊಂಡು ಸ್ಪರ್ಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಧಾರಾಪುರಂ ಚುನಾವಣಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ವಿಪಕ್ಷದ ನಾಯಕರು ಕುಟುಂಬ ರಾಜಕಾರಣದ ಉದ್ದೇಶದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದಿದ್ದಾರೆ. ನ್ಯಾಷನಲ್ ಡೆಮಾಕ್ರಟಿಕ್ ಮೈತ್ರಿಕೂಟದ (NDA) ಕುಟುಂಬವು ಅಮ್ಮ ಜಯಲಲಿತಾ ಮತ್ತು ಎಂಜಿಆರ್ ಅವರ ಯೋಜನೆಗಳಿಂದ ಸ್ಫೂರ್ತಿ ಪಡೆದುಕೊಂಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿರುವ ದೃಢ ಉದ್ದೇಶವನ್ನಿಟ್ಟುಕೊಂಡು ಚುನಾವಣೆ ಸ್ಪರ್ಧಿಸುತ್ತಿದೆ. ಬಿಜೆಪಿಗೆ ನೀಡುವ ಮತವು ರಾಜ್ಯದಲ್ಲಿರುವ ಸಮಸ್ಯೆಗಳನ್ನು ದೂರಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
ನಾವು ತಮಿಳು ಸಂಸ್ಕೃತಿಯನ್ನು ಬೆಳೆಸಲು ಉತ್ತೇಜಿಸಲು ಬಯಸುತ್ತೇವೆ. ನಾವು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸಲು ಬಯಸುತ್ತೇವೆ. ಸಾಧ್ಯವಾದರೆ ಇದು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಲಿದ್ದಾರೆ ಎಂದಿದ್ದಾರೆ ಮೋದಿ.
ಮಹಿಳೆಯರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಡಿಎಂಕೆ ನಾಯಕ ಡಿಂಡಿಗಲ್ ಲಿಯೋನಿ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ಮಹಿಳೆಯರನ್ನು ಅಮಮಾನಿಸುವುದು ಕಾಂಗ್ರೆಸ್-ಡಿಎಂಕೆ ಸಂಸ್ಕೃತಿಯ ಭಾಗವಾಗಿದೆ. ಕೆಲವು ದಿನಗಳ ಹಿಂದೆ ಡಿಎಂಕೆ ಪಕ್ಷದ ಅಭ್ಯರ್ಥಿ ಡಿಂಡಿಗಲ್ ಲಿಯೋನಿ ಮಹಿಳೆಯರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದರು. ಅವರ ವಿರುದ್ಧ ಡಿಎಂಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಡಿಎಂಕೆ ಪಕ್ಷದ ಹಿರಿಯ ನಾಯಕ ಲಿಯೋನಿ, ಕೊಯಮತ್ತೂರ್ ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ವಿದೇಶಿ ಹಸುಗಳ ಹಾಲು ಕುಡಿದು ಮಹಿಳೆಯರು ತಮ್ಮ ದೇಹದ ರಚನೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ತಮಿಳುನಾಡಿನ ಜನರು ಮಹಿಳೆಯರನ್ನು ಅವಮಾನಿಸುವುದನ್ನು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ನಾನು ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಕ್ಕೆ ನೆನಪಿಸಲು ಬಯಸುತ್ತೇನೆ ಎಂದಿದ್ದಾರೆ ಮೋದಿ.
ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಕೂಡಾ ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಆದರೆ ಡಿಎಂಕೆ ಅವರ ಬಾಯ್ಮುಚ್ಚಿಸುವ ಪ್ರಯತ್ನ ಮಾಡಲಿಲ್ಲ. 1989 ಮಾರ್ಚ್ 25ರ ಘಟನೆ ನೆನಪಿದೆಯೇ? ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ನಾಯಕರು ಅಮ್ಮ ಜಯಲಲಿತಾ ಜೀ ಜತೆ ಯಾವ ರೀತಿ ವರ್ತಿಸಿದ್ದರು? ಡಿಎಂಕೆ ಮತ್ತು ಕಾಂಗ್ರೆಸ್ ನಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ ಎಂದು ಮೋದಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.
Speaking at a rally in Dharapuram, Tamil Nadu. https://t.co/hFpzBS0ElS
— Narendra Modi (@narendramodi) March 30, 2021
ಕಾಂಗ್ರೆಸ್ ಪಕ್ಷ ಮತ್ತು ಡಿಎಂಕೆ ಇಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ಅಮ್ಮನನ್ನು ಅವಮಾನಿಸಿದೆ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಇತರ ಮಹಿಳೆಯರನ್ನೂ ಅವರು ಅವಮಾನಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
Today Congress and DMK have insulted the respected mother of CM K Palaniswami. God forbid, if they come to power, they will insult many other women of the state: PM Modi at his poll campaign in Tamil Nadu
— Press Trust of India (@PTI_News) March 30, 2021
ತಮಿಳುನಾಡಿನ ತಿರುಪೂರ್ ಜಿಲ್ಲೆಯ ಧರ್ಮಾಪುರಂನಲ್ಲಿ ಮೋದಿ ಇಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ಕೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಸ್ಪರ್ಧಿಸುತ್ತಿದ್ದಾರೆ. 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್ಗೆ ಗಾಯ