ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ರಿ, ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ಕಟು ಟೀಕೆ

ತಮಿಳುನಾಡು ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಡಿಎಂಕೆ ಮೈತ್ರಿ ಕಡಿದು ಟಿವಿಕೆ ಸೇರಿದ್ದಕ್ಕೆ, ಡಿಎಂಕೆ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 'ರಾಹುಲ್ ಗಾಂಧಿ ಅಪ್ರಸ್ತುತ', 'ಮೈತ್ರಿ ದ್ರೋಹ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಭಾಷಣ ಮಾಡುತ್ತಾರೆ, ಆದರೆ ಅವರೇ ಒಗ್ಗಟ್ಟನ್ನು ಮುರಿಯುತ್ತಿದ್ದಾರೆ ಎಂದು 'ಮುರಸೋಲಿ' ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್ ಜನಾದೇಶದ ಪ್ರಕಾರ ನಿರ್ಧಾರ ಎಂದಿದೆ.

ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ರಿ, ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ಕಟು ಟೀಕೆ
ರಾಹುಲ್-ಸ್ಟಾಲಿನ್
Image Credit source: Indian Express

Updated on: Jun 16, 2026 | 10:52 AM

ಚೆನ್ನೈ, ಜೂನ್ 16: ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಗೆದ್ದ ನಂತರ ಕಾಂಗ್ರೆಸ್ ಪಕ್ಷವು ಡಿಎಂಕೆಯನ್ನು ಬಿಟ್ಟು ಟಿವಿಕೆ ಸರ್ಕಾರವನ್ನು ಸೇರಿರುವುದರಿಂದ ಡಿಎಂಕೆ ಪಕ್ಷವು ರಾಹುಲ್ ಗಾಂಧಿ(Rahul Gandhi) ಅವರ ರಾಜಕೀಯ ಅಪ್ರಬದ್ಧತೆಯನ್ನು ಕಟುವಾಗಿ ಟೀಕಿಸಿದೆ. ತಮಿಳುನಾಡಿನ ವಿಪಕ್ಷವಾಗಿರುವ ಡಿಎಂಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ಡಿಎಂಕೆಯ ಐಟಿ ವಿಭಾಗವು ರಾಹುಲ್ ಗಾಂಧಿಯವರನ್ನು ಬಿಗ್ ಜೋಕ್ ಎಂದು ಕರೆದಿದೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಕೂಟದ ಭಾಗವಾಗಿ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೆ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಹಳೆಯ ಮಿತ್ರನ ಕೈಬಿಟ್ಟು, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದೆ. ಕಾಂಗ್ರೆಸ್​ನ ಈ ರಾಜಕೀಯ ಬದಲಾವಣೆಯಿಂದಾಗಿ ಡಿಎಂಕೆ ತೀವ್ರ ಅಸಮಾಧಾನಗೊಂಡಿದೆ.

ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಬಹುಮಾನವನ್ನೇ ಕೊಟ್ಟಿದ್ದೀರಿ, ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಉಳುವಿಗಾಗಿ ಹೋರಾಡುತ್ತಿದ್ದಾಗ ನಾವು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಂಡೆವು, ಆದರೆ ಹೊಸ ಲಾಭ ಕಂಡ ತಕ್ಷಣ ನಮಗೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಜಿಗಿದಿದ್ದಾರೆ ಎಂದು ಟಿಎಂಕೆ ಕಿಡಿ ಕಾರಿದೆ.

ಮತ್ತಷ್ಟು ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ರಾಹುಲ್ ಗಾಂಧಿ ಅವರು ದೇಶಾದ್ಯಂತ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಭಾಷಣ ಮಾಡುತ್ತಾರೆ, ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಆ ಒಗ್ಗಟ್ಟನ್ನು ಅವರೇ ಮುರಿಯುತ್ತಿದ್ದಾರೆ ಎಂದು ‘ಮುರಸೋಲಿ’ ಪತ್ರಿಕೆಯ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಇದಕ್ಕೆ ಸಾಕ್ಷಿ ಎಂದಿದೆ.

ಈ ಎಲ್ಲಾ ಆರೋಪಗಳಿಗೆ ಕಾಂಗ್ರೆಸ್ ಇನ್ನು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಪಕ್ಷದ ಆಂತರಿಕ ಮೂಲಗಳ ಪ್ರಕಾರ, ತಮಿಳುನಾಡಿನ ಜನರ ತೀರ್ಪಿಗೆ ಅನುಗುಣವಾಗಿ ತಾವು ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ಡಿಎಂಕೆ ಅಥವಾ ಇಂಡಿಯಾ ಮೈತ್ರಿಕೂಟವನ್ನು ದುರ್ಬಲಗೊಳಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us