ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಪಕ್ಷ ಮತ್ತು ರಾಜ್ಯಪಾಲ ಆರ್.ಎನ್. ರವಿ (RN Ravi) ನಡುವಣ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಡಿಎಂಕೆ ಕಾರ್ಯಕರ್ತರೊಬ್ಬರು ರಾಜ್ಯಪಾಲರನ್ನು ಉದ್ದೇಶಿಸಿ ನಿಂದನೀಯವಾಗಿ ಮಾತನಾಡಿದ್ದು ಇದೀಗ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಭಾಷಣದಲ್ಲಿ ಅಂಬೇಡ್ಕರ್ ಹೆಸರು ಉಲ್ಲೇಖಿಸಲು ಆಗದಿದ್ದರೆ ನೀವು ಕಾಶ್ಮೀರಕ್ಕೆ ಹೋಗಿ. ಅಲ್ಲಿಗೆ ನಿಮ್ಮನ್ನು ಹತ್ಯೆ ಮಾಡಲು ತೀವ್ರವಾದಿಯನ್ನು ಕಳುಹಿಸುತ್ತೇವೆ ಎಂದು ಡಿಎಂಕೆ ಕಾರ್ಯಕರ್ತ ಶಿವಾಜಿ ಕೃಷ್ಣಮೂರ್ತಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಬಿಜೆಪಿ (BJP) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣವೇ ಕೃಷ್ಣಮೂರ್ತಿಯನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಿಂದ ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಮತ್ತಿತರರ ಹೆಸರುಗಳನ್ನು ರಾಜ್ಯಪಾಲರು ಕೈಬಿಟ್ಟಿದ್ದರು ಎನ್ನಲಾಗಿದೆ. ಇದನ್ನು ಡಿಎಂಕೆ ಮತ್ತು ಆಡಳಿತಾರೂಢ ಮಿತ್ರಪಕ್ಷಗಳು ಖಂಡಿಸಿವೆ. ರಾಜ್ಯಪಾಲರ ನಿವಾಸದ ಎದುರು ಪ್ರತಿಭಟನೆಯನ್ನೂ ನಡೆಸಿವೆ.
‘ಸಂವಿಧಾನಶಿಲ್ಪಿ ಅಂಬೇಡ್ಕರ್ ಹೆಸರನ್ನು ಭಾಷಣದಲ್ಲಿ ಉಲ್ಲೇಖಿಸಲು ತಮಿಳುನಾಡಿನಲ್ಲಿ ಈ ವ್ಯಕ್ತಿ (ರಾಜ್ಯಪಾಲರನ್ನು ಉದ್ದೇಶಿಸಿ) ನಿರಾಕರಿಸಿದರೆ ನಾನು ಚಪ್ಪಲಿಯಿಂದ ಹೊಡೆಯಬಹುದಲ್ಲವೇ? ಇವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರಲ್ಲವೇ? ಅಂಬೇಡ್ಕರ್ ಅವರು ಸಂವಿಧಾನ ರಚಿಸಿದವರಲ್ಲವೇ? ಅಂಥವರ ಹೆಸರನ್ನು ಹೇಳಲಾಗದಿದ್ದರೆ ನೀವು (ರಾಜ್ಯಪಾಲರು) ಕಾಶ್ಮೀರಕ್ಕೆ ಹೋಗಿ. ಅಲ್ಲಿ ನಿಮ್ಮನ್ನು ಗುಂಡಿಕ್ಕಿ ಹತ್ಯೆ ಮಾಡಲು ನಾವು ತೀವ್ರವಾದಿಯನ್ನು ಕಳುಹಿಸುತ್ತೇವೆ’ ಎಂದು ಶಿವಾಜಿ ಕೃಷ್ಣಮೂರ್ತಿ ಹೇಳಿದ್ದಾರೆ.
ರಾಜ್ಯಪಾಲರ ಬಗ್ಗೆ ಶಿವಾಜಿ ಕೃಷ್ಣಮೂರ್ತಿ ನೀಡಿರುವ ಹೇಳಿಕೆಯಿಂದ ಡಿಎಂಕೆ ಅಂತರ ಕಾಯ್ದುಕೊಂಡಿದೆ. ನಮ್ಮ ಪಕ್ಷವು ರಾಜ್ಯಪಾಲರನ್ನು ಗೌರವಿಸುತ್ತದೆ. ದ್ವೇಷದಿಂದ ಕೂಡಿದ ಹೇಳಿಕೆಯು ವೈಯಕ್ತಿಕವಾದದ್ದೇ ವಿನಃ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಡಿಎಂಕೆ ಹೇಳಿದೆ.
ಇದನ್ನೂ ಓದಿ: ಅಂಬಾನಿಯ ರಿಲಯನ್ಸ್ ಪರ ನಿರ್ಧಾರ ಕೈಗೊಂಡಿದ್ದು ಯುಪಿಎ; ಬಿಜೆಪಿ ನಾಯಕ ಅಮಿತ್ ಮಾಳವೀಯ ಕೊಟ್ಟ ದಾಖಲೆ ಯಾವುದು ನೋಡಿ
ಈ ಮಧ್ಯೆ, ಶಿವಾಜಿ ಕೃಷ್ಣಮೂರ್ತಿಯನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಡಿಎಂಕೆಗೆ ಭಯೋತ್ಪಾದಕರ ನಂಟಿದೆ ಎಂದೂ ಬಿಜೆಪಿ ಆರೋಪಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ನನಗೆ ಇದರಿಂದ (ಡಿಎಂಕೆ ಕಾರ್ಯಕರ್ತನ ಹೇಳಿಕೆ) ಅಚ್ಚರಿಯಾಗಿಲ್ಲ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹುಟ್ಟುಹಾಕಿರುವ ಹೊಸ ವಿಧಾನವಿದು. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ’ ಎಂದು ಬಿಜೆಪಿ ನಾಯಕರಿ ಖುಷ್ಬೂ ಸುಂದರ್ ಹೇಳಿದ್ದಾರೆ.
ಶಿವಾಜಿ ಕೃಷ್ಣಮೂರ್ತಿ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಖಂಡಿಸಿದ್ದಾರೆ. ಡಿಎಂಕೆ ಸದಾ ನಿಂದನಾತ್ಮಕ ರಾಜಕೀಯ ನಡೆಸುತ್ತಿದೆ ಎಂದು ಅವರು ದೂರಿದ್ದಾರೆ. ಶಿವಾಜಿ ಕೃಷ್ಣಮೂರ್ತಿಯನ್ನು ತಕ್ಷಣವೇ ಬಂಧಿಸಬೇಕು. ಅವರನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣನ್ ತ್ರಿಪಾಠಿ ಆಗ್ರಹಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ