ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ ಮಾಡಿದ ಇಡಿ
ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರೂ. ಮೌಲ್ಯದ 45 ಎಕರೆ ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಕೊಯಮತ್ತೂರು: ಡಿಎಂಕೆ ಸಂಸದ ಎ ರಾಜಾ (A Raja) ಅವರಿಗೆ ಸೇರಿದ 55 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯಲ್ಲಿರುವ 55 ಕೋಟಿ ರೂಪಾಯಿ ಮೌಲ್ಯದ 45 ಎಕರೆ ಭೂಮಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ತಿಳಿಸಿದೆ.
ಇದನ್ನೂ ಓದಿ: ನೀವು ಹಿಂದೂ ಆಗಿ ಇರುವವರೆಗೂ ನೀವು ಶೂದ್ರರಾಗಿಯೇ ಇರುತ್ತೀರಿ: ತಮಿಳುನಾಡು ಸಂಸದ ಎ ರಾಜಾ
2004ರಿಂದ 2007 ರ ವರೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪನಿಗೆ ಪರಿಸರ ಅನುಮತಿ ನೀಡಲು ರಾಜಾ ಅವರೊಂದಿಗೆ ಸಂಬಂಧ ಹೊಂದಿರುವ ಕಂಪನಿ ಈ ಭೂಮಿ ಖರೀದಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಈ ಭೂಮಿ ರಾಜಾ ಅವರ ಬೇನಾಮಿ ಕಂಪನಿ ಹೆಸರಿನಲ್ಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 59 ವರ್ಷದ ರಾಜಾ ಪ್ರಸ್ತುತ ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಸಂಸದರಾಗಿದ್ದಾರೆ.
ಚಾರ್ಜ್ಶೀಟ್ ಸಿಬಿಐ ಆರೋಪಿಸಿದ್ದೇನು?
ಯುಪಿಎ ಸರ್ಕಾರದಲ್ಲಿ ಕೇಂದ್ರ ಪರಿಸರ ಸಚಿವರಾಗಿದ್ದ ಅವಧಿಯಲ್ಲಿ ರಾಜಾ ಅವರು 5.55 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಈ ಹಿಂದೆ ಸಿಬಿಐ ಚಾರ್ಜ್ಶೀಟ್ನಲ್ಲಿ ಆರೋಪಿಸಿದೆ. ಅಲ್ಲದೇ ರಾಜಾ ಅವರ ನಿಕಟವರ್ತಿ ಸಿ ಕೃಷ್ಣಮೂರ್ತಿ ಅವರು ಜನವರಿ 2007 ರಲ್ಲಿ ಕೋವೈ ಶೆಲ್ಟರ್ಸ್ ಪ್ರಮೋಟರ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಆ ವರ್ಷ ಫೆಬ್ರವರಿಯಲ್ಲಿ ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪನಿಯಿಂದ ಕಾಂಚೀಪುರಂನಲ್ಲಿ ಕಮಿಷನ್ ಆಗಿ 55 ಕೋಟಿ ರೂ. ಭೂಮಿ ಖರೀದಿಸಿದ್ದರು ಎಂದು ಆರೋಪಿಸಲಾಗಿದೆ.
Published On - 9:55 pm, Thu, 22 December 22