ಮಹಿಳೆಗೆ ಹೆರಿಗೆ ನಂತರ ಊದಿಕೊಂಡು, ಕೆಂಪಾಯಿತು ಹೊಟ್ಟೆ; ಸಿಟಿ ಸ್ಕ್ಯಾನ್​ನಲ್ಲಿ ಗೊತ್ತಾಯ್ತು ವೈದ್ಯರು ಮಾಡಿದ ಎಡವಟ್ಟು, ಕೋರ್ಟ್ ಮೆಟ್ಟಿಲೇರಿದ ಪತಿ

| Updated By: Lakshmi Hegde

Updated on: Jan 20, 2022 | 10:16 AM

ನನಗೆ ಗೊತ್ತಿಲ್ಲದೆ ನಮ್ಮನೆಗೆ ಆಂಬುಲೆನ್ಸ್​ ಕಳಿಸಿ, ಪತ್ನಿಯನ್ನು ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ದಾಖಲು ಮಾಡಿಕೊಂಡು ನನ್ನ ಒಪ್ಪಿಗೆಯೇ ಇಲ್ಲದೆ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಂದು ಖಾಲಿ ಪೇಪರ್​ ಮೇಲೆ ಪತ್ನಿಯ ಸಹಿಕೂಡ ಹಾಕಿಸಿಕೊಂಡಿದ್ದಾರೆ ಎಂದು ಪತಿ ದೂರಿದ್ದಾರೆ.

ಮಹಿಳೆಗೆ ಹೆರಿಗೆ ನಂತರ ಊದಿಕೊಂಡು, ಕೆಂಪಾಯಿತು ಹೊಟ್ಟೆ; ಸಿಟಿ ಸ್ಕ್ಯಾನ್​ನಲ್ಲಿ ಗೊತ್ತಾಯ್ತು ವೈದ್ಯರು ಮಾಡಿದ ಎಡವಟ್ಟು, ಕೋರ್ಟ್ ಮೆಟ್ಟಿಲೇರಿದ ಪತಿ
ಪ್ರಾತಿನಿಧಿಕ ಚಿತ್ರ
Follow us on

ಗರ್ಭಿಣಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ಎಫ್​ಐಆರ್​ ದಾಖಲು ಮಾಡುವಂತೆ ಕೋರ್ಟ್​ ಆದೇಶ ಹೊರಡಿಸಿದ ಘಟನೆ ಹರ್ಯಾಣದ ಗುರ್​ಗಾಂವ್​​ನಲ್ಲಿ ನಡೆದಿದೆ. ಈ ವೈದ್ಯ ಮಹಿಳೆಗೆ ಆಪರೇಶನ್​ ಮಾಡಿ, ಮಗುವನ್ನು ಹೊರಗೇನೋ ತೆಗೆದರು. ಆದರೆ ಅಲ್ಲಿಯೇ ಹತ್ತಿಯನ್ನು ಬಿಟ್ಟಿದ್ದಾರೆ. ಅಂದರೆ ಮಗುವನ್ನು ಹೊರತೆಗೆದಬಳಿಕ ಅಲ್ಲೆಲ್ಲ ರಕ್ತವನ್ನು ಸ್ವಚ್ಛಗೊಳಿಸಲು ಬಳಸುವ ಹತ್ತಿಯನ್ನು ಆಕೆಯ ದೇಹದೊಳಗೇ  ಬಿಟ್ಟು ಹೊಲಿಗೆ ಹಾಕಿದ್ದರು. ಅಂದಹಾಗೇ, ಈ ಸಿಸೇರಿಯನ್​ ಮಾಡಿದ್ದು ಶಿವ ಆಸ್ಪತ್ರೆಯಲ್ಲಾಗಿತ್ತು. ಮಹಿಳೆಯ ಪತಿ ನೀಡಿದ್ದರು. ವಿಚಾರಣೆ ನಡೆಸಿದ ಗುರ್​ಗಾಂವ್​ ಮೆಟ್ರೋಪಾಲಿಟಿನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ನ್ಯಾಯಾಧೀಶರು ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಎಫ್​ಐಆರ್​ ದಾಖಲಿಸಲು ಸೂಚಿಸಿದ್ದಾರೆ. 

ಮಹಿಳೆಯ ಹೆಸರು ಸ್ವಸ್ತಿಕಾ. ಈಕೆಯ ಪತಿಯ ಹೆಸರು ದಿವಾಸ್ ರಾಯ್​.ಇವರು ಡಾರ್ಜಿಲಿಂಗ್​ ಮೂಲದವರಾಗಿದ್ದು, ಪತ್ನಿಯೊಂದಿಗೆ ಸಿಕಂದರ್​ಪುರದಲ್ಲಿ ವಾಸವಾಗಿದ್ದರು. ಪತಿ ದಿವಾಸ್ ರಾಯ್​ ಕೋರ್ಟ್​ಗೆ  ನೀಡಿದ ದೂರಿನಲ್ಲಿ, ಎಲ್ಲವನ್ನೂ ವಿವರಿಸಿದ್ದಾರೆ. ನನ್ನ ಪತ್ನಿ 2020ರ ಏಪ್ರಿಲ್​​ನಲ್ಲಿ ಗರ್ಭಿಣಿಯಾದಳು. ಆಗ ಕೊರೊನಾ ಇತ್ತು. ಲಾಕ್​ಡೌನ್ ಕೂಡ ಆಯಿತು. ಲಾಕ್​ಡೌನ್ ಕಾಲದಲ್ಲಿ ನನ್ನ ಉದ್ಯೋಗವೂ ಹೋಯಿತು. ಕೆಲಸ, ಹಣವಿಲ್ಲದ ಕಾರಣಕ್ಕೆ ನಾನು ಪತ್ನಿಯನ್ನು ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ನನ್ನ ಪರಿಸ್ಥಿತಿ ವಿವರಿಸಿದೆ. ಅಲ್ಲಿನ ಕಾರ್ಯಕರ್ತೆಯೊಬ್ಬರು, ಪತ್ನಿಯನ್ನು ಶಿವಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಅದರಂತೆ ನಾನೂ ಕರೆದುಕೊಂಡು ಹೋದೆ.  ನನ್ನ ಪತ್ನಿಗೆ 2020ರ ನವೆಂಬರ್ 16ರಂದು ಶಿವಾ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ, 30 ಸಾವಿರ ರೂಪಾಯಿ ಬಿಲ್​ ಮಾಡಿದರು. ಮುದ್ದಾದ ಹೆಣ್ಣು ಮಗುವೂ ಜನಿಸಿತು ಎಂದು ದಿವಾಸ್ ರಾಯ್ ಹೇಳಿದ್ದಾರೆ.

ಹೆರಿಗೆ ಆಯಿತು. ಮನೆಗೂ ಕರೆದುಕೊಂಡು ಬಂದೆ, ಆದರೆ ನನ್ನ ಪತ್ನಿಗೆ ಸಿಕ್ಕಾಪಟೆ ಹೊಟ್ಟೆ ನೋವು ಶುರುವಾಯಿತು. ಹೊಟ್ಟೆಯ ಮೇಲೆ ಕೆಂಪಾಗಿದ್ದಲ್ಲದೆ, ಊದಿಕೊಳ್ಳಲು ಶುರುವಾಯಿತು. ಆದರೆ ವೈದ್ಯರು ಒಂದಷ್ಟು ವಿಟಮಿನ್​ ಮಾತ್ರೆಗಳು, ಪೇನ್​ ಕಿಲ್ಲರ್ ಮಾತ್ರೆಗಳನ್ನು ಕೊಟ್ಟರು. ಈ ಔಷಧಿಗಳು ಏನೇನೂ ಪ್ರಯೋಜನ ಕೊಡಲಿಲ್ಲ. ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಲ್ಲಿನ ವೈದ್ಯರು ಪರಿಶೀಲಿಸಿ, ಹೊಟ್ಟೆಯೊಳಗೆ ಏನೋ ಇದೆ ಎಂದು ಹೇಳಿದರು. ಹಾಗೇ, ಟ್ರೀಟ್​ಮೆಂಟ್ ಶುರು ಮಾಡಿದರು. ಇವರ ಟ್ರೀಟ್​ಮೆಂಟ್​ನಲ್ಲಿ ಕೂಡ ನನ್ನ ಪತ್ನಿ ಗುಣಮುಖಳಾಗಲಿಲ್ಲ. ಬರೋಬ್ಬರಿ 16 ಕೆಜಿ ತೂಕ ಕಳೆದುಕೊಂಡಳು. ಇದೆಲ್ಲವೂ ಆಗಿದ್ದು ಹೆರಿಗೆಯ ನಂತರವೇ ಆಗಿದೆ. ನಂತರ ಮೂರನೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಸಿಟಿ ಸ್ಕ್ಯಾನ್​ ಮಾಡಿಸುವಂತೆ ಹೇಳಿದರು. ಈ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಹತ್ತಿ ಇರುವುದು ಗೊತ್ತಾಯಿತು ಎಂದು ದೂರುದಾರರು ಸವಿಸ್ತಾರವಾಗಿ ಮಾಹಿತಿ ನೀಡಿದ್ದಾರೆ.

ಇಷ್ಟಕ್ಕೆ ಮುಗಿಯಲಿಲ್ಲ, ನಾನು ಸಿಟಿ ಸ್ಕ್ಯಾನ್​ ರಿಪೋರ್ಟ್ ತೆಗೆದುಕೊಂಡು ಹೋಗಿ ಶಿವಾ ಆಸ್ಪತ್ರೆ ವೈದ್ಯರಿಗೆ ಕೊಟ್ಟೆ. ಆದರೆ ಅವರು ನಿರ್ಲಕ್ಷಿಸಿದರು. ಕೊನೆಗೆ ನನಗೆ ಗೊತ್ತಿಲ್ಲದೆ ನಮ್ಮನೆಗೆ ಆಂಬುಲೆನ್ಸ್​ ಕಳಿಸಿ, ಪತ್ನಿಯನ್ನು ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ದಾಖಲು ಮಾಡಿಕೊಂಡು ನನ್ನ ಒಪ್ಪಿಗೆಯೇ ಇಲ್ಲದೆ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಂದು ಖಾಲಿ ಪೇಪರ್​ ಮೇಲೆ ಪತ್ನಿಯ ಸಹಿಕೂಡ ಹಾಕಿಸಿಕೊಂಡಿದ್ದಾರೆ.  ನಂತರ ಹತ್ತಿಯ ಸ್ವಾಬ್​ ತೆಗೆದುಹಾಕಿದ್ದಾರೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ಕೊಡಲು ಹೋದರೆ, ಅವರು ಅದನ್ನು ತೆಗದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.  ಕೋರ್ಟ್ ಈ ದೂರನ್ನು ಪರಿಗಣಿಸಿ ವಿಚಾರಣೆ ನಡೆಸಿದೆ. ಹಾಗೇ, ಎಫ್​ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅದರ ಅನ್ವಯ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?

Published On - 9:02 am, Thu, 20 January 22