ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು
ಕೊವಿಡ್ 19 ಲಸಿಕೆಗಳ ಮಾರುಕಟ್ಟೆ ಬಳಕೆಗೆ ಅನುಮತಿ ನೀಡಬೇಕು ಎಂದು ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಎರಡೂ ಕಂಪನಿಗಳು ಎರಡನೇ ಬಾರಿ ಸಿಡಿಎಸ್ಸಿಒದ ವಿಷಯ ತಜ್ಞರ ಸಮಿತಿಗೆ ಅರ್ಜಿ ಸಲ್ಲಿಸಿದ್ದವು.
ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಅನುಮತಿ ಪಡೆದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಸಂಪೂರ್ಣವಾಗಿ ನಿಯಮಿತ ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡುವಂತೆ ಭಾರತದ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಲಸಿಕೆಗಳಿಗೆ ಮಾರುಕಟ್ಟೆ ದೃಢೀಕರಣ ಸಿಕ್ಕರೆ, ಅವು ಔಷಧ ಮಾರುಕಟ್ಟೆಯಲ್ಲಿ ಸಿಗಲಿವೆ. ಸೀರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳ ಸ್ಥಿತಿಯನ್ನು ಅಪ್ಗ್ರೇಡ್ ಮಾಡಬೇಕು ಅಂದರೆ, ಸದ್ಯ ಅವುಗಳನ್ನು ತುರ್ತುಸಂದರ್ಭದಲ್ಲಿ ವಯಸ್ಕರಿಗೆ ಷರತ್ತುಬದ್ಧವಾಗಿ, ನಿಯಂತ್ರಿತವಾಗಿ ನೀಡಲಾಗುತ್ತಿದೆ. ಈ ತುರ್ತು ಪರಿಸ್ಥಿತಿಯಲ್ಲಿ ನಿಯಂತ್ರಿತ ಬಳಕೆ ಎಂಬ ಲೇಬಲ್ ತೆಗೆದುಹಾಕಿ, ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡಬೇಕು ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ಕ್ಕೆ ವಿಷಯ ತಜ್ಞರ ಸಮಿತಿ ಸಲಹೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ), ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಸ್ಥಿತಿಯನ್ನು ನವೀಕರಿಸಿ, ಅವುಗಳಿಗೆ ಮಾರುಕಟ್ಟೆ ಬಳಕೆ ಅನುಮತಿ ನೀಡಬೇಕು ಎಂದು ಸಿಡಿಎಸ್ಸಿಒದ ವಿಷಯ ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಶಿಫಾರಸ್ಸನ್ನು ಡಿಸಿಜಿಐ ಮೌಲ್ಯಮಾಪನ ಮಾಡಲಿದ್ದು, ನಂತರ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದೆ. ತಮ್ಮ ಕೊವಿಡ್ 19 ಲಸಿಕೆಗಳ ಮಾರುಕಟ್ಟೆ ಬಳಕೆಗೆ ಅನುಮತಿ ನೀಡಬೇಕು ಎಂದು ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಎರಡೂ ಕಂಪನಿಗಳು ಎರಡನೇ ಬಾರಿ ಸಿಡಿಎಸ್ಸಿಒದ ವಿಷಯ ತಜ್ಞರ ಸಮಿತಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಬುಧವಾರ ಪರಿಶೀಲನೆ ಮಾಡಿದ ಸಮಿತಿ, ಡಿಸಿಜಿಐಗೆ ಶಿಫಾರಸ್ಸು ಸಲ್ಲಿಸಿದೆ. ಹಾಗೇ, ಪೂರ್ಣಪ್ರಮಾಣದ ಮಾರುಕಟ್ಟೆ ಬಳಕೆಗೂ ಕೆಲವು ಷರತ್ತುಗಳು ಅನ್ವಯ ಆಗಲಿವೆ ಎಂದು ಪಿಟಿಐ ವರದಿ ಮಾಡಿದೆ.
SEC of CDSCO has recommended for upgrade of covishield and covaxin status from restricted use in emergency situations to grant of new drug permission with conditions In adult population ,DCGI will evaluate the recommendations and give its decision.
— CDSCO_INDIA_INFO (@CDSCO_INDIA_INF) January 19, 2022
ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ಗಳು ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಹಿಡಿದ ಸ್ವದೇಶಿ ಲಸಿಕೆಗಳು. ಇವೆರಡಕ್ಕೂ 2021ರ ಜನವರಲ್ಲಿ ತುರ್ತು ಪರಿಸ್ಥಿತಿಯ ಬಳಕೆಗೆ ಅನುಮತಿ ಸಿಕ್ಕಿದೆ. ಅದರಂತೆ ಈಗಾಗಲೇ ದೇಶಾದ್ಯಂತ ಲಕ್ಷಾಂತರ ಜನರಿಗೆ ಈ ಎರಡು ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಎರಡೂ ಲಸಿಕೆಗಳೂ ಎರಡು ಡೋಸ್ನವಾಗಿದ್ದು, 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರಕ್ಷಿಸಬೇಕಾಗುತ್ತದೆ. ಇದೀಗ ಒಮ್ಮೆ ಮಾರುಕಟ್ಟೆ ಬಳಕೆಗೆ ಅನುಮೋದನೆ ಸಿಕ್ಕರೂ, ಕೂಡಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಲಸಿಕೆಗಳು ಸಿಗಲಾರವು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಹಣಕ್ಕೆ ಬ್ಲ್ಯಾಕ್ಮೇಲ್: ಆರೋಪಿ ಅರೆಸ್ಟ್