ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?

ಜನರಿಗೆ ತೊಂದರೆ ಆಗುತ್ತಿದೆ ಎಂದು ಆಡಳಿತ ಪಕ್ಷದ ನಾಯಕರು ನೇರವಾಗಿಯೇ ಹೇಳುತ್ತಿದ್ದು, ಸರ್ಕಾರಕ್ಕೆ ಪರಿಸ್ಥಿತಿ ನಿಭಾಯಿಸುವ ಗೊಂದಲವುಂಟಾಗಿದೆ. ಪಕ್ಷದ, ಸಾರ್ವಜನಿಕರ ಒತ್ತಡಕ್ಕೆ ಮಣಿದು ಕರ್ಫ್ಯೂ ತೆರವು ಮಾಡಬೇಕಾ ಎಂಬ ಗೊಂದಲ ಮತ್ತೊಂದೆಡೆ ತಾಂತ್ರಿಕ ಸಲಹಾ ಸಮಿತಿ ವರದಿಗೆ ಪೂರ್ತಿ ಮಣೆ ಹಾಕಬೇಕಾ ಎಂಬ ಜಿಜ್ಞಾಸೆ ಕಾಡುತ್ತಿದೆ.

ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?
ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಮತ್ತಷ್ಟು ಬಿಗಿಯಾಗುವುದೋ?: ಗೊಂದಲಾಪುರದಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 20, 2022 | 11:44 AM

ಬೆಂಗಳೂರು: ಕೊರೊನಾ ಮಹಾಮಾರಿ ಸಮ್ಮುಖದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಅಯೋಮಯ ಸ್ಥಿತಿಯಲ್ಲಿದೆ. ಮಾರಿ ಸೋಂಕನ್ನು ಕಟ್ಟಿಹಾಕಬೇಕಾ? ಪ್ರಜೆಗಳನ್ನು ಸಂಕಷ್ಟದಲ್ಲೇ ಇಡಬೇಕಾ ಎಂಬ ಸಂದಿಗ್ಧ ಸ್ಥಿತಿ ಸರ್ಕಾರದ್ದಾಗಿದೆ. ವೀಕೆಂಡ್ ಕರ್ಫ್ಯೂ, ಲಾಕ್​ಡೌನ್​ ಸಹವಾಸವೇ ಬೇಡ, ವ್ಯಾಪಾರಿ ಜನ ಉಪವಾಸ ಬೀಳುವುದು ಬೇಡವೆಂದು ಮಾರ್ಗಸೂಚಿಗಳನ್ನು ಸಡಿಲ ಮಾಡಬೇಕು ಎಂಬ ಕೂಗು ಜೋರಾಗ ಕೇಳಿಬಂದಿದೆ. ಈ ಮಧ್ಯೆ, ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಇಂದು 30,059 ಕ್ಕೆ ಏರುವ ಸಾಧ್ಯತೆಯಿದೆ. ನಿನ್ನೆ 24,135 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ವೀಕೆಂಡ್ ಕರ್ಫ್ಯೂ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ಬಹುನಿರೀಕ್ಷಿತ ಸಭೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ವಿವಿಧ ವಲಯಗಳ ಉದ್ಯಮಿಗಳಿಂದ ಕೊನೇ ಕ್ಷಣದ ಕಸರತ್ತು ನಡೆದಿದ್ದು, ಬಿಲ್ಕುಲ್ ​ವೀಕೆಂಡ್ ಕರ್ಫ್ಯೂ, ಲಾಕ್​ಡೌನ್​ ಸಹವಾಸ ಬೇಡ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ವೀಕೆಂಡ್ ಕರ್ಫ್ಯೂಗೆ ಆರಂಭದಿಂದಲೇ ಖುದ್ದು ಆಡಳಿತಾರೂಢ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಜನರಿಗೆ ತೊಂದರೆ ಆಗುತ್ತಿದೆ ಎಂದು ಆಡಳಿತ ಪಕ್ಷದ ನಾಯಕರು ನೇರವಾಗಿಯೇ ಹೇಳುತ್ತಿದ್ದು, ಸರ್ಕಾರಕ್ಕೆ ಪರಿಸ್ಥಿತಿ ನಿಭಾಯಿಸುವ ಗೊಂದಲವುಂಟಾಗಿದೆ. ಪಕ್ಷದ, ಸಾರ್ವಜನಿಕರ ಒತ್ತಡಕ್ಕೆ ಮಣಿದು ಕರ್ಫ್ಯೂ ತೆರವು ಮಾಡಬೇಕಾ ಎಂಬ ಗೊಂದಲ ಮತ್ತೊಂದೆಡೆ ತಾಂತ್ರಿಕ ಸಲಹಾ ಸಮಿತಿ ವರದಿಗೆ ಪೂರ್ತಿ ಮಣೆ ಹಾಕಬೇಕಾ ಎಂಬ ಜಿಜ್ಞಾಸೆ ಕಾಡುತ್ತಿದೆ. ಕರ್ಫ್ಯೂ ತೆರವು ಮಾಡಿ ಪಾಸಿಟಿವಿಟಿ ರೇಟ್ ಜಾಸ್ತಿಯಾದರೆ ಏನು ಮಾಡುವುದು ಎಂಬ ಆತಂಕ ಮನೆ ಮಾಡಿದೆ. ಸೋಂಕು ಜಾಸ್ತಿಯಾದರೆ ಸಮರ್ಥಿಸಿಕೊಳ್ಳುವುದು ಹೇಗೆ ಎಂಬ ಗೊಂದಲಾಪುರದಲ್ಲಿ ಸಿಲುಕಿದೆ ರಾಜ್ಯ ಸರ್ಕಾರ.

ಕೊರೊನಾ ತೀವ್ರತೆ ಅಷ್ಟಾಗಿ ಇಲ್ಲ, ಶುಕ್ರವಾರದ ಸಭೆಯ ಮೇಲೆ ಆಶಾಭಾವ ಇದೆ- ಸಚಿವ ಅಶ್ವತ್ಥ್ ನಾರಾಯಣ ರಾಜ್ಯದಲ್ಲಿ ಕೊರೊನಾ ತೀವ್ರತೆ ಅಷ್ಟಾಗಿ ಇಲ್ಲದ ಹಿನ್ನೆಲೆ ನಾಳಿನ ಸಭೆಯ ಮೇಲೆ ಒಂದಷ್ಟು ಆಶಾಭಾವನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಬೆಂಗಳೂರಿನಲ್ಲಿ ಹೇಳಿದ್ದಾರೆ. ನಾಳಿನ ಸಭೆಯಲ್ಲಿ ಕೋವಿಡ್​ ಮಾರ್ಗಸೂಚಿ ಕುರಿತಾದ ಒತ್ತಾಯ, ಸಮಸ್ಯೆ, ಅನಾನುಕೂಲತೆ, ಸೋಂಕು ಹೆಚ್ಚಳದ ಬಗ್ಗೆ ಸವಿಸ್ತಾರ ಚರ್ಚೆ ಮಾಡಿ ಸೂಕ್ತ ನಿರ್ಧಾರ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂಬೈ ಮಾದರಿ ಬಗ್ಗೆ ತುಂಬಾ ಜನ ಸಲಹೆ ಕೊಟ್ಟಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಒತ್ತಡವೇನೂ ಇಲ್ಲ. ರಾಜ್ಯ ಸರ್ಕಾರದ ಮೇಲೆ ಯಾವುದೇ ರೀತಿಯ ಒತ್ತಡಗಳು ಇಲ್ಲ. ನಮಗೆ ನೀಡುವ ಸಲಹೆಗಳನ್ನು ಒತ್ತಡವೆಂದು ಹೇಳಲಾಗಲ್ಲ. ಸಲಹೆಗಳನ್ನು ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದ ಪ್ರತಾಪಸಿಂಹ, ಈಶ್ವರಪ್ಪ ಆದಿಯಾಗಿ ಆಡಳಿತ ಪಕ್ಷದಿಂದಲೇ ಹಲವರ ವಿರೋಧ ವ್ಯಕ್ತವಾದರೆ ನಿಭಾಯಿಸುವುದು ಕಷ್ಟ. ಹೀಗಾಗಿ ಈ ವಿಚಾರದ ಬಗ್ಗೆ ನಿ‌ನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೊತೆ ಸಿಎಂ ಚರ್ಚಿಸಿದ್ದಾರೆ.

ಇನ್ನು ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಮಧ್ಯೆ ಇಲ್ಲಿ ಕರ್ಫ್ಯೂ ವಿಧಿಸಿದರೆ ವಿಪಕ್ಷಗಳು ಅಲ್ಲಿ ಚುನಾವಣಾ ಅಸ್ತ್ರ ಮಾಡಿಕೊಳ್ಳುವ ಆತಂಕವೂ ಮನೆ ಮಾಡಿದೆ. ಹಾಗಾಗಿಯೇ ರಾಜ್ಯದಲ್ಲಿ ಕರ್ಫ್ಯೂ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪಕ್ಷದ ರಾಷ್ಟ್ರೀಯ ನಾಯಕರು! ಪಕ್ಷದಿಂದ ವಿರೋಧ ವ್ಯಕ್ತವಾದರೂ ಸರ್ಕಾರವಾಗಿ ಜವಾಬ್ದಾರಿ ಮೆರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಸಂದಿಗ್ಧತೆಯಲ್ಲಿ ಸಿಎಂ ಬೊಮ್ಮಾಯಿ‌ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಜನ ಎದುರು ನೋಡುತ್ತಿದ್ದಾರೆ.

ಈ ಮಧ್ಯೆ ಕರ್ನಾಟಕದಲ್ಲಿ ಕೆಲ ದೊಡ್ಡ ದೊಡ್ಡ ಬ್ಯುಸಿನೆಸ್​​ಗಳ ಸ್ಥಿತಿಗತಿ ನೋಡುವುದಾದರೆ

ಕ್ಲೋಸ್ ಆದ ಕಲ್ಯಾಣ ಮಂಟಪಗಳು ಎಷ್ಟು..? – ಕರ್ನಾಟಕದಲ್ಲಿ 2500ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ – ಬೆಂಗಳೂರಿನಲ್ಲಿ 600ಕ್ಕೂ ಅಧಿಕ ಮ್ಯಾರೇಜ್ ಹಾಲ್ ಗಳಿವೆ – ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಬರೋಬ್ಬರಿ 80 ಕಲ್ಯಾಣ ಮಂಟಪಗಳು ಕ್ಲೋಸ್ – ಈ ಪೈಕಿ ಬೆಂಗಳೂರಿನಲ್ಲಿ 20 ದೊಡ್ಡ ದೊಡ್ಡ ಮ್ಯಾರೇಜ್ ಹಾಲ್ ಗಳೇ ಬಂದ್ – ಕೆಲವು ಕಲ್ಯಾಣ ಮಂಟಪಗಳು ಶಾಶ್ವತವಾಗಿ ಕ್ಲೋಸ್ ಆಗಿವೆ – ಮತ್ತೆ ಕೆಲವು ಗೋಡೌನ್ ಗಳಾಗಿ ಮಾರ್ಪಾಡಾಗಿವೆ – ವಾರಾಂತ್ಯ ಕರ್ಫ್ಯೂ ಮುಂದುವರಿದ್ರೆ ಶೇ.30 ರಷ್ಟು ಕ್ಲೋಸ್ ಭೀತಿ – ಮದುವೆಗಳು ನಡೆಯುತ್ತಿಲ್ಲ, ಟ್ಯಾಕ್ಸ್ ಕಟ್ಟೋಕಾಗದೆ ಬಂದ್ ಆಗಿವೆ ಹೀಗಾಗಿ ವೀಕೆಂಡ್ ಕರ್ಫ್ಯೂ ವಿನಾಯ್ತಿಗಾಗಿ ಮ್ಯಾರೇಜ್ ಹಾಲ್ಸ್ ಅಸೋಸಿಯೇಷನ್ ಮನವಿ

ಎಷ್ಟು ಸ್ವಿಮ್ಮಿಂಗ್ ಪೂಲ್ ಗಳು ಕ್ಲೋಸ್ ಆಗಿವೆ..? – ರಾಜ್ಯದ್ಯಂತ 800ಕ್ಕೂ ಹೆಚ್ಚು, ಬೆಂಗಳೂರಿನಲ್ಲಿ 130 ಸಾರ್ವಜನಿಕ ಪೂಲ್ ಗಳಿವೆ – ಹೋಟೆಲ್ & ರೆಸ್ಟೊರೆಂಟ್ ಗಳು ಸೇರಿದ್ರೆ 2 ಸಾವಿರಕ್ಕೂ ಅಧಿಕ ಪೂಲ್ ಗಳು ರಾಜ್ಯದಲ್ಲಿವೆ – ರಾಜ್ಯದಲ್ಲಿ 70ಕ್ಕೂ ಹೆಚ್ಚು, ಬೆಂಗಳೂರಿನಲ್ಲಿ 40 (ಸಾರ್ವಜನಿಕ ಪೂಲ್) ಗಳು ಕ್ಲೋಸ್ – ರಾಜ್ಯದಲ್ಲಿ ಶೇ.30 ರಷ್ಟು ಸ್ವಿಮ್ಮಿಂಗ್ ಪೂಲ್ ಗಳು ಫಿಶಿಂಗ್ ಸಾಕಣೆಯಾಗಿ ಮಾರ್ಪಾಡು – ಬೆಂಗಳೂರಿನಲ್ಲಿ ಶೇ.20 ರಷ್ಟು ಪೂಲ್ ಗಳನ್ನ ನೀರು ಖಾಲಿ ಮಾಡಿ ಬೀಗ – ವೀಕೆಂಡ್ ಕರ್ಫ್ಯೂ ತೆರವು ಮಾಡಿ ವಾರವಿಡೀ 50:50 ರೂಲ್ಸ್ ಗೆ ಮನವಿ

ಶಾಶ್ವತವಾಗಿ ಬಾಗಿಲು ಮುಚ್ಚಿದ ಜಿಮ್ ಸೆಂಟರ್ಸ್ – ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಜಿಮ್ ಸೆಂಟರ್ ಗಳಿವೆ – ಬೆಂಗಳೂರು ನಗರದಲ್ಲೇ 4 ಸಾವಿರ ಜಿಮ್‌ ಕೇಂದ್ರಗಳಿವೆ – ರಾಜ್ಯದಲ್ಲಿ 6 ಸಾವಿರ ಮತ್ತು ಬೆಂಗಳೂರಿನಲ್ಲಿ 1,500ಕ್ಕೂ ಅಧಿಕ ಜಿಮ್ ಸೆಂಟರ್ ಗಳು ಕ್ಲೋಸ್ – ರಾಜ್ಯದಲ್ಲಿ ಶೇ.40ರಷ್ಟು ಜಿಮ್ ಗಳು ಶಾಶ್ವತವಾಗಿ ಬಂದ್ – ಜಿಮ್ ಮಾರಾಟಕ್ಕೆ ಇಟ್ಟರೂ ಖದೀರಿ ಯಾರೂ ಮುಂದಾಗ್ತಿಲ್ಲ – ಜಿಮ್ ನಲ್ಲಿರುವ ಸಾಮಾಗ್ರಿಗಳನ್ನು ಗುಜರಿ ಪಾಲು – ಕೊರೊನಾ ಎರಡೂ ಅಲೆಯಿಂದಾಗಿ ಸಾಲು ಸಾಲು ಎಫೆಕ್ಟ್

Published On - 10:00 am, Thu, 20 January 22