ಕೇಂದ್ರ ಸರ್ಕಾರ ನೀಡಿರುವ ಲಸಿಕೆಯನ್ನು 45 ವರ್ಷ ಕಡಿಮೆ ವಯಸ್ಸಿನವರಿಗೆ ಕೊಡುವಂತಿಲ್ಲ: ರಾಜ್ಯಗಳಿಗೆ ಪತ್ರ
ರಾಜ್ಯ ಸರ್ಕಾರಗಳೇ ನೇರವಾಗಿ ಲಸಿಕೆ ಖರೀದಿಸಿ, 18-45 ವಯೋಮಾನದವರಿಗೆ ನೀಡಲು ಬಳಸಿ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದು ತಿಳಿಸಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರ ನೀಡಿರುವ ಲಸಿಕೆಯನ್ನು 18-45 ವಯೋಮಾನದವರಿಗೆ ಬಳಸಬೇಡಿ ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದಿದೆ. ರಾಜ್ಯ ಸರ್ಕಾರಗಳೇ ನೇರವಾಗಿ ಲಸಿಕೆ ಖರೀದಿಸಿ, 18-45 ವಯೋಮಾನದವರಿಗೆ ನೀಡಲು ಬಳಸಿ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಕೇಂದ್ರದ ಆರೋಗ್ಯ ಇಲಾಖೆಯಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬಂದಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಮನೋಹರ್ ಅಗಾನಿ ಈ ಸಂಬಂಧ ಪತ್ರ ಬಂದಿದೆ. ಈಗಾಗಲೇ ರಾಜ್ಯ ಸರ್ಕಾರದ ಬಳಿ ದಾಸ್ತಾನು ಇರುವ ಲಸಿಕೆಗಳನ್ನು ಬಳಸಬಾರದು. ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ, ಮುಂದೆ ನೀಡುವ ಲಸಿಕೆಯನ್ನ ಆದ್ಯತಾ ವರ್ಗಕ್ಕೆ ಮಾತ್ರ ಬಳಸಬೇಕು. 45 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ನೀಡಿದ ಲಸಿಕೆ ಬಳಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ರಾಜ್ಯ ಸರ್ಕಾರಗಳಿಗೆ ಮೇ 1ರಿಂದಲೇ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮತ್ತು ಭಾರತ್ ಬಯೋಟೆಕ್ನಿಂದ ಲಸಿಕೆ ಸಿಗುವುದು ಕಷ್ಟ. ಮೇ 15ರ ನಂತರ ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಸುವುದಾಗಿ ಎಸ್ಐಐ ಹೇಳಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಮೇ 15ರವರೆಗೆ ಕಾಯಬೇಕಿದೆ.
ಕೇಂದ್ರದ ಲಸಿಕೆಯನ್ನ ರಾಜ್ಯ ಸರ್ಕಾರಗಳು 18-45 ವರ್ಷ ವಯೋಮಾನದವರಿಗೆ ಬಳಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ನಿಯಮದಲ್ಲಿ ಬದಲಾವಣೆ ಇಲ್ಲ. ಕೇಂದ್ರದ ನಿರ್ದೇಶನ ಉಲ್ಲಂಘಿಸಿ ಕರ್ನಾಟಕ ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ನೀಡಿದ ಲಸಿಕೆ ಬಳಸುವಂತಿಲ್ಲ.
ನಿನ್ನೆ (ಏಪ್ರಿಲ್ 30) ಗುಜರಾತ್ ರಾಜ್ಯ ಸರ್ಕಾರ ಲಸಿಕಾ ಕಂಪನಿಯಿಂದ ನೇರವಾಗಿ 3 ಲಕ್ಷ ಡೋಸ್ ಲಸಿಕೆ ಖರೀದಿಸಿದೆ. ಗುಜರಾತ್ನ ಹತ್ತು ನಗರಗಳಲ್ಲಿ ಮಾತ್ರ ಇಂದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಎಸ್ಐಐ 3 ಲಕ್ಷ ಡೋಸ್ ಲಸಿಕೆ ಪೂರೈಸಿದೆ. ಉತ್ತರಪ್ರದೇಶದ ಏಳು ಜಿಲ್ಲೆಯಲ್ಲಿ ಮಾತ್ರ ಇಂದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ.
ಛತ್ತೀಸಗಡ, ರಾಜಸ್ಥಾನ, ಒಡಿಶಾ ರಾಜ್ಯ ಸರ್ಕಾರಗಳು ಸಹ ನೇರವಾಗಿ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಸಿವೆ. ಕಳೆದ ತಿಂಗಳೇ ಮುಂಚಿತವಾಗಿಯೇ ಈ ರಾಜ್ಯಗಳು ಲಸಿಕೆಗಳಿಗೆ ಆರ್ಡರ್ ನೀಡಿದ್ದವು. ಹೀಗಾಗಿ ಇಂದು ದೇಶದ ಆರೇಳು ರಾಜ್ಯದಲ್ಲಿ ಮಾತ್ರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿದೆ.
(Dont give Vaccines Given From Central Govt to 18-45 age group)
ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಲಸಿಕೆ ಇಲ್ಲದೆಯೇ ಅಭಿಯಾನ ಆರಂಭಿದ್ದಾರೆ! ಇದು ಕೇವಲ ಫೋಟೋಗಾಗಿ: ಸಿದ್ದರಾಮಯ್ಯ ಟೀಕೆ
Published On - 3:46 pm, Sat, 1 May 21