Draupadi Murmu: ಇಂದು ಜುಲೈ 25, ಪ್ರತಿಬಾರಿ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ನಡೆಯುವುದು ಇದೇ ದಿನಾಂಕದಲ್ಲಿ, ಏಕೆ ಹೀಗೆ?
President of India: 1977ರಿಂದ ಈವರೆಗೆ ಇದೇ ದಿನಾಂಕದಂದು ರಾಷ್ಟ್ರಪತಿ ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ದಿನಾಂಕಕ್ಕೆ ವಿಶೇಷ ಮಹತ್ವ ಇದೆ.
ದೆಹಲಿ: ದ್ರೌಪದಿ ಮುರ್ಮು (Draupadi Murmu) ಅವರು ಇಂದು (ಜುಲೈ 25) ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಷ್ಟ್ರಪತಿ (President of India) ಹುದ್ದೆಗೇರಿದ ದೇಶದ ಮೊದಲ ಆದಿವಾಸಿ ಮಹಿಳೆ ಎನ್ನುವ ಶ್ರೇಯಕ್ಕೂ ಅವರು ಪಾತ್ರರಾಗಲಿದ್ದಾರೆ. ಈ ಬಾರಿಯೂ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜುಲೈ 25ರಂದೇ ನಡೆಯುತ್ತಿರುವುದು ವಿಶೇಷ. ಈ ದಿನಾಂಕಕ್ಕೂ ಭಾರತದ ಪ್ರಜಾತಾಂತ್ರಿಕ ಇತಿಹಾಸಕ್ಕೂ ಗಾಢ ನಂಟಿದೆ. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ದ್ರೌಪದಿ ಮುರ್ಮು ಅವರು ಸಹ ಜುಲೈ 25ರಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 1977ರಿಂದ ಈವರೆಗೆ ಇದೇ ದಿನಾಂಕದಂದು ರಾಷ್ಟ್ರಪತಿ ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಭಾರತದ ಮೊದಲ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ ದ್ರೌಪದಿ ಮುರ್ಮು.
ಜುಲೈ 25ರಂದೇ ಪ್ರತಿಜ್ಞಾವಿಧಿ ಏಕೆ?
ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯು ಪ್ರತಿಬಾರಿಯಂತೆ ಈ ಬಾರಿಯೂ ಜುಲೈ 25ರಂದೇ ನಡೆಯುತ್ತಿದೆ. ನಿರ್ದಿಷ್ಟವಾಗಿ ಇದೇ ದಿನಾಂಕದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಬೇಕು ಎನ್ನುವ ಲಿಖಿತ ನಿಯಮ ಭಾರತದಲ್ಲಿ ಇಲ್ಲ. ಆದರೆ 1977ರಿಂದ ಇದೇ ದಿನಾಂಕದಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆದಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದುಬರುತ್ತದೆ.
ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಅವರ ನಂತರ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಸರ್ವಪಲ್ಲಿ ರಾಧಾಕೃಷ್ಣನ್, ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಬೇರೆ ದಿನಾಂಕಗಳಂದು ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ 26, 1950ರಂದು ಅಧಿಕಾರ ಸ್ವೀಕರಿಸಿದ್ದರು. 2ನೇ ಅವಧಿಗೂ ಅವರೇ ಅಧಿಕಾರದಲ್ಲಿ ಮುಂದುವರಿದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇ 13, 1962ರಂದು ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ಮೇ 13, 1967ರವರೆಗೂ ಅವರು ಅಧಿಕಾರದಲ್ಲಿದ್ದರು. ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಹೀಗಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅವಧಿಪೂರ್ವ ಚುನಾವಣೆಗಳು ನಡೆಯಬೇಕಾಯಿತು.
ಭಾರತದ 6ನೇ ರಾಷ್ಟ್ರಪತಿಯಾಗಿ ಜುಲೈ 25, 1977ರಂದು ನೀಲಂ ಸಂಜೀವ ರೆಡ್ಡಿ ಅಧಿಕಾರ ಸ್ವೀಕರಿಸಿದರು. ನಂತರ ಈ ಪದವಿಗೆ ಬಂದ ಗಿಯಾನಿ ಜೈಲ್ ಸಿಂಗ್, ಆರ್.ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಅವರು ಅದೇ ದಿನಾಂಕದಂದು ಅಂದರೆ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
Published On - 8:20 am, Mon, 25 July 22