ಇಡಿಯಿಂದ 10 ತಾಸು ರಾಹುಲ್ ಗಾಂಧಿ ವಿಚಾರಣೆ: ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಸಮನ್ಸ್
ರಾಹುಲ್ ಗಾಂಧಿ ಮತ್ತು ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಸೂಚಿಸಿದೆ.
ದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (Enforcement Directorate – ED) ಸೋಮವಾರ (ಜೂನ್ 13) ಸತತ 10 ತಾಸುಗಳ ಅವಧಿಗೆ ಸುದೀರ್ಘ ವಿಚಾರಣೆ ನಡೆಸಿತು. ಇಂದು (ಜೂನ್ 14) ಸಹ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿ ಅವರು ಇಡಿ ನೊಟೀಸ್ ಜಾರಿ ಮಾಡಿದೆ. ರಾಹುಲ್ ಗಾಂಧಿ ಮತ್ತು ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಸೂಚಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಲಿಮಿಟೆಡ್ ಮೇಲೆ ಸಲ್ಲಿಕೆಯಾಗಿರುವ ಖಾಸಗಿ ದೂರು ಆಧರಿಸಿ ಇಡಿ ವಿಚಾರಣೆ ನಡೆಸುತ್ತಿದೆ.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನಲ್ಲಿ ಮೋಸ, ಸಂಚುಗಾರಿಕೆ ಮತ್ತು ನಂಬಿಕೆದ್ರೋಹ ನಡೆದಿದೆ ಎಂದು ಖಾಸಗಿ ದೂರಿನಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಪಕ್ಷವು ಇದು ಬಿಜೆಪಿಯ ಪ್ರತಿಕಾರ ರಾಜಕೀಯದ ಭಾಗ ಎಂದು ಹೇಳಿದೆ. ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಪ್ರತಿರೋಧ, ಪ್ರತಿಭಟನೆಯ ನಡುವೆಯೂ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಇಡಿ ನಡೆಸಿತು. ಇಡಿ ಕ್ರಮ ವಿರೋಧಿಸಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಇಡಿ ಕಚೇರಿಗಳ ಎದುರು ಪ್ರತಿಭಟನೆ ಆಯೋಜಿಸಿದೆ. ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರು ಗಾಂಧಿ ಅವರೊಂದಿಗೆ ಇಡಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿದರು.
ಕಾಂಗ್ರೆಸ್ನ ಪಾದಯಾತ್ರೆಗೆ ಅನುಮತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಇದನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಹಿರಿಯ ನಾಯಕರಾದ ಪಿ.ಚಿದಂಬರಮ್, ಆಧಿರ್ ರಂಜನ್ ಚೌಧರಿ, ಕೆ.ಸಿ.ವೇಣುಗೋಪಾಲ್, ದೀಪೆಂದರ್ ಹೂಡಾ ಮತ್ತು ಜೈರಾಮ್ ರಮೇಶ್ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದ್ದರು.
ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂಬ ದೂರುಗಳು ಕೇಳಿ ಬಂದವು. ವೇಣುಗೋಪಾಲ್ ಅವರನ್ನು ಪೊಲೀಸರು ಅಕ್ಷರಶಃ ಎತ್ತಿಕೊಂಡು ಹೋದರು. ಚಿದಂಬರಂ ಅವರ ಕೈ ಮೂಳೆ ಮುರಿಯಿತು. ಪ್ರಮೋದ್ ತಿವಾರಿ ಅವರ ತಲೆಗೆ ಪೆಟ್ಟು ಬಿದ್ದಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಹೇಳಿದರು.
ಅಶೋಕ್ ಗೆಹ್ಲೋಟ್ ಖಂಡನೆ
ರಾತ್ರಿ 11 ಗಂಟೆಯವರೆಗೂ ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ ನಡೆಸಿರುವುದನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದರು. ಯಾರನ್ನೇ ಆದರೂ ಮಧ್ಯರಾತ್ರಿ ತನಕ ಪ್ರಶ್ನಿಸುವುದು ತಪ್ಪು. ಕಾನೂನು ಎಲ್ಲರಿಗೂ ಒಂದೇ. ಜನರನ್ನ ಹೀಗೆ ನಡೆಸಿಕೊಳ್ಳಬೇಡಿ ಎಂದು ಮೋದಿಗೆ ಹೇಳುತ್ತೇನೆ. ಹೀಗೆ ನಡೆಸಿಕೊಂಡರೆ ದೇಶದ ಜನ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:26 am, Tue, 14 June 22