Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕನಾಥ್ ಶಿಂಧೆ ಅಧಿಕಾರಕ್ಕೇರಲು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ, ಅವರು ರಾಜೀನಾಮೆ ನೀಡಲಿ: ಉದ್ಧವ್ ಠಾಕ್ರೆ

Uddhav Thackeray: ಸುಪ್ರೀಂಕೋರ್ಟ್ ತೀರ್ಪಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ ಶಿಂಧೆ ಬಣದ ಶಾಸಕರು ನನ್ನ ಪಕ್ಷಕ್ಕೆ ಮತ್ತು ನನ್ನ ತಂದೆಯ ಪರಂಪರೆಗೆ ದ್ರೋಹ ಮಾಡಿದ್ದಾರೆ, ಆಗ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾನೂನುಬದ್ಧವಾಗಿ ತಪ್ಪಾಗಿರಬಹುದು, ಆದರೆ ನಾನು ಅದನ್ನು ನೈತಿಕ ಆಧಾರದ ಮೇಲೆ ಮಾಡಿದ್ದೇನೆ

ಏಕನಾಥ್ ಶಿಂಧೆ ಅಧಿಕಾರಕ್ಕೇರಲು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ, ಅವರು ರಾಜೀನಾಮೆ ನೀಡಲಿ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
ರಶ್ಮಿ ಕಲ್ಲಕಟ್ಟ
|

Updated on: May 11, 2023 | 4:26 PM

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅಧಿಕಾರಕ್ಕೇರಲು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಉದ್ಧವ್ ಠಾಕ್ರೆ(Uddhav Thackeray) ಹೇಳಿದ್ದಾರೆ. ಪ್ರಜಾಪ್ರಭುತ್ವವನ್ನು ಕೊಂದ ನಂತರ ಏಕನಾಥ್ ಶಿಂಧೆ ಗೆದ್ದಿದ್ದಾರೆ. ಅವರು ಮತ್ತು ಅವರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಯಾವುದೇ ನೈತಿಕತೆಯನ್ನು ಹೊಂದಿದ್ದರೆ, ಅವರು ರಾಜೀನಾಮೆ ನೀಡಬೇಕು ಎಂದಿದ್ದಾರೆ ಠಾಕ್ರೆ. ಸುಪ್ರೀಂಕೋರ್ಟ್ ತೀರ್ಪಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ ಶಿಂಧೆ ಬಣದ ಶಾಸಕರು ನನ್ನ ಪಕ್ಷಕ್ಕೆ ಮತ್ತು ನನ್ನ ತಂದೆಯ ಪರಂಪರೆಗೆ ದ್ರೋಹ ಮಾಡಿದ್ದಾರೆ, ಆಗ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾನೂನುಬದ್ಧವಾಗಿ ತಪ್ಪಾಗಿರಬಹುದು, ಆದರೆ ನಾನು ಅದನ್ನು ನೈತಿಕ ಆಧಾರದ ಮೇಲೆ ಮಾಡಿದ್ದೇನೆ. ಬೆನ್ನಿಗೆ ಚೂರಿ ಹಾಕುವವರನ್ನಿಟ್ಟುಕೊಂಡು ನಾನು ಹೇಗೆ ಸರ್ಕಾರ ನಡೆಸಬೇಕಿತ್ತು ಎಂದು ಕೇಳಿದ್ದಾರೆ.

ಕಳೆದ ವರ್ಷದ ಶಿವಸೇನಾ ಬಂಡಾಯಕ್ಕೆ ಸಂಬಂಧಿಸಿದಂತೆ ಠಾಕ್ರೆ ಅವರಿಗೆ ಹಿನ್ನಡೆಯಾಗಿದ್ದು, ಶಿಂಧೆ ಅವರು ತಮ್ಮ ಮಾಜಿ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದ ನಂತರ ಆಗಿನ ರಾಜ್ಯಪಾಲರ ಕಾನೂನುಬಾಹಿರ ನಿರ್ಧಾರದಿಂದ ಲಾಭ ಪಡೆದರೂ ಶಿಂಧೆ ಅವರು ತಮ್ಮ ಕೆಲಸವನ್ನು ಉಳಿಸಿಕೊಳ್ಳುತ್ತಾರೆ ಎಂದು ಗುರುವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಕಳೆದ ವರ್ಷ ಜೂನ್ 30 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರದ ಮಾಜಿ ಗವರ್ನರ್ ಬಿಎಸ್ ಕೊಶ್ಯಾರಿ ಕರೆ ನೀಡಿರುವುದು ಸಮರ್ಥನೀಯವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಅವರು ವಿಶ್ವಾಸಮತ ಎದುರಿಸದ ಕಾರಣ ಮತ್ತು ರಾಜೀನಾಮೆ ನೀಡಿದ ಕಾರಣ ಸರ್ಕಾರವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ.

ಇದನ್ನೂ ಓದಿ: ವಿಪಕ್ಷ ಜೋಡೋ ಮಿಷನ್: ಮುಂಬೈನಲ್ಲಿ ಉದ್ಧವ್ ಠಾಕ್ರೆಯನ್ನು ಭೇಟಿ ಮಾಡಿದ ನಿತೀಶ್ ಕುಮಾರ್

ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಮನವಿಯನ್ನು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸರ್ವಾನುಮತದ ತೀರ್ಪು ನೀಡಿದೆ. ಆದಾಗ್ಯೂ, ಠಾಕ್ರೆ ಅವರು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸದೆ ರಾಜೀನಾಮೆ ನೀಡಿದ್ದರಿಂದ, ಸದನದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಸಹಾಯದಿಂದ ಶಿಂಧೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಲ್ಲಿ ರಾಜ್ಯಪಾಲರು ಸಮರ್ಥನೆಯನ್ನು ಹೊಂದಿದ್ದಾರೆ ಎಂದು ಅದು ಹೇಳಿದೆ.

ಉದ್ಧವ್ ಹೇಳಿಕೆಗೆ ಪ್ರತಿಕ್ರಿಯಿದ ಫಡ್ನವಿಸ್, ಶಿಂಧೆ

ನೈತಿಕತೆಯ ಬಗ್ಗೆ ಮಾತನಾಡುವುದು ಉದ್ಧವ್ ಠಾಕ್ರೆ ಅವರಿಗೆ ಸರಿಹೊಂದುವುದಿಲ್ಲ. ಅವರು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸೇರಿ ಮುಖ್ಯಮಂತ್ರಿ ಆದಾಗ ಅವರು ತಮ್ಮ ನೈತಿಕತೆಯನ್ನು ಮರೆತಿದ್ದೀರಾ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಅವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಲಿಲ್ಲ, ಆದರೆ ಅವರೊಂದಿಗಿದ್ದ ಜನರು ಅವರನ್ನು ತೊರೆದ ನಂತರ ಭಯದಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಹೇಳಿದ್ದಾರೆ.

ಇದು ಬಾಬಾಸಾಹೇಬ್ ಠಾಕ್ರೆಯವರ ದೂರದೃಷ್ಟಿ, ಶಿವಸೇನಾದ ಚಿಂತನೆ ಮತ್ತು ನಮ್ಮ ಸರ್ಕಾರದ ಬಗ್ಗೆ ಸಾಮಾನ್ಯ ಜನರು ಹೊಂದಿದ್ದ ಭಾವನೆಗಳ ಗೆಲುವು. ಇದು ಚುನಾವಣೆಯಲ್ಲಿ ಜನ ನೀಡಿದ ಜನಾದೇಶದ ಯಶಸ್ಸು. ಬಾಳಾಸಾಹೇಬ್ ಠಾಕ್ರೆ ಅವರ ಚಿಂತನೆಯ ಪ್ರಕಾರ, ಕಿರುಕುಳ ನೀಡಲು ಪ್ರಯತ್ನಿಸಿದವರಿಗೆ ಇಂದು ಸುಪ್ರೀಂ ಆದೇಶದ ಮೂಲಕ ತಕ್ಕ  ಪ್ರತಿಕ್ರಿಯೆ ನೀಡಲಾಗಿದೆ ಎಂದು ಮಹಾ ಸಿಎಂ ಏಕನಾಥ್ ಶಿಂಧೆ  ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ