ಮೋದಿ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮೈತ್ರಿ ಬಯಸಿದ್ದರು; ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ
ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆಯಾಚಿಸಿದ್ದರು ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ನಂತರ ಯಾಕೋ ಹಿಂದೆ ಸರಿದರು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಏಕನಾಥ್ ಶಿಂಧೆ ಮಹಾ ವಿಕಾಸ್ ಅಘಾಡಿ (ಎಂವಿಎ)ಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂಬೈ, (ಮಾರ್ಚ್ 18): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು ವಿಧಾನ ಪರಿಷತ್ತಿನಲ್ಲಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಕ್ಷಮೆ ಯಾಚಿಸಿದ್ದರು. ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಬಯಕೆಯನ್ನು ಉದ್ಧವ್ ಠಾಕ್ರೆ ವ್ಯಕ್ತಪಡಿಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಮುಂಬೈಗೆ ಹಿಂದಿರುಗಿದ ನಂತರ ಉದ್ಧವ್ ಠಾಕ್ರೆ ತಮ್ಮ ಮಾತನ್ನು ಹಿಂತೆಗೆದುಕೊಂಡರು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ- ಪಿಎಂ ಮೋದಿ ಭೇಟಿಯ ಕುರಿತು ಏಕನಾಥ್ ಶಿಂಧೆ ನೀಡಿದ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಇದೊಂದು “ಒಳಗಿನ ಕಥೆ” ಎಂದು ಕರೆದಿದ್ದನ್ನು ಬಹಿರಂಗಪಡಿಸಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, “ಉದ್ಧವ್ ಠಾಕ್ರೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, ‘ದಯವಿಟ್ಟು ನನ್ನನ್ನು ಕ್ಷಮಿಸಿ. ನಾವು ಮತ್ತೆ ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ’ ಎಂದು ಹೇಳಿದ್ದರು. ಆದರೆ ಮುಂಬೈಗೆ ಹಿಂದಿರುಗಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದರು.” ಎಂದಿದ್ದಾರೆ.
ಇದನ್ನೂ ಓದಿ: ನನ್ನನ್ನು ಹಗುರವಾಗಿ ಪರಿಗಣಿಸಬೇಡಿ; ಸಿಎಂ ಫಡ್ನವೀಸ್ ಜೊತೆಗಿನ ಶೀತಲ ಸಮರದ ವದಂತಿ ಬೆನ್ನಲ್ಲೇ ಏಕನಾಥ್ ಶಿಂಧೆ ಅಚ್ಚರಿಯ ಹೇಳಿಕೆ
ಶಿವಸೇನೆ (ಯುಬಿಟಿ) ನಾಯಕ ಅನಿಲ್ ಪರಬ್ ಕೂಡ ಬಿಜೆಪಿ ಜೊತೆ ಇದೇ ರೀತಿಯ ಹಿಂಬಾಗಿಲಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದರು ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. “ಅನಿಲ್ ಪರಬ್, ನೀವು ನೋಟಿಸ್ ಸ್ವೀಕರಿಸಿದಾಗ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಹೋಗಿದ್ದೀರಿ. ಆ ಪ್ರಕರಣದಿಂದ ನಿಮ್ಮನ್ನು ರಕ್ಷಿಸುವಂತೆ ನೀವು ಕೇಳಿಕೊಂಡಿದ್ದೀರಿ. ಆದರೆ, ನಿಮಗೆ ಪರಿಹಾರ ಸಿಕ್ಕ ನಂತರ ನೀವು ಪಕ್ಷ ಬದಲಾಯಿಸಿದ್ದೀರಿ. ಇದು ನನಗೆ ಚೆನ್ನಾಗಿ ತಿಳಿದಿದೆ.” ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
“ಆದರೆ, ನಾವು ನಿಮ್ಮಂತೆ ರಹಸ್ಯವಾಗಿ ಅಲ್ಲ, ಬಹಿರಂಗವಾಗಿ ನಿಲುವು ತೆಗೆದುಕೊಂಡಿದ್ದೇವೆ” ಎಂದಿರುವ ಏಕನಾಥ್ ಶಿಂಧೆ ಮಹಾ ವಿಕಾಸ್ ಅಘಾಡಿ (ಎಂವಿಎ)ಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಬಣವು ಠಾಕ್ರೆಗಿಂತ ಭಿನ್ನವಾಗಿ ಪಾರದರ್ಶಕವಾಗಿ ವರ್ತಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕನಾಥ್ ಶಿಂಧೆ ಯುಗಾಂತ್ಯ, ಇನ್ನೆಂದೂ ಅವರು ಸಿಎಂ ಆಗಲು ಅಸಾಧ್ಯ; ಸಂಜಯ್ ರಾವತ್
“ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ನಾವು ಗುಟ್ಟಾಗಿ ಏನನ್ನೂ ಮಾಡಲಿಲ್ಲ. ಬಿಲ್ಲು-ಬಾಣದ ಸಂಕೇತವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ನಿಲುವು ತೆಗೆದುಕೊಂಡೆವು. ನೀವು ಔರಂಗಜೇಬ್ ಅವರ ಸಿದ್ಧಾಂತವನ್ನು ಸ್ವೀಕರಿಸಿದಾಗ, ನಾವು ನಿಮ್ಮ ಬಂಡಿಯನ್ನು ಉರುಳಿಸಿದೆವು” ಎಂದು ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಬಣದ ವಿರುದ್ಧ ಸದನದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




