ನನ್ನನ್ನು ಹಗುರವಾಗಿ ಪರಿಗಣಿಸಬೇಡಿ; ಸಿಎಂ ಫಡ್ನವೀಸ್ ಜೊತೆಗಿನ ಶೀತಲ ಸಮರದ ವದಂತಿ ಬೆನ್ನಲ್ಲೇ ಏಕನಾಥ್ ಶಿಂಧೆ ಅಚ್ಚರಿಯ ಹೇಳಿಕೆ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗಿನ ಶೀತಲ ಸಮರದ ಬೆನ್ನಲ್ಲೇ ಡಿಸಿಎಂ ಏಕನಾಥ್ ಶಿಂಧೆ 'ನನ್ನನ್ನು ಹಗುರವಾಗಿ ಪರಿಗಣಿಸಬೇಡಿ' ಎಂಬ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ನಡುವಿನ ಭಿನ್ನಾಭಿಪ್ರಾಯದ ಕುರಿತು ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ 'ನನ್ನನ್ನು ಹಗುರವಾಗಿ ಪರಿಗಣಿಸಬೇಡಿ' ಎಂಬ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ "ಶೀತಲ ಸಮರ" ನಡೆಯುತ್ತಿಲ್ಲ ಎಂದು ಸಿಎಂ ಏಕನಾಥ್ ಶಿಂಧೆ ಪ್ರತಿಪಾದಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮನ್ನು ಹಗುರವಾಗಿ ಪರಿಗಣಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ, “ನನ್ನನ್ನು ಹಗುರವಾಗಿ ಪರಿಗಣಿಸಬೇಡಿ. ನನ್ನನ್ನು ಹಗುರವಾಗಿ ಪರಿಗಣಿಸಿರುವವರಿಗೆ ನಾನು ಈಗಾಗಲೇ ಈ ಮಾತನ್ನು ಹೇಳಿದ್ದೇನೆ. ನಾನು ಸಾಮಾನ್ಯ ಪಕ್ಷದ ಕಾರ್ಯಕರ್ತನೇ ಆಗಿರಬಹುದು. ಆದರೆ ನಾನು ಬಾಳಾ ಸಾಹೇಬರ ಅನುಯಾಯಿ. ಯಾರೂ ನನ್ನನ್ನು ಹಗುರವಾಗಿ ಪರಿಗಣಿಸುವಂತಿಲ್ಲ” ಎಂದಿದ್ದಾರೆ.
2022ರಲ್ಲಿ ಜನರು ನನ್ನನ್ನು ಹಗುರವಾಗಿ ಪರಿಗಣಿಸಿದಾಗ ಕುದುರೆ ತಿರುಗಿತು, ನಾನು ಸರ್ಕಾರವನ್ನು ಬದಲಾಯಿಸಿದೆ ಎಂದು ಏಕನಾಥ್ ಶಿಂಧೆ ಹೇಳಿರುವುದು ಮಹಾ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆಯೇ? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
“ನಾವು ಸಾಮಾನ್ಯ ಜನರ ಆಶಯದ ಸರ್ಕಾರವನ್ನು ತಂದಿದ್ದೇವೆ. ವಿಧಾನಸಭೆಯಲ್ಲಿ ನನ್ನ ಮೊದಲ ಭಾಷಣದಲ್ಲಿ ದೇವೇಂದ್ರ ಫಡ್ನವೀಸ್ ಅವರು 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೆ ಎಂದು ನಾನು ಹೇಳಿದ್ದೆ. ನಮಗೆ 232 ಸ್ಥಾನಗಳು ಸಿಕ್ಕವು. ಅದಕ್ಕಾಗಿಯೇ ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ನಾನು ಹೇಳುತ್ತಿದ್ದೇನೆ. ಈ ಸುಳಿವನ್ನು ಅರ್ಥಮಾಡಿಕೊಳ್ಳಲು ಬಯಸುವವರು ಅದನ್ನು ಅರ್ಥಮಾಡಿಕೊಳ್ಳಬೇಕು. ನಾನು ನನ್ನ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ; ಪೊಲೀಸರಿಂದ ತನಿಖೆ ಆರಂಭ
ಬಿಜೆಪಿ ನೇತೃತ್ವದ ಮೂರು ಪಕ್ಷಗಳ ಒಕ್ಕೂಟವು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದು, ಸರ್ಕಾರ ರಚಿಸಿತ್ತು. ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿದ್ದರಿಂದ ಮುಖ್ಯಮಂತ್ರಿ ಹುದ್ದೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪಾಲಾಗಿತ್ತು. ಈ ಮೊದಲು ಸಿಎಂ ಆಗಿದ್ದ ಏಕನಾಥ್ ಶಿಂಧೆ ಡಿಸಿಎಂ ಆಗಿ ಹಿಂಬಡ್ತಿ ಪಡೆದಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರದಲ್ಲಿ ಅಸಮಾಧಾನ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಆದರೆ, ಫಡ್ನವೀಸ್ ಮತ್ತು ಶಿಂಧೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




