ನೀತಿ ಸಂಹಿತೆ ಉಲ್ಲಂಘನೆ ದೂರು; ಬಿಜೆಪಿ, ಕಾಂಗ್ರೆಸ್‌ಗೆ ಚುನಾವಣಾ ಆಯೋಗ ನೋಟಿಸ್‌

|

Updated on: Nov 16, 2024 | 8:27 PM

ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕ ಪತ್ರಗಳನ್ನು ಕಳುಹಿಸಿದ್ದು, ಪ್ರತಿ ಪಕ್ಷದವರು ಸಲ್ಲಿಸಿದ ದೂರಿಗೆ ಪ್ರತಿಕ್ರಿಯಿಸುವಂತೆ ಕೇಳಿದೆ. ಇಸಿಐ ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಉತ್ತರ ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೂಚನೆ ನೀಡಿದೆ.

ನೀತಿ ಸಂಹಿತೆ ಉಲ್ಲಂಘನೆ ದೂರು; ಬಿಜೆಪಿ, ಕಾಂಗ್ರೆಸ್‌ಗೆ ಚುನಾವಣಾ ಆಯೋಗ ನೋಟಿಸ್‌
ಮಲ್ಲಿಕಾರ್ಜುನ ಖರ್ಗೆ- ಜೆ.ಪಿ. ನಡ್ಡಾ
Follow us on

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರರ ವಿರುದ್ಧ ಸಲ್ಲಿಸಿದ ದೂರುಗಳನ್ನು ಚುನಾವಣಾ ಆಯೋಗವು ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕ ಪತ್ರವನ್ನು ಚುನಾವಣಾ ಆಯೋಗ ಕಳುಹಿಸಿದೆ. ಪ್ರತಿಸ್ಪರ್ಧಿ ಪಕ್ಷದ ದೂರುಗಳಿಗೆ ಅವರ ಪ್ರತಿಕ್ರಿಯೆಯನ್ನು ಕೇಳಿದೆ.

ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ನವೆಂಬರ್ 11ರಂದು ಬಿಜೆಪಿ ಸಲ್ಲಿಸಿದ ದೂರನ್ನು ಚುನಾವಣಾ ಸಂಸ್ಥೆಯು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ನಮೂದಿಸಿದೆ. ಅದೇ ರೀತಿ, ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು ನವೆಂಬರ್ 13ರಂದು ಕಾಂಗ್ರೆಸ್ ಸಲ್ಲಿಸಿದ 2 ದೂರುಗಳನ್ನು ಗಮನಿಸಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: 17 ವರ್ಷಗಳ ನಂತರ ನೈಜೀರಿಯಾಕ್ಕೆ , 50 ವರ್ಷಗಳ ನಂತರ ಗಯಾನಾಕ್ಕೆ, ಮೂರು ದೇಶಕ್ಕೆ ಪ್ರಧಾನಿ ಮೋದಿ ಪ್ರವಾಸ

ಬಿಜೆಪಿಯ ದೂರು ಏನು?:

ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಔಪಚಾರಿಕ ಪ್ರತಿಕ್ರಿಯೆ ಸಲ್ಲಿಸುವಂತೆ ಎರಡೂ ಪಕ್ಷದ ವರಿಷ್ಠರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಸಂವಿಧಾನದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.


ಕಾಂಗ್ರೆಸ್​ನ ದೂರು ಏನು?:

ಕಾಂಗ್ರೆಸ್ ಕೂಡ ಎರಡು ದೂರುಗಳನ್ನು ಸಲ್ಲಿಸಿದೆ. ಒಂದು ದೂರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತು ಇನ್ನೊಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಲಾಗಿದೆ. ಅವರು ಚುನಾವಣೆಗೆ ಒಳಪಟ್ಟಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ “ಸುಳ್ಳು” ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ: ಬಿಎಸ್ ಯಡಿಯೂರಪ್ಪ

ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ನವೆಂಬರ್ 20ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ