Assembly Election 2021: ಕೊವಿಡ್ ಲಸಿಕೆ ಸರ್ಟಿಫಿಕೇಟ್ನಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚನೆ
Covid Vaccine ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಂದಲೂ ಕ್ರೆಡಿಟ್ ಪಡೆಯುತ್ತಿದ್ದಾರೆ ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ದೆಹಲಿ: ದೇಶದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರೂ ತೆಗೆದುಕೊಂಡಿದ್ದಾರೆ. ಹೀಗೆ ಕೊರೊನಾ ಲಸಿಕೆ (Covid ಪಡೆದವರಿಗೆ ಒಂದು ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತಿದ್ದು ಅದರ ಕೆಳಗೆ ಮೂಲೆಯಲ್ಲಿ ಮೋದಿಯವರ ಫೋಟೋ ಇದೆ. ಇದರ ಬಗ್ಗೆ ಈಗಾಗಲೇ ಪ್ರತಿಪಕ್ಷಗಳು ಆಕ್ಷೇಪವನ್ನೂ ಎತ್ತಿವೆ. ಲಸಿಕೆ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಬ್ಲಿಸಿಟಿ ಪಡೆಯುತ್ತಿದ್ದಾರೆ ಎಂದೂ ಆರೋಪಿಸುತ್ತಿವೆ. ಅದರಲ್ಲಿ ತೃಣಮೂಲ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣಾ ಆಯೋಗಕ್ಕೆ ಕೂಡ ದೂರು ಕೊಟ್ಟಿದ್ದರು. ಅದರ ಪರಿಣಾಮವಾಗಿ, ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ನೀಡುವ ಡಿಜಿಟಲ್ ಸರ್ಟಿಫಿಕೇಟ್ನಲ್ಲಿ ಮೋದಿ ಫೋಟೋವನ್ನು ತೆಗೆಯಬೇಕು ಎಂದು ಚುನಾವಣಾ ಆಯೋಗ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗದ ಆದೇಶದ ಅನ್ವಯ ಈ ಎಲ್ಲ ರಾಜ್ಯಗಳಲ್ಲಿ ಲಸಿಕೆ ಪಡೆಯುವವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹಾಕುವಂತಿಲ್ಲ.
ಚುನಾವಣೆ ಹತ್ತಿರ ಬರುತ್ತಿದೆ. ಈ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಲಸಿಕೆ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಂದಲೂ ಕ್ರೆಡಿಟ್ ಪಡೆಯುತ್ತಿದ್ದಾರೆ. ಹಾಗಾಗಿ ಅವರ ಫೋಟೋವನ್ನು ಸರ್ಟಿಫಿಕೇಟ್ನಿಂದ ತೆಗೆಯಬೇಕು ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಆರೋಗ್ಯ ಇಲಾಖೆಗೆ ಪತ್ರ ಬರೆದ EC, ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಪುದುಚೇರಿಗಳಲ್ಲಿ ಫೆ.26ರಿಂದ ನೀತಿ ಸಂಹಿತೆ ಜಾರಿಯಾಗಿದೆ. ಅದರ ಅನ್ವಯ ಪ್ರಧಾನಿ ಮೋದಿಯವರ ಫೋಟೋ ಸರ್ಟಿಫಿಕೇಟ್ನಲ್ಲಿ ಇರುವಂತಿಲ್ಲ ಎಂದು ತಿಳಿಸಿದೆ.
ಎರಡು ಲಸಿಕೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದಾಗಲೂ ಪ್ರತಿಪಕ್ಷಗಳು ಬಿಜೆಪಿ ಲಸಿಕೆ ಎಂದು ಹೇಳಿದ್ದವು. ಲಸಿಕೆ ಹೆಸರಲ್ಲಿ ಕೇಂದ್ರ ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದೂ ಆರೋಪಿಸಿದ್ದವು.
ಇದನ್ನೂ ಓದಿ: ಕೊವಿಡ್ ಲಸಿಕೆ ಬಗ್ಗೆ ನಿಮಗೆ ಗೊತ್ತಿರಬೇಕಾದ Top 9 ಸಂಗತಿಗಳು