ಕೊವಿಡ್ ಲಸಿಕೆ ಬಗ್ಗೆ ನಿಮಗೆ ಗೊತ್ತಿರಬೇಕಾದ Top 9 ಸಂಗತಿಗಳು
ಕೊರೊನಾ ಲಸಿಕೆ ಸುರಕ್ಷಿತವೇ? ಸಾರ್ವಜನಿಕರಿಗೆ ಯಾವಾಗ ಲಸಿಕೆ ಸಿಗಲಿದೆ? ಲಸಿಕೆಯನ್ನು ಹೇಗೆ ನೀಡಲಾಗುತ್ತದೆ? ಮೊದಲ ಹಂತದಲ್ಲಿ ಅದಕ್ಕೆ ತಗುಲುವ ವೆಚ್ಚವೇನು? ಇತ್ಯಾದಿ ಅನುಮಾನಗಳಿಗೆ ಬಗೆಹರಿಸಲು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.
ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದೆ. ಇಂದು ಕೊರೊನಾ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಆದರೆ, ಲಸಿಕೆ ಕುರಿತು ಹಲವರಿಗೆ ಹಲವು ಬಗೆಯ ಅನುಮಾನಗಳು ಇನ್ನೂ ಬಾಕಿ ಉಳಿದಿರುವುದರಿಂದ ಅವುಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರಕಟಿಸಿದ ಕೆಲ ಅಂಶಗಳು ಹೀಗಿವೆ.
1. ಯಾವುದೇ ಲಸಿಕೆ ಬಳಕೆಗೆ ಲಭ್ಯವಾಗುವ ಮುನ್ನ ಅದನ್ನು ನಿರ್ದಿಷ್ಟ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ. ಅದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ ಮತ್ತು ಸಂಬಂಧಿಸಿದ ರೋಗದ ವಿರುದ್ಧ ಸಶಕ್ತವಾಗಿ ಹೋರಾಡಬಲ್ಲದು ಎಂದು ವೈಜ್ಞಾನಿಕವಾಗಿ ಸಾಬೀತಾದ ನಂತರವಷ್ಟೇ ಬಳಸಲು ಅನುಮತಿ ನೀಡಲಾಗುವುದು. ಆದ್ದರಿಂದ, ಈಗ ಕೊಡಮಾಡುವ ಕೊರೊನಾ ಲಸಿಕೆಗಳ ಬಗ್ಗೆ ಇಲ್ಲಸಲ್ಲದ ಭಯ ಬೇಡ. 2. ದೇಶದೆಲ್ಲೆಡೆ ಸಮಾನವಾಗಿ ಮತ್ತು ನ್ಯಾಯೋಚಿತವಾಗಿ ಕೊರೊನಾ ಲಸಿಕೆ ಹಂಚಿಕೆ ಮಾಡಲು ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
3. ಭಾರತ ದೇಶ ವಿಶ್ವದಲ್ಲೇ ಅತಿದೊಡ್ಡ ಮಟ್ಟದಲ್ಲಿ ಲಸಿಕೆ ವಿತರಿಸುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷವೂ ಅಂದಾಜು 2.7 ಕೋಟಿ ನವಜಾತು ಶಿಶುಗಳಿಗೆ ಭಾರತದಲ್ಲಿ ವಿವಿಧ ರೀತಿಯ ಲಸಿಕೆ ನೀಡಲಾಗುತ್ತದೆ. ಕೊರೊನಾ ಲಸಿಕೆ ವಿತರಣೆ ವಿಚಾರದಲ್ಲೂ ನಮ್ಮ ದೇಶ ಅತಿ ಹೆಚ್ಚು ಜನರನ್ನು ತಲುಪಲಿದೆ.
4. ಲಸಿಕೆ ಹಂಚಿಕೆ ವಿಚಾರದಲ್ಲಿ ಭಾರತಕ್ಕಿರುವ ಅಗಾಧ ಅನುಭವ ಮತ್ತು ನಾವು ಈಗಾಗಲೇ ಅನುಸರಿಸುತ್ತಿರುವ ಅತ್ಯಂತ ಸುರಕ್ಷಿತ ಮಾರ್ಗಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶವನ್ನೂ ನೀಡಲಾಗಿದೆ.
5. ಕೊರೊನಾ ಲಸಿಕೆ ವಿತರಣೆಯಲ್ಲಿ ನಿರ್ದಿಷ್ಟ ವಯೋಮಾನದವರಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಹಂತ ಹಂತವಾಗಿ ವಿಸ್ತರಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ದೇಶದ ಎಲ್ಲರನ್ನೂ ತಲುಪಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ ಮತ್ತು ಅತಿ ಶೀಘ್ರದಲ್ಲಿ ಅದನ್ನು ಜನರಿಗೆ ವಿವರಿಸಲಾಗುವುದು.
6. ಆದ್ಯತೆಯ ವರ್ಗದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್ಲೈನ್ ವಾರಿಯರ್ಸ್ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಇರಲಿದ್ದಾರೆ. ಆದ್ದರಿಂದ ಮೊದಲು ಇವರುಗಳಿಗೆ ಕೊರೊನಾ ಲಸಿಕೆ ನೀಡಲಾಗುವುದು.
7. ಈಗ ವಿತರಿಸಲಾಗುವ ಕೊರೊನಾ ಲಸಿಕೆಗಳು ದೇಹದಲ್ಲಿ ಕೊರೊನಾ ವೈರಾಣುವಿನ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲಿದ್ದು, ಕೊವಿಡ್ ರೋಗದಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
8. ಈ ಲಸಿಕೆಗಳನ್ನು ಚುಚ್ಚುಮದ್ದುಗಳ ಮೂಲಕ ನೀಡಲಾಗುತ್ತದೆ. ಚುಚ್ಚುಮದ್ದು ನೀಡುವವರಿಗೆ ಈಗಾಗಲೇ ಸೂಕ್ತ ತರಬೇತಿಯನ್ನು ನೀಡಲಾಗಿದೆ.
9. ಮೊದಲ ಹಂತದಲ್ಲಿ ಕೊರೊನಾ ಲಸಿಕೆ ಸ್ವೀಕರಿಸುವವರೆಲ್ಲರಿಗೂ ಉಚಿತವಾಗಿ ಲಸಿಕೆ ವಿತರಣೆ ಮಾಡಲಾಗುವುದು. ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಕೊವಿಶೀಲ್ಡ್, ಕೊವ್ಯಾಕ್ಸಿನ್ ಬೆನ್ನ ಹಿಂದೆಯೇ ಭಾರತಕ್ಕೆ ಬರಲಿವೆ ಇನ್ನಷ್ಟು ಕೊರೊನಾ ಲಸಿಕೆಗಳು
Published On - 11:19 am, Tue, 12 January 21